For Quick Alerts
ALLOW NOTIFICATIONS  
For Daily Alerts

ಸ್ತ್ರೀ ಹಾಗೂ ಪುರುಷರ ನಡುವೆ ಖರ್ಚಿನ ಭಿನ್ನತೆ ಹೇಗಿದೆ?

By Super
|

ಒಂದು ಆಂಗ್ಲ ಸುಭಾಷಿತ ಹೀಗಿದೆ. ಪುರುಷ ತನಗೆ ಅಗತ್ಯವಿರುವ ಹತ್ತು ರೂಪಾಯಿಯ ಒಂದು ವಸ್ತುವನ್ನು ಹತ್ತು ರೂಪಾಯಿ ಕೊಟ್ಟು ಕೊಂಡುಕೊಳ್ಳುತ್ತಾನೆ. ಮಹಿಳೆ ಅಗತ್ಯವಿಲ್ಲದಿದ್ದರೂ ಆಫರ್‌ನಲ್ಲಿದ್ದ ಆ ಹದಿನೈದು ರೂಪಾಯಿಗಳ ವಸ್ತುವನ್ನು ಹತ್ತು ರೂಪಾಯಿಗೆ ಕೊಂಡು ತರುತ್ತಾಳೆ. ಇದರಿಂದ ಪುರುಷರ ಮತ್ತು ಮಹಿಳೆಯರ ಕೊಳ್ಳುವ ಮನಃಸ್ಥಿತಿ ಬೇರೆ ರೀತಿ ಇದೆ ಎಂದು ಅರ್ಥೈಸಿಕೊಳ್ಳಬಹುದು.

ಸಾಮಾನ್ಯವಾಗಿ ಒಂದು ವಿಷಯದ ಮೇಲೆ ಪುರುಷರು ಮತ್ತು ಮಹಿಳೆಯರು ಒಮ್ಮತಕ್ಕೆ ಬರುವುದು ಅಪರೂಪ. ಖರ್ಚಿನ ವಿಷಯಕ್ಕೆ ಬಂದರೆ ಪುರುಷರು ಅನಗತ್ಯವಾಗಿ ಖರ್ಚು ಮಾಡುತ್ತಾರೆಂದು ಮಹಿಳೆಯರೂ, ಮಹಿಳೆಯರ ಖರ್ಚಿಗೆ ತಾಳಮೇಳ ಇಲ್ಲವೆಂದು ಗಂಡಸರೂ ಒಬ್ಬರ ಮೇಲೊಬ್ಬರು ಗೂಬೆ ಕೂರಿಸುತ್ತಾರೆ. ಆದರೆ ಇಬ್ಬರ ಮನಸ್ಸಿನಲ್ಲೂ ಕೊಂಡುಕೊಳ್ಳಬಯಸುವ ವಸ್ತುಗಳನ್ನು ನೋಡಿದಾಗ ಮೂಡುವ ಆದ್ಯತೆಗಳು ಬೇರೆ ಬೇರೆಯಾಗಿರುವುದರಿಂದ ಇಬ್ಬರ ಆಯ್ಕೆಗಳೂ ಇನ್ನೊಬ್ಬರಿಗೆ ಅಸಂಬದ್ಧವಾಗಿ ಕಾಣುತ್ತವೆ.

ಸ್ವಾಭಾವಿಕವಾಗಿ ಅಲಂಕಾರಪ್ರಿಯರಾದ ಮಹಿಳೆಯರು ಒಡವೆ, ಉಡುಪು, ಸೌಂದರ್ಯ ಪ್ರಸಾದನಗಳತ್ತ ಒಲವು ತೋರುವುದನ್ನು ಪುರುಷರು ಲೇವಡಿ ಮಾಡಿದರೆ ಪುರುಷರು ಹೊಸ ಎಲೆಕ್ಟ್ರಾನಿಕ್ ವಸ್ತುಗಳು, ವೇಗದ ಕಾರುಗಳು, ಬೈಕ್ ಮೊದಲಾದವುಗಳ ವಿವರ ಸಂಗ್ರಹಿಸುವುದನ್ನು ಮಹಿಳೆಯರು ಲೇವಡಿ ಮಾಡುತ್ತಾರೆ. ಹಣ ಉಳಿತಾಯದ ಅಭಿಯಾನಕ್ಕಾಗಿ 5 ಸೂಕ್ತ ಸಲಹೆಗಳು

ಕೊಂಡುಕೊಳ್ಳುವ ವಿಷಯ ಬಂದಾಗ ಪುರುಷರು ಅಗತ್ಯವಿದ್ದಾಗ ಮಾತ್ರ ಅಂಗಡಿಗಳತ್ತ ಮುಖ ಮಾಡುತ್ತಾರೆ. ಅದೂ ಅಲ್ಲದೇ ತನಗೆ ಬೇಕಾದ ವಸ್ತು ಬೇಕೆಂದರೆ ಒಂದೆರಡು ಅಂಗಡಿ ತಿರುಗಿ ಬೆಲೆ ಸ್ವಲ್ಪ ಹೆಚ್ಚು ಕಡಿಮೆ ಆದರೂ ಕೂಡಲೇ ಕೊಂಡುಕೊಳ್ಳುತ್ತಾರೆ. ಆದರೆ ಮಹಿಳೆಯರಿಗೆ ಶಾಪಿಂಗ್ ಅಂದರೆ ಪಂಚಪ್ರಾಣ. ಮಾರುಕಟ್ಟೆಯಲ್ಲಿರುವ ಎಲ್ಲಾ ಅಂಗಡಿಗಳನ್ನು ತಿರುಗಿ ಯಾವ ಅಂಗಡಿಯಲ್ಲಿ ಯಾವ ಯಾವ ವಸ್ತು ಎಷ್ಟು ಬೆಲೆಗೆ ಮಾರುತ್ತಿದ್ದಾರೆ, ಯಾವ ಆನ್ಲೈನ್ ತಾಣದಲ್ಲಿ ಯಾವ ಯಾವ ವಸ್ತುಗಳು ಮಾರಾಟಕ್ಕಿವೆ, ಅದರಲ್ಲಿ ತನಗೆ ಬೇಕಾದ ವಸ್ತು ಯಾವುದು, ಯಾವ ಬಣ್ಣದ್ದು ತನ್ನ ಬಳಿ ಇದೆ, ಯಾವ ಬಣ್ಣದ್ದು ಬೇಕಾಗಿದೆ ಮೊದಲಾದ ಲೆಕ್ಕಾಚಾರದಲ್ಲಿ ಅವರು ಸಾರ್ಥಕತೆಯನ್ನು ಕಾಣುತ್ತಾರೆ. ಈ ವಿಭಿನ್ನತೆಯ ಕೆಲವು ವಿವರಗಳನ್ನು ಕೆಳಗೆ ನೀಡಲಾಗಿದೆ. ಪ್ರತಿ ಕ್ಷಣ ಕ್ಷಣವೂ ಸಂತೋಷವಾಗಿರಲು 15 ಸೂತ್ರಗಳು

ಬಟ್ಟೆಗಳು

ಪುರುಷರು ಕೊಂಚ ದುಬಾರಿಯಾಗಿದ್ದರೂ ತಮಗೆ ಸೂಕ್ತವೆನಿಸುವ ಕೆಲವೇ ಬಟ್ಟೆಗಳನ್ನು ಹೊಂದಲು ಇಷ್ಟ ಪಡುತ್ತಾರೆ. ಹಾಗಾಗಿ ಬಟ್ಟೆ ಅಂಗಡಿಗಳಲ್ಲಿ ಪುರುಷರಿಗಾಗಿ ಇರುವ ಆಯ್ಕೆ ಸೀಮಿತವಾಗಿದೆ. ಆದರೆ ಮಹಿಳೆಯರ ವಿಷಯದಲ್ಲಿ ಹಾಗಲ್ಲ, ವಿನ್ಯಾಸ, ಬಣ್ಣ, ಬೆಲೆಗಳಿಗೆ ಅನುಗುಣವಾಗಿ ಅವರ ಆಯ್ಕೆ ಇರುತ್ತದೆ. ಇನ್ನೂ ಮುಖ್ಯವಾಗಿ ತಾನು ಕೊಂಡುಕೊಳ್ಳಬಯಸುವ ತೊಡುಗೆ ಇನ್ನೊಬ್ಬರ ಹತ್ತಿರ ಇರಬಾರದು! ಈ ನಿಟ್ಟಿನಲ್ಲಿ ಅವರ ಮೆದುಳು ಭಯಂಕರವಾಗಿ ಕೆಲಸ ಮಾಡುತ್ತದೆ.

ಎಲೆಕ್ಟ್ರಾನಿಕ್ ವಸ್ತುಗಳು

ಇಂದು ಜೀವನದ ಪಥವನ್ನೇ ಬದಲಿಸಿ ಬಿಟ್ಟಿರುವ ಎಲೆಕ್ಟ್ರಾನಿಕ್ಸ್ ವಸ್ತುಗಳು ಪುರುಷರಿಗೆ ಅತ್ಯಾಕರ್ಷಕವಾಗಿವೆ. ಪುರುಷರಿಗೆ ಆ ವಸ್ತುವಿನಲ್ಲಿರುವ ಲಕ್ಷಣಗಳು, ಕಾರ್ಯ ಎಸಗುವ ವೇಗ ಹಾಗೂ ಸಾಮರ್ಥ್ಯಗಳು ಮನಸೆಳೆದರೆ ಮಹಿಳೆಯರಿಗೆ ಈ ಸಾಮರ್ಥ್ಯಗಳಿಗಿಂತ ಅದರ ಬಣ್ಣ ಮತ್ತು ವಿನ್ಯಾಸ ಮನಸೆಳೆಯುತ್ತದೆ. ಸಾಮಾನ್ಯವಾಗಿ ಪುರುಷರು ಮಾರುಕಟ್ಟೆಯಲ್ಲಿ ಬರುತ್ತಿರುವ ಅತಿ ನವೀನ ಮಾದರಿಯನ್ನು ಕೊಂಡುಕೊಳ್ಳ ಬಯಸಿದರೆ ಮಹಿಳೆಯರು ಮೊದಲು ಕೊಂಡ ವಸ್ತು ಹಳೆಯದಾಗುವವರೆಗೂ ಹೊಸದನ್ನು ಕೊಳ್ಳಲು ಬಯಸುವುದಿಲ್ಲ.

ಒಡವೆಗಳು

ಕೊಳ್ಳುವ ಇರಾದೆ ಇರಲಿ, ಇಲ್ಲದಿರಲಿ, ಒಡವೆಯ ಅಂಗಡಿ ಹತ್ತಿರ ಬಂದಾಕ್ಷಣ ಮಹಿಳೆಯರ ಗಮನ ಅತ್ತ ಖಂಡಿತಾ ಹೋಗುತ್ತದೆ. ಪುರುಷರು ಸಂದರ್ಭಕ್ಕೆ ಅನುಗುಣವಾಗಿ ಅಂದರೆ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಮೊದಲಾದ ವಿಶೇಷ ಸಂದರ್ಭಗಳಲ್ಲಿ ಮಾತ್ರ ಒಡವೆಗಳನ್ನು ಕೊಳ್ಳುತ್ತಾರೆ. ಆದರೆ ಮಹಿಳೆಯರು ಒಡವೆಗಳನ್ನು ಕೊಳ್ಳುವಾಗ ತನ್ನ ಅಲಂಕಾರಕ್ಕಿಂತಲೂ ತುರ್ತು ಸಂದರ್ಭದಲ್ಲಿ ಆಪತ್ಕಾಲಕ್ಕಾಗುವ ಧನದ ಬದಲಿಗೆ ಎಂದು ಪರಿಗಣಿಸಿಯೇ ತಮ್ಮ ಆಯ್ಕೆಯನ್ನು ಮಾಡುತ್ತಾರೆ.

ಸುರಾಪಾನ

ಇಂದು ಸುರಾಪಾನ ಪುರುಷ ಮಹಿಳೆಯರ ಭೇದ ಮರೆತು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಪಬ್-ಬಾರ್ ಗಳು ನಗರದಿಂದ ಹಳ್ಳಿಯವರೆಗೆ ವಿಸ್ತರಿಸಿವೆ. ಮದ್ಯಪಾನ ಮಾಡುವುದಿಲ್ಲ ಎಂಬ ಕಠಿಣ ಮನಸ್ಸಿನ ಸಂಕಲ್ಪವಿಲ್ಲದಿರುವ ಅಷ್ಟೂ ಪುರುಷರು ಮದ್ಯಪಾನಕ್ಕಾಗಿ ತಮ್ಮ ಹಣವನ್ನು ಲಗಾಮಿಲ್ಲದೇ ಖರ್ಚು ಮಾಡುತ್ತಾರೆ. ಇದೇ ಮನಃಸ್ಥಿತಿಯ ಮಹಿಳೆಯರೂ ಪುರುಷರಿಗೆ ಸರಿಸಮಾನವಾಗಿ ಖರ್ಚು ಮಾಡುತ್ತಾರೆ. ಆದರೆ ಅವರು ತಾವು ಖರ್ಚು ಮಾಡುವುದಕ್ಕಿಂತ ಹೆಚ್ಚಾಗಿ ತಮಗೆ ಕಂಪನಿ ಕೊಡುವ ಪುರುಷರಿಂದಲೇ ಖರ್ಚು ಮಾಡಿಸುತ್ತಾರೆ.

ಸೌಂದರ್ಯ ಮಳಿಗೆ

ಮಹಿಳೆಯರು ತಾವು ಬೇರೆಯವರಿಗೆ ಹೇಗೆ ಕಾಣುತ್ತೇವೆಂಬುದಕ್ಕೆ ಹೆಚ್ಚು ಗಮನ ನೀಡುತ್ತಾರೆ. ಅದಕ್ಕೆ ಅಗತ್ಯವಾದ ಸೌಂದರ್ಯ ಪ್ರಸಾದನಗಳು, ಸೌಂದರ್ಯವರ್ಧಕ ವಸ್ತುಗಳು, ಕೃತಕ ಕೂದಲು, ಉಗುರ ಬಣ್ಣ, ಲಿಪ್ ಸ್ಟಿಕ್ ಮೊದಲಾದವುಗಳಿಗೆ ಖರ್ಚು ಮಾಡಲು ಅವರು ಹಿಂದೆ ಮುಂದೆ ನೋಡುವುದಿಲ್ಲ. ಅದೇ ಪುರುಷರು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಸಾಧಾರಣವಾದ ತಮಗೆ ಸೂಕ್ತ ಎನಿಸಿದ ಉಡುಗೆಗಳಿಗೆ ಅವರು ತೃಪ್ತರಾಗುತ್ತಾರೆ.

ಒಳ್ಳೆಯ ಹೋಟೆಲಿನಲ್ಲಿ ಊಟ

ಊಟದ ವಿಷಯ ಬಂದಾಗ ಮಹಿಳೆಯರು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ, ಏಕೆಂದರೆ ಬಹುತೇಕ ಸಂದರ್ಭಗಳಲ್ಲಿ ಊಟದ ಬಿಲ್ ನೀಡುವವರು ಪುರುಷರೇ ಆಗಿರುವುದರಿಂದ ಹಾಗೂ ಮಹಿಳೆಯರನ್ನು ಕರೆದೊಯ್ಯಬೇಕಾದರೆ ಒಳ್ಳೆಯ ಹೋಟೇಲಿಗೇ ಕರೆದುಕೊಂಡು ಹೋಗುವುದರಿಂದ ಖರ್ಚಿನ ಪೆಟ್ಟನ್ನು ಪುರುಷರೇ ಸಹಿಸಿಕೊಳ್ಳಬೇಕಾಗುತ್ತದೆ. ಆದರೆ ಮಹಿಳೆಯರೇ ಪ್ರತ್ಯೇಕವಾಗಿ ಊಟಕ್ಕೆ ಹೋಗುವಾದ ಮಾತ್ರ ತಾವು ಸಾಮಾನ್ಯವಾಗಿ ಮನೆಯಲ್ಲಿ ಮಾಡುವ ಊಟವನ್ನು ಅಥವಾ ಅದಕ್ಕಿಂತ ಸ್ವಲ್ಪ ಭಿನ್ನವಾದ ಊಟವನ್ನೇ ಆರ್ಡರ್ ಮಾಡುತ್ತಾರೆ.

ಮನೆಯ ಪೀಠೋಪಕರಣ ಮತ್ತು ಅಲಂಕಾರಿಕ ವಸ್ತುಗಳು

ಮನೆಯ ವಿಷಯ ಬಂದಾಗ ಮಹಿಳೆಯರು ಅಲಂಕಾರ ಮತ್ತು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಕೊಳಕಾದ ವಸ್ತ್ರಗಳು, ಮುರುಕು ಪೀಠೋಪಕರಣಗಳು, ಅಧ್ವಾನವಾದ ಪರದೆಗಳು ಅವರಿಗೆ ಬೇಡ. ಬದಲಿಗೆ ಮನಸೆಳೆಯುವ ಹಾಗೂ ಗಟ್ಟಿಮುಟ್ಟಾದ ಪೀಠೋಪಕರಣಗಳು, ಸ್ವಚ್ಛವಾದ ಹಾಗೂ ಕೋಣೆಯ ವಿನ್ಯಾಸಕ್ಕೆ ಅನುಗುಣವಾದ ಪರದೆ, ಪೀಠೋಪಕರಣಗಳ ಹೊದಿಕೆಗಳು ಕುಳಿತುಕೊಳ್ಳಲು ಆರಾಮವಾದ ದಿಂಬು ಮೊದಲಾದ ವಸ್ತುಗಳಿಗೆ ಅವರು ಯಥೇಚ್ಛವಾಗಿ ಖರ್ಚು ಮಾಡುತ್ತಾರೆ. ಅದೇ ಪುರುಷರ ವಿಷಯ ಬಂದಾಗ ಅವರಿಗೆ ಟೀವಿ ಎದುರು ಕುಳಿತುಕೊಳ್ಳಲು ಅದು ಮುರುಕಲಾದರೂ ಸರಿ, ಒಂದು ಕುರ್ಚಿಯಿದ್ದರೆ ಸಾಕು. ಅದಕ್ಕಾಗಿ ಪ್ರತ್ಯೇಕ ಖರ್ಚಿಗೆ ಅವರು ತಯಾರಿರುವುದಿಲ್ಲ.

ಕಾರು, ಬೈಕು ಮೊದಲಾದ ವಾಹನಗಳು

ತಮ್ಮ ಸ್ವಂತ ವಾಹನದ ವಿಷಯ ಬಂದಾಗ ಮಹಿಳೆಯರು ತಮ್ಮ ಅಗತ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಲಭ್ಯವಿರುವ ವಾಹನಗಳಲ್ಲಿ ತಮಗೆ ಸೂಕ್ತವಾದ ಲಕ್ಷಣಗಳಿರುವ ವಾಹನವನ್ನು ಆಯ್ಕೆ ಮಾಡುತ್ತಾರೆ. ಮಹಿಳೆಯರು ತಮಗೆ ಚಲಾಯಿಸಲು ಸುಲಭವಾದ ದ್ವಿಚಕ್ರ ಅಥವಾ ಕಾರನ್ನು ಆಯ್ದುಕೊಂಡರೆ ಪುರುಷರಿಗೆ ವಾಹನವೆಂದರೆ ಅದೊಂದು ಪ್ರತಿಷ್ಠೆಯ ವಿಷಯವಾಗಿರುತ್ತದೆ. ಕೇವಲ ಅದರ ಲಕ್ಷಣಗಳಿಗಿಂತ ಆ ಬೈಕಿನ ಬೆಲೆ ಹಾಗೂ ಆ ಬೈಕಿನ ಮೇಲೆ ಸವಾರಿ ಮಾಡುವ ಮೂಲಕ ಹೆಚ್ಚುವ ತನ್ನ ವರ್ಚಸ್ಸಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಹಾಗಾಗಿ ನಲವತ್ತು ಕಿ.ಮೀ ವೇಗದ ಮಿತಿ ಇರುವ ರಸ್ತೆಯಲ್ಲಿಯೂ ನೂರಿಪ್ಪತ್ತು ಕಿ.ಮೀ ವೇಗದ ಬೈಕುಗಳನ್ನು ಯುವಕರು ಓಡಿಸುತ್ತಿರುವುದನ್ನು ಕಾಣಬಹುದು.

ಮನೆ

ಸ್ವಂತ ಮನೆ ಹೊಂದುವುದು ಪ್ರತಿಯೊಬ್ಬನ ಕನಸು. ಮನೆಯ ವಿಷಯ ಬಂದಾಗ ಹಣ ಹೊಂದಿಸುವ ನಿಟ್ಟಿನಲ್ಲಿ ಪುರುಷರು ತಮ್ಮ ನಿರ್ಧಾರ ಕೈಗೊಂಡರೆ ಮಹಿಳೆ ಆದಷ್ಟು ಬೇಗನೇ ತಮ್ಮ ಕನಸಿನ ಮನೆ ನಿರ್ಮಿಸಲು ಹಾತೊರೆಯುತ್ತಿರುತ್ತಾರೆ. ಅದರಲ್ಲೂ ಮನೆಯ ಅಗತ್ಯ ಬಂದಾಕ್ಷಣ ಪುರುಷರು ಆದಷ್ಟು ಕಡಿಮೆ ಖರ್ಚಿನಲ್ಲಿ ಹಾಗೂ ಕಡಿಮೆ ವೈಶಿಷ್ಟ್ಯಗಳನ್ನು ಬಯಸಿ ಸಾಲದ ಮೊತ್ತವನ್ನು ಕಡಿಮೆಗೊಳಿಸಬಯಸಿದರೆ ಮಹಿಳೆಯರು ಹೆಚ್ಚು ವೈಶಿಷ್ಟ್ಯಗಳನ್ನು ಬಯಸಿ ಕೊಳ್ಳುವ ಸಾಲವನ್ನು ಹೆಚ್ಚಿಸುತ್ತಾರೆ.

ತಿರುಗಾಟಕ್ಕೆ

ಕೋಶ ಓದು ದೇಶ ತಿರುಗು ಎಂಬ ಗಾದೆ ಪುರುಷರಿಗೆ ಹೆಚ್ಚು ಅನ್ವಯಿಸುತ್ತದೆ. ವರ್ಷಕ್ಕೊಂದು ಅಥವಾ ಎರಡು ಬಾರಿ ಅವರು ಪ್ರವಾಸ ಕೈಗೊಳ್ಳಲು ಇಚ್ಛಿಸುತ್ತಾರೆ. ಅದೇ ಮಹಿಳೆಯರು ಇದೇ ಖರ್ಚಿನಲ್ಲಿ ತಮ್ಮ ಮನೆಯ ಮೇಲೆ ಇನ್ನೊಂದಂತಸ್ತು ಏರಿಸಿದರೆ ಒಳ್ಳೆಯದು ಎಂಬ ಅಭಿಪ್ರಾಯಕ್ಕೆ ಬರುತ್ತಾರೆ. ಆದರೆ ದೂರ ಪ್ರದೇಶದ ಪ್ರವಾಸದಿಂದ ಹೆಚ್ಚುವ ವರ್ಚಸ್ಸು ಇಬ್ಬರ ಮನಸ್ಸನ್ನೂ ಸಮಾನವಾಗಿ ಕೆಡಿಸಿದರೆ ಮಾತ್ರ ವಿದೇಶಪ್ರವಾಸ ಅಥವಾ ದೂರದ ಪ್ರವಾಸ ದೊಡ್ಡ ಖರ್ಚಿಗೆ ದಾರಿಮಾಡಿಕೊಡುತ್ತದೆ.

English summary

How Men & Women Spend Money Differently?

It is hard to understand how two genders belonging to the same species can be so different from one another. Men and women of the human race never agree on any topic. It is their innate differences from each other that is responsible for causing so much heartache.
X
Desktop Bottom Promotion