For Quick Alerts
ALLOW NOTIFICATIONS  
For Daily Alerts

ಋಣಾತ್ಮಕ ಯೋಚನೆಗಳಿಂದ ಹೊರಬರುವುದು ಹೇಗೆ?

By Super
|

ಜೀವನದಲ್ಲಿ ಯಶಸ್ಸು ಪಡೆದವರು ಖಂಡಿತವಾಗಿ ಧನಾತ್ಮಕವಾಗಿ ಯೋಚಿಸುವವರಾಗಿರುತ್ತಾರೆ. ನಾರ್ಮನ್ ವಿನ್ಸೆಂಟ್ ಪೀಲೆ ಎಂಬ ಲೇಖಕರು ಬರೆದಿರುವ Why Some Positive Thinkers Get Powerful Results ಎಂಬ ಹೆಸರಿನ ಪುಸ್ತಕ ಧನಾತ್ಮಕ ಯೋಚನೆಯ ಫಲಿತಾಂಶ ಹಾಗೂ ಈ ಬಗ್ಗೆ ಹಲವು ವಿವರಗಳನ್ನು ನೀಡಿದ್ದಾರೆ.

ಸಾಮಾನ್ಯವಾಗಿ ನಮಗೆ ಚಿಕ್ಕಂದಿನಿಂದಲೇ ಕೆಲವು ವಿಷಯಗಳಲ್ಲಿ ನಮ್ಮ ಪಾಲಕರು ನಮಗರಿವಿಲ್ಲದಂತೆಯೇ ಋಣಾತ್ಮಕ ಚಿಂತನೆಯನ್ನು ಮೈಗೂಡುವಂತೆ ಮಾಡಿರುತ್ತಾರೆ. ಉದಾಹರಣೆಗೆ "ನೀರಿನ ಹತ್ತಿರ ಹೋಗಬೇಡ, ಅಲ್ಲಿ ಭಾರೀ ಅಪಾಯವಿದೆ" ಈ ವಾಕ್ಯವನ್ನು ಮನಸಾಪಾಲಿಸಿದ ನಾವು ಜೀವಮಾನವಿಡೀ ಈಜು ಕಲಿಯುವುದೇ ಇಲ್ಲ. ಬದಲಿಗೆ, "ಅಪಾಯವಿಲ್ಲದ ನೀರಿನಲ್ಲಿ ಮೊದಲು ಈಜು ಕಲಿತು ಬಳಿಕ ಆಳನೀರಿನಲ್ಲಿ ಈಜುವೆ" ಎಂಬುವುದು ಧನಾತ್ಮಕ ಯೋಚನೆ. ಬಳಿಕ ಸೂಕ್ತ ಗುರುವನ್ನು ಹುಡುಕಿ, ಈಜು ಕಲಿತು ಇನ್ನೊಂದು ವಿದ್ಯೆಯಲ್ಲಿ ವಿಶಾರದರಾಗುವುಕ್ಕೆ ಈ ಧನಾತ್ಮಕ ಯೋಚನೆಯೇ ಕಾರಣ.

ನಮ್ಮ ಮನದಲ್ಲಿ ಇಂತಹ ಸಾವಿರಾರು ಋಣಾತ್ಮಕ ಪೂರ್ವಾಗ್ರಹ ಅಥವಾ ನಂಬಿಕೆಗಳಿವೆ. ಈ ನಂಬಿಕೆಗಳು ನಮ್ಮ ಏಳಿಗೆಗೆ ಸದಾ ಅಡ್ಡಗಾಲು ಹಾಕಿ ನಮ್ಮನ್ನು ಹಿಂದೆಯೇ ಉಳಿಸುತ್ತವೆ. ಉತ್ತಮ ಜೀವನ ಹಾಗೂ ಒಂದು ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಈ ಯೋಚನೆಗಳು ನಿರಂತರ ಅಡ್ಡಿಯುಂಟುಮಾಡುತ್ತವೆ. ಈ ನಂಬಿಕೆಗಳಿಂದ ಹೊರಬರಲು ಮೊತ್ತಮೊದಲು ನಮ್ಮ ಜೀವನಶೈಲಿಯನ್ನು ಬದಲಿಸುವ ಅಗತ್ಯವಿದೆ. ಋಣಾತ್ಮಕ ಯೋಚನೆಗಳು ನಿಮ್ಮ ಆರೋಗ್ಯಕ್ಕೂ ಮಾರಕ ಎಂಬುದು ನಿಮಗೆ ಗೊತ್ತೇ?

ಪ್ರತಿಯೊಂದು ಚಟುವಟಿಕೆಯಲ್ಲಿಯೂ ನಮ್ಮ ಅಂತರಾಳದಲ್ಲಿ ಧನಾತ್ಮಕ ಮತ್ತು ಋಣಾತ್ಮಕ ಯೋಚನೆಗಳು ಮೊಳೆಯುತ್ತವೆ. ನಾವು ಆ ಸಮಯದಲ್ಲಿ ಯಾವ ಯೋಚನೆಗೆ ಹೆಚ್ಚಿನ ಮಹತ್ವ ನೀಡುತ್ತೇವೆ ಎಂಬುವುದರ ಮೇಲೆ ನಮ್ಮ ವ್ಯಕ್ತಿತ್ವ ನಿರ್ಣಯವಾಗುತ್ತದೆ. ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಪ್ರತಿಯೊಂದೂ ಧನಾತ್ಮಕ ಯೋಚನೆಗೆ ಮಹತ್ವ ನೀಡುವುದು ಅಗತ್ಯವಾಗಿದೆ. ಋಣಾತ್ಮಕ ಯೋಚನೆಗಳಿಂದ ಹೊರಬರಲು ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ. ನೀವು ನಕಾರಾತ್ಮಕ ಚಿಂತನೆಗಳಿಂದ ಬಳಲುತ್ತಿದ್ದೀರಾ?

ಆಭಾರಿಯಾಗಿರಲು ಕಲಿಯಿರಿ

ನಮಗೆ ದಿನವಿಡೀ ಹಲವು ಚಿಕ್ಕಪುಟ್ಟ ಸಂಗತಿಗಳು, ವಸ್ತುಗಳು ಹಾಗೂ ವಿದ್ಯಮಾನಗಳು ಸಂತೋಷವನ್ನು ನೀಡುತ್ತವೆ. ಈ ಎಲ್ಲವಕ್ಕೂ ನಾವು ಮನಸ್ಸಿನಲ್ಲಿ ಆಭಾರಿಯಾಗುವುದನ್ನು ಮೊದಲು ಕಲಿಯಬೆಕು. ಉದಾಹರಣೆಗೆ ಸರಿಯಾಗಿ ಸಮಯಕ್ಕೆ ಬಂದ ಬಸ್ಸು, ಸೂರ್ಯನ ಬೆಳಕು, ನಿರ್ಮಲವಾದ ಗಾಳಿ ಮೊದಲಾದವುಗಳಿಗೆ ಮನದಲ್ಲಿ ಅಭಾರಿಯಾಗಿರುವ ಮೂಲಕ ಋಣಾತ್ಮಕ ಯೋಚನೆಯಿಂದ ಹೊರಬರಲು ಮೊದಲ ಮೆಟ್ಟಿಲು ಹತ್ತಿದಂತಾಗುತ್ತದೆ.

ಮನಸಾರೆ ದೊಡ್ಡದನಿಯಲ್ಲಿ ನಕ್ಕುಬಿಡಿ

ನಗುವುದರಿಂದ ಮನದ ದುಗುಡಗಳು ದೂರಾಗುತ್ತವೆ. ದೇಹದ ಹಲವು ಖಾಯಿಲೆಗಳಿಗೆ ನಗು ಸಿದ್ದೌಷಧ ಎಂದು ಈಗಾಗಲೇ ಸಾಬೀತಾಗಿದೆ. ನೀವೂ ನಕ್ಕು ನಿಮ್ಮ ಅಕ್ಕಪಕ್ಕದಲ್ಲಿರುವವರನ್ನೂ ನಿಮ್ಮ ನಗುವಿನಲ್ಲಿ ಭಾಗಿಯಾಗುವಂತೆ ಮಾಡುವುದರಿಂದ ನಿಮ್ಮಲ್ಲಿ ಧನಾತ್ಮಕ ಶಕ್ತಿ ಹೆಚ್ಚುವುದು ಮಾತ್ರವಲ್ಲ, ಸುತ್ತಮುತ್ತಲಿನವರ ದೃಷ್ಟಿಯಲ್ಲಿ ನಿಮ್ಮ ಗೌರವವೂ ಹೆಚ್ಚುತ್ತದೆ.

ನಿಮ್ಮ ಯೋಚನಾಲಹರಿಯನ್ನು ಬದಲಿಸಿ

ಡಾ. ರಾಜ್ ರವರ ಕಸ್ತೂರಿ ನಿವಾಸ ಚಿತ್ರದಲ್ಲಿ ಬೆಂಕಿಪಟ್ಟಣದ ಕಾರ್ಖಾನೆ ದಿವಾಳಿಯಾದರೂ ಅದರ ಮಾಲಿಕ ತನ್ನ ಮನೋಭಾವವನ್ನು ಬದಲಿಸುವುದಿಲ್ಲ. ಒಂದು ಬಾರಿ ತನ್ನ ಬೆಂಕಿಪಟ್ಟಣದ ಒಂದು ಕಡ್ಡಿಯನ್ನು ಗೀರಿ ನೋಡಿದ್ದರೆ ಕಥೆಯೇ ಬದಲಾಗುತ್ತಿತ್ತು. ಎಲ್ಲಾ ವಿಷಯಗಳಲ್ಲಿ ನಾವೇ ಎಲ್ಲಾ ತಿಳಿದವರು ಎಂದುಕೊಂಡಿರುವ ಪೂರ್ವಾಗ್ರಹ ತುಂಬಾ ಅಪಾಯಕರ. ಬದಲಿಗೆ ನಮ್ಮ ಯೋಚನಾಲಹರಿಯನ್ನು ಕೊಂಚ ಬದಲಿಸಿ ಇದರ ಬದಲಿಗೆ ಬೇರೆ ಮಾರ್ಗವನ್ನು ಹಿಡಿದರೆ ಎಂಬ ನಿಟ್ಟಿನಲ್ಲಿ ಯೋಚಿಸಿದರೆ ಖಂಡಿತಾ ಉತ್ತಮ ಮಾರ್ಗ ದೊರಕುತ್ತದೆ. ನಿಜವಾಗಿಯೂ ಎಡಗೈ ಬಳಸುವವರು ಹೆಚ್ಚು ಪ್ರತಿಭಾವಂತರೇ?

ನಿಮ್ಮನ್ನು ಸದಾ ಧನಾತ್ಮಕ ವಾತಾವರಣದಲ್ಲಿರುವಂತೆ ನೋಡಿಕೊಳ್ಳಿ

ನಿಮ್ಮ ಸುತ್ತಮುತ್ತಲ ಜನರನ್ನು ಕೊಂಚ ಸೂಕ್ಷ್ಮವಾಗಿ ಅವಲೋಕಿಸಿ. ನಿಮಗೇ ಅಚ್ಚರಿಯಾಗುವಂತೆ ಸಮಾಜದ ಚಿಕ್ಕಪುಟ್ಟ ವ್ಯಕ್ತಿಗಳೂ ತಮ್ಮ ಧನಾತ್ಮಕ ಚಿಂತನೆಯಿಂದ ಮಹಾನ್ ವ್ಯಕ್ತಿಗಳಾಗಿ ಗೋಚರಿಸುತ್ತಾರೆ. ಸದಾ ಋಣಾತ್ಮಕವಾಗಿ ಯೋಚಿಸುವ ಸ್ನೇಹಿತರಿಂದ ದೂರಾಗಿ ಧನಾತ್ಮಕ ಚಿಂತನೆಯ ವ್ಯಕ್ತಿಗಳ ಒಡನಾಟ ಪಡೆದುಕೊಳ್ಳಿ. ಒಂದು ವೇಳೆ ನಿಮ್ಮ ನಿಕಟವರ್ತಿಗಳ ಯಾವುದಾದರೂ ಋಣಾತ್ಮಕ ಕಾರ್ಯ ನಿಮಗೆ ಹಿಡಿಸದೇ ಇದ್ದಲ್ಲಿ ದಿಟ್ಟವಾಗಿ, ನೇರವಾಗಿ ಆ ಬಗ್ಗೆ ಚರ್ಚಿಸಿ ಅವರು ಬದಲಾಗುವಂತೆ ನೋಡಿಕೊಳ್ಳಿ.

ನಿಮ್ಮ ಗುರಿಗಳತ್ತ ಲಕ್ಷ್ಯ ಇರಲಿ

ನಿಮ್ಮ ಜೀವನದ ಗುರಿಯ ಬಗ್ಗೆ ಸದಾ ನಿಮ್ಮ ಲಕ್ಷ್ಯ ಇರಲಿ. ಈ ನಿಟ್ಟಿನಲ್ಲಿ ಸತತವಾಗಿ ಮುಂದುವರೆಯುವುದರ ಬಗ್ಗೆ ಯೋಚಿಸುವುದು ಋಣಾತ್ಮಕ ಚಿಂತನೆಯಿಂದ ಹೊರಬರಲು ಉತ್ತಮ ಮಾರ್ಗವಾಗಿದೆ. ಸಾಮಾನ್ಯವಾಗಿ ನಮಗೆ ಹಲವಾರು ಅಡೆತಡೆಗಳು ಎದುರಾಗುತ್ತವೆ. ಈ ಅಡೆತಡೆಗಳನ್ನು ಸಮರ್ಥವಾಗಿ ಎದುರಿಸಿ ಗುರಿಯತ್ತ ಮುಂದುವರೆಯಲು ಮನಸ್ಸನ್ನು ಕೇಂದ್ರೀಕರಿಸಿ. ಆಗುವುದೇ ಇಲ್ಲ ಎಂಬಂತಹ ಕೆಲಸಗಳೂ ನಮಗೇ ಅಚ್ಚರಿಯಾಗುವಂತೆ ಆಗುತ್ತಾ ಹೋಗಿ ಧನಾತ್ಮಕ ಚಿಂತನೆಯ ಇರವನ್ನು ಸಾಬೀತುಪಡಿಸುತ್ತವೆ.

ಬೇರೆಯವರ ಚಿಂತನೆಯ ಬಲಿಪಶುವಾಗಬೇಡಿ

ಸಾಮಾನ್ಯವಾಗಿ ಜಗತ್ತಿನಲ್ಲಿ ಯಾವುದೇ ಕೆಲಸ ಕಡ್ಡಿ ಮುರಿದಷ್ಟು ಸುಲಭವಾಗಿ ಆಗುವುದಿಲ್ಲ. ಇದಕ್ಕಾಗಿ ಬೇರೆಯವರನ್ನು ಹಣಿಯುತ್ತಾ, ಕಾರಣರಾದವರನ್ನು ಜರೆಯುತ್ತಾ ಕಾಲ ಕಳೆಯುವುದು ಋಣಾತ್ಮಕ ಚಿಂತನೆಯ ಫಲವಾಗಿದೆ. ಈ ನಿಟ್ಟಿನಲ್ಲಿ ಧೃಢನಿಶ್ಚಯ ತಾಳುವುದು, ಈ ಅಸಫಲತೆಗೆ ಕಾರಣಗಳನ್ನು ಅರಿತು ಅದಕ್ಕೆ ಸೂಕ್ತ ಪರಿಹಾರ ಹುಡುಕುವುದು, ಒಂದು ವೇಳೆ ಪರಿಹಾರ ದೊರಕದಿದ್ದಲ್ಲಿ, ಈ ವಿಷಯದಲ್ಲಿ ಅನುಭವವುಳ್ಳವರಿಂದ ಮಾಹಿತಿ ಪಡೆದು ಸೂಕ್ತ ವ್ಯವಸ್ಥೆ ಕಲ್ಪಿಸುವುದು ಎಲ್ಲವೂ ಧನಾತ್ಮಕ ಕಾರ್ಯಗಳಾಗಿವೆ. ಬದಲಿಗೆ ಇದಕ್ಕೆಲ್ಲಾ ನಾನೇ ಕಾರಣ ಎಂದು ಬೇರೆಯವರು ಅಂದುಕೊಳ್ಳುವಂತೆ ಎಂದೂ ನಡೆದುಕೊಳ್ಳಬಾರದು. ನಿಮ್ಮ ಯೋಚನೆಗಳು ಹಾಗೂ ಸೂಕ್ತವಾದ ನಿಶ್ಚಯಗಳು ನಿಮ್ಮ ಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

English summary

Awesome Ways To Get Rid Of Negative Energy

Negative energy is present within all of us. It depends on what you feed your mind for the negative energy to pile up and affect you. To get rid of negative energy in your life, you need to make certain lifestyle changes. According to a study, people who breed negative energy experience more stress and lead a less fulfilling life.
X
Desktop Bottom Promotion