For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ವೈವಿಧ್ಯಮಯ ಮಕರ ಸಂಕ್ರಾಂತಿ

By ವಿಜಯಕುಮಾರ್ ಮರಲಿ
|

ಸಂಕ್ರಾಂತಿ ಬಂತು ರತ್ತೋ ರತ್ತೋ... ನೆನಪಿದೆಯಾ ಈ ಜನಪ್ರಿಯ ಕನ್ನಡ ಚಲನಚಿತ್ರ ಗೀತೆ? ಬಹುಶಃ ಯಾವ ಕನ್ನಡಿಗನೂ ಕೇಳದೆ ಇರಲಾರದ ಗೀತೆ ಇದು ಎಂದರೆ ತಪ್ಪಾಗಲಾರದು. 'ಸಂಕ್ರಾಂತಿ' ಹಬ್ಬವನ್ನು ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ಸಂಕೇತಾರ್ಥವಾಗಿ ಆಚರಿಸಲಾಗುತ್ತದೆ. ಆದ್ದರಿಂದ ಇದನ್ನು ಮಕರ ಸಂಕ್ರಾಂತಿ ಎಂದು ಕೂಡ ಕರೆಯಲಾಗುತ್ತದೆ. ಸಾಂಪ್ರದಾಯಿಕವಾಗಿ ಭಾರತದಲ್ಲಿ ಈ ಹಬ್ಬವು ಬೆಳೆಗಳ ಕಟಾವು ಅಥವಾ ಕೊಯ್ಲು ಮಾಡುವ ಸಮಯವನ್ನು ಸೂಚಿಸುತ್ತದೆ. ಇದು ಬೆಳೆಗಳ ಸುಗ್ಗಿಯ ಕಾಲ. ಬೆಳೆಯನ್ನು ನೀಡಿದ ಭೂತಾಯಿಗೆ, ಸಹಾಯಮಾಡಿದ ಎತ್ತುಗಳಿಗೆ, ಶಕ್ತಿ ಕೊಡುವ ಸೂರ್ಯನಿಗೆ ರೈತರು ನಮಸ್ಕರಿಸಿ, ಹುಗ್ಗಿ ತಿಂದು ಸುಗ್ಗಿ ಮಾಡುತ್ತಾರೆ.

ಇನ್ನು ಭಾರತ ದೇಶವು ವಿಶಾಲವಾಗಿದ್ದು, ಹಲವು ರಾಜ್ಯಗಳ ಹಲವು ಸಂಸ್ಕೃತಿಗಳನ್ನು, ಆಚರಣೆಗಳನ್ನು ಹೊತ್ತು ವೈವಿಧ್ಯಮಯವಾಗಿದೆ. ಇದೆ ರೀತಿಯಾಗಿ ಸಂಕ್ರಾಂತಿ ಹಬ್ಬವನ್ನು ಕೂಡ ಇಡಿ ದೇಶದಲ್ಲಿ ಆಯಾ ರಾಜ್ಯಗಳ ಸಂಸ್ಕೃತಿ-ಸಂಪ್ರದಾಯಗಳ ತಳಹದಿಯಲ್ಲಿ ಹಲವು ವಿಶೇಷಗಳೊಂದಿಗೆ ವೈವಿಧ್ಯಮಯವಾಗಿ ಆಚರಿಸಲಾಗುತ್ತದೆ. ಉದಾಹರಣೆಗೆ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಣಿಪುರ್, ಜಾರ್ಖಂಡ್, ಮಧ್ಯಪ್ರದೇಶ, ಬಿಹಾರ್, ಗೋವಾ, ಉತ್ತರಪ್ರದೇಶ, ಉತ್ತರಾಖಂಡ್, ಓರಿಸ್ಸಾ, ಮತ್ತು ಪಶ್ಚಿಮ ಬಂಗಾಳಗಳಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ.

The significance of Makara Sankranti

ಉತ್ತರ ಭಾರತದ ಬಹುಪಾಲು ರಾಜ್ಯಗಳ ಜನರು ಈ ಸಮಯದಲ್ಲಿ ಅಲಹಾಬಾದ್ ನ ಪ್ರಯಾಗ್ ನಗರದಲ್ಲಿರುವ 'ತ್ರಿವೇಣಿ ಸಂಗಮ' (ಗಂಗಾ, ಯಮುನಾ ಮತ್ತು ಅಗೋಚರವಾದ ಸರಸ್ವತಿ ನದಿಗಳು ಸೇರುವ ಸ್ಥಳ) ನಲ್ಲಿ ಪುಣ್ಯಸ್ನಾನ (ಮಹಾ ಕುಂಭ ಮೇಳ) ಮಾಡುವ ಪ್ರಮುಖ ಆಚರಣೆಯನ್ನು ಪರಿಪಾಲಿಸುತ್ತಾರೆ. ಈ ರೀತಿಯಾಗಿ ಮಾಡುವುದರಿಂದ ತಾವು ಮಾಡಿದ ಪಾಪ ಕರ್ಮಗಳು ನಶಿಸಿ, ಪುಣ್ಯ ಪ್ರಾಪ್ತಿಯಾಗಿ ಮೋಕ್ಷ ದೊರೆಯುವುದೆಂಬ ಅಚಲವಾದ ನಂಬಿಕೆ ಈ ಜನರಲ್ಲಿದೆ. ಗುಜರಾತ್ ಮುಂತಾದ ಸುತ್ತಮುತ್ತಲ ಪ್ರದೇಶಗಳಲ್ಲಿ ಬಣ್ಣಬಣ್ಣದ ಗಾಳಿಪಟಗಳನ್ನು ಬಾನಂಗಳದಲ್ಲಿ ಹಾರಿಸುತ್ತ ಈ ಹಬ್ಬವನ್ನು ಸಡಗರದಿಂದ ಆಚರಿಸುತ್ತಾರೆ.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಇದನ್ನು ಗ್ರಾಮೀಣ ಸೊಗಡಿನಲ್ಲಿ 'ಸುಗ್ಗಿ' ಎಂಬ ಹೆಸರಿನಿಂದಲೂ ಆಚರಿಸಲಾಗುತ್ತದೆ. ಈ ದಿನದಂದು ಹೊಸ ಉಡುಪುಗಳನ್ನು ಹಾಕಿಕೊಂಡು ಎಳ್ಳುಬೆಲ್ಲ ಬೀರೊ ಸಂಪ್ರದಾಯ ವಿಶೇಷ. ಈ ಆಚರಣೆಯಲ್ಲಿ ಜನರು ಒಂದು ತಟ್ಟೆಯಲ್ಲಿ ಎಳ್ಳು, ಬೆಲ್ಲ, ಕಬ್ಬು, ಸಕ್ಕರೆ ಅಚ್ಚುಗಳನ್ನು ಇಟ್ಟು ಅಕ್ಕಪಕ್ಕದವರಿಗೆಲ್ಲ ನೀಡುತ್ತ ಸಂತೋಷವಾಗಿರಲು ಒಬ್ಬರಿಗೊಬ್ಬರು ಹಾರೈಸುತ್ತಾರೆ.

ಉತ್ತರ ಕರ್ನಾಟಕದಲ್ಲಿ ಮಕ್ಕಳೆಲ್ಲಾ ಗುಂಪು ಕಟ್ಟಿಕೊಂಡು ಎಲ್ಲ ಪರಿಚಯಸ್ಥರ ಮನೆಗೆ ತೆರಳಿ ಕುಸರೆಳ್ಳು ಅಥವಾ ಎಳ್ಳು ಬೆಲ್ಲವನ್ನು ಹಂಚಿ ಹಿರಿಯರ ಆಶೀರ್ವಾದ ಪಡೆಯುವುದೊಂದು ವಾಡಿಕೆ. ಕೇರಳದಲ್ಲಿ ಈ ಹಬ್ಬವನ್ನು 'ಮಕರ ವೆಳಕ್ಕು' ಎಂಬ ಹೆಸರಿನಲ್ಲಿ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಶ್ರೀ ಕ್ಷೇತ್ರವಾದ ಶಬರಿಮಲೆಯಲ್ಲಿ ಮಕರ ಜ್ಯೋತಿ ಕಾಣುವುದು ಪವಿತ್ರತೆಯ ಪ್ರತೀಕವೆಂದು ಭಾವಸಲಾಗುತ್ತದೆ.

ತಮಿಳುನಾಡಿನಲ್ಲಿ ಇದನ್ನು 'ಪೊಂಗಲ್' ಹೆಸರಿನಿಂದ ಆಚರಿಸಲಾಗುತ್ತದೆ. ಒಟ್ಟು ನಾಲ್ಕು ದಿನಗಳವರೆಗೆ ಆಚರಿಸಲಾಗುವ ಈ ಹಬ್ಬವನ್ನು ಕ್ರಮವಾಗಿ ಭೋಗಿ, ಥೈ ಪೊಂಗಲ್ ಅಥವಾ ಪೊಂಗಲ್, ಮಾಟ್ಟು ಪೊಂಗಲ್ ಹಾಗು ಕಾನುಂ ಪೊಂಗಲ್ ಎಂಬ ಹೆಸರಿನಿಂದ ಅತಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಆಂಧ್ರಪ್ರದೇಶದಲ್ಲೂ ಕೂಡ ತಮಿಳು ನಾಡಿನ ಹಾಗೆ ನಾಲ್ಕು ದಿನಗಳವರೆಗೆ ಈ ಹಬ್ಬವನ್ನು ಭೋಗಿ, ಮಕರ ಸಂಕ್ರಾಂತಿ (ಪೆದ್ದ ಪಂಡುಗಾ), ಕನುಮಾ ಮತ್ತು ಮುಕನುಮಾ ಎಂಬ ಹೆಸರುಗಳಿಂದ ಆಚರಿಸಲಾಗುತ್ತದೆ.

English summary

The significance of Makara Sankranti | Sankranthi festival in India | ಭಾರತದಲ್ಲಿ ವೈವಿಧ್ಯಮಯ ಸಂಕ್ರಾಂತಿ

The significance of Makara Sankranthi or Pongal. Sankranti or Sankranthi marks the transition of the Sun into Makara rashi (Capricorn) on its celestial path. Traditionally, this has been one of many harvest days in India.
X
Desktop Bottom Promotion