For Quick Alerts
ALLOW NOTIFICATIONS  
For Daily Alerts

ಗಣೇಶ ಚತುರ್ಥಿ ಹಬ್ಬದ ವಿಶೇಷತೆ ಹಾಗೂ ಹಿನ್ನೆಲೆ

By Deepak
|

ಗಣೇಶ ಚತುರ್ಥಿಯು ಭಾರತದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸಲ್ಪಡುವ ಹಬ್ಬಗಳಲ್ಲಿ ಒಂದಾಗಿದೆ. ಇದು ವಿದ್ಯೆಯ ಮತ್ತು ಜ್ಞಾನದ ಅಧಿಪತಿ, ಸಂಪತ್ತು ಮತ್ತು ಅದೃಷ್ಟದ ಅಧಿನಾಯಕನಾದ ನಮ್ಮ ಮೂಷಿಕ ವಾಹನನ ಜನನವನ್ನು ಸಾರುವ ಹಬ್ಬ. ಈ ಹಬ್ಬವನ್ನು ವಿನಾಯಕ ಚತುರ್ಥಿ ಅಥವಾ ಗಣೇಶ ಚತುರ್ಥಿ ಇಲ್ಲವೇ ಚೌತಿ ಎಂದು ಸಹ ಕರೆಯುತ್ತಾರೆ. ಇದನ್ನು ಹಿಂದೂಗಳೆಲ್ಲರು ಶ್ರದ್ಧಾ ಭಕ್ತಿಗಳಿಂದ ಆಚರಿಸುತ್ತಾರೆ. ವಿಶೇಷವಾಗಿ ಮಹಾರಾಷ್ಟ್ರದಲ್ಲಿರುವ ಜನರು ಇದನ್ನು ಮತ್ತಷ್ಟು ಸಂಭ್ರಮದಿಂದ ಆಚರಿಸುತ್ತಾರೆ.

The Story Behind Ganesh Chaturthi

ಇತಿಹಾಸ
ಗಣೇಶ ಚತುರ್ಥಿಯ ಆರಂಭವು ಮರಾಠರು ತಮ್ಮ ಆಳ್ವಿಕೆಯ ಉತ್ತುಂಗದಲ್ಲಿದ್ದಾಗ ಪ್ರಚಾರಕ್ಕೆ ತಂದರು. ಅದರಲ್ಲಿಯೂ ಮರಾಠರ ಶ್ರೇಷ್ಠ ರಾಜ ಛತ್ರಪತಿ ಶಿವಾಜಿಯು ಇದನ್ನು ಆಚರಿಸಲು ಆರಂಭಿಸಿದನೆಂದು ಇತಿಹಾಸ ಸಾರುತ್ತದೆ. ಗಣೇಶನ ಹಬ್ಬ ಆರಂಭಗೊಳ್ಳಲು ಹಲವಾರು ದಂತ ಕತೆಗಳ ಹಿನ್ನಲೆಯಿದೆ. ಶಿವ-ಪಾರ್ವತಿಯರ ಮಗನಾದ ಗಣೇಶನ ಹುಟ್ಟಿನ ಕುರಿತು ಹಲವಾರು ಕತೆಗಳು ಚಾಲ್ತಿಯಲ್ಲಿವೆ. ಅದರಲ್ಲಿ ಅತ್ಯಂತ ಪ್ರಸಿದ್ಧವಾದ ಕತೆ ಹೀಗಿದೆ.

ಗಣಪತಿಗೆ ಜನ್ಮ ನೀಡಿದವಳು ಪಾರ್ವತಿ. ಈಶ್ವರನು ಇಲ್ಲದ ಸಮಯದಲ್ಲಿ ಶ್ರೀಗಂಧದ ಮುದ್ದೆಯಿಂದ ಆಕೆ ಗಣೇಶನನ್ನು ಸೃಷ್ಟಿಸಿ, ತಾನು ಸ್ನಾನಕ್ಕೆ ಹೋಗುತ್ತ ಬಾಗಿಲನ್ನು ಕಾಯುವಂತೆ ತಿಳಿಸಿ ಹೋದಳಂತೆ. ಆಕೆ ಸ್ನಾನಕ್ಕೆ ಹೋದಾಗ ಅಲ್ಲಿಗೆ ಬಂದ ಶಿವನಿಗೆ ಒಳಗೆ ಹೋಗಲು ಗಣಪತಿ ನಿರಾಕರಿಸಿದಾಗ, ಅವರಿಬ್ಬರಿಗೂ ಜಗಳವಾಯಿತಂತೆ. ಈ ಜಗಳದಲ್ಲಿ ಕೋಪಗೊಂಡ ಈಶ್ವರನು ರೌದ್ರಾವತಾರವನ್ನು ತಾಳಿ ಗಣಪತಿಯ ತಲೆಯನ್ನು ಕತ್ತರಿಸಿ ಹಾಕಿದನಂತೆ.

ಆಮೇಲೆ ಅಲ್ಲಿಗೆ ಆಗಮಿಸಿದ ಪಾರ್ವತಿ ದೇವಿಯು ಈ ದೃಶ್ಯವನ್ನು ಕಂಡು ಉಗ್ರಾವತಾರವನ್ನು ತಾಳಿದಳಂತೆ, ಆಗ ಆಕೆ ಕಾಳಿಯ ಅವತಾರವನ್ನು ತಾಳಿ ವಿಶ್ವವನ್ನು ನಾಶಪಡಿಸುವ ಬೆದರಿಕೆಯನ್ನು ಹಾಕಿದಳಂತೆ. ಇದು ಪ್ರತಿಯೊಬ್ಬರನ್ನು ಆತಂಕಕ್ಕೆ ತಳ್ಳಿತಂತೆ. ಆಗ ಎಲ್ಲರೂ ಕಾಳಿಕಾದೇವಿಯ ಕೋಪವನ್ನು ತಣಿಸುವ ಉಪಾಯವನ್ನು ಹುಡುಕುವಂತೆ ಈಶ್ವರನಿಗೆ ಮೊರೆ ಸಲ್ಲಿಸಿದರಂತೆ. ಆಗ ಶಿವನು ತನ್ನ ಅನುಯಾಯಿಗಳಿಗೆ ಹೀಗೆ ಹೇಳಿದನಂತೆ. ಎಲ್ಲಾ ಕಡೆ ಹುಡುಕಿ, ನಿಮ್ಮ ಕಣ್ಣಿಗೆ ಮೊದಲು ಕಾಣಿಸುವ, ಯಾವ ತಾಯಿ ಉದಾಸೀನವಾಗಿ ತನ್ನ ಮಗುವನ್ನು ಬೆನ್ನ ಹಿಂದೆ ಬಿಟ್ಟು ಬಿಟ್ಟು ಇರುತ್ತಾಳೆಯೋ, ಆ ಮಗುವಿನ ತಲೆಯನ್ನು ಕಡಿದು ತನ್ನಿ ಎಂದನಂತೆ.

ಹೀಗೆ ಶಿವನ ಅನುಯಾಯಿಗಳು ಹುಡುಕುವಾಗ ಅವರಿಗೆ ಮೊದಲು ಕಾಣಿಸಿದ್ದು ತಾಯಿಯ ಬೆನ್ನ ಹಿಂದೆ ತನ್ನ ಪಾಡಿಗೆ ತಾನಿದ್ದ ಆನೆ ಮರಿ. ಅವರು ಅದನ್ನೇ ಕಡಿದು ತಂದು ಶಿವನಿಗೆ ನೀಡಿದರು. ಇದನ್ನು ನೋಡಿ ಕಾಳಿಕಾ ದೇವಿಯ ಕೋಪವು ತಣ್ಣಗಾಯಿತು. ಪಾರ್ವತಿ ದೇವಿಯು ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು. ಆಗ ಎಲ್ಲಾ ದೇವರುಗಳು ಗಣೇಶನನ್ನು ಆಶಿರ್ವದಿಸಿದರು. ಆ ದಿನವನ್ನು ಗಣೇಶ ಚತುರ್ಥಿ ಎಂದು ಆಚರಿಸಲು ಆರಂಭಿಸಲಾಯಿತು. ಗಣೇಶನ ಆಯ್ಕೆಗೂ ವಾಸ್ತುವಿನ ಅವಶ್ಯಕತೆವಿದೆಯಂತೆ!

ಆಚರಣೆ
ಗಣೇಶ ಚತುರ್ಥಿಯ ಸಿದ್ಧತೆಗಳು ಒಂದು ತಿಂಗಳ ಮೊದಲಿನಿಂದಲೆ ಆರಂಭಗೊಳ್ಳುತ್ತವೆ. ಈ ಹಬ್ಬವು ಸುಮಾರು ಹತ್ತು ದಿನಗಳ ಕಾಲ ನಡೆಯುತ್ತದೆ ( ಭಾದ್ರಪದ ಶುದ್ಧ ಚತುರ್ಥಿಯಿಂದ ಅನಂತ ಚತುರ್ದಶಿಯವರೆಗೆ). ಮೊದಲನೆ ದಿನ ಮನೆಗಳಲ್ಲಿ ಗಣೇಶನ ಮಣ್ಣಿನ ಮೂರ್ತಿಯನ್ನು ಪ್ರತಿಷ್ಟಾಪಿಸಲಾಗುತ್ತದೆ. ಮನೆಗಳನ್ನು ಹೂವಿನಿಂದ ಅಲಂಕರಿಸಲಾಗುತ್ತದೆ. ದೇವಸ್ಥಾನಗಳಲ್ಲಿ ಬೃಹತ್ ಸಂಖ್ಯೆಯಲ್ಲಿ ಭಕ್ತಾಧಿಗಳು ಪೂಜೆಯನ್ನು ಸಲ್ಲಿಸುತ್ತಾರೆ. ಪೂಜೆಗಳು, ಭಜನೆಗಳು ನಿರಂತರವಾಗಿ ನಡೆಯುತ್ತವೆ.

ಜೊತೆಗೆ ಹಬ್ಬದ ಸಂದರ್ಭದಲ್ಲಿ ಮನೆ ಮಂದಿಯೆಲ್ಲ ಒಂದಾಗಿ ಸೇರುತ್ತಾರೆ. ಸ್ಥಳೀಯ ಸಂಘ ಸಂಸ್ಥೆಗಳು ಪೆಂಡಾಲ್‌ಗಳನ್ನು ಹಾಕಿ ಬೃಹತ್ ಗಣಪತಿಯ ವಿಗ್ರಹಗಳನ್ನು ಇರಿಸುತ್ತಾರೆ. ಈ ಪೆಂಡಾಲ್‌ಗಳಲ್ಲಿ ಗಣಪತಿಯ ಉತ್ಸವವದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತವೆ.

ಕೊನೆಯ ದಿನದಂದು ಗಣಪತಿಯ ಮೂರ್ತಿಯನ್ನು ಆ ಪ್ರದೇಶದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ಮಾಡಲಾಗುತ್ತದೆ. ಜನರು ಸಹ ಉತ್ಸಾಹದಿಂದ ಅದರಲ್ಲಿ ಕುಣಿಯುತ್ತಾ ಮತ್ತು ಹಾಡುತ್ತ ಪಾಲ್ಗೊಳ್ಳುತ್ತಾರೆ. ಕೊನೆಗೆ ಗಣಪತಿಯನ್ನು ಹತ್ತಿರದ ಕೆರೆ, ನದಿ ಅಥವಾ ಸಮುದ್ರದಲ್ಲಿ ವಿಸರ್ಜಿಸಲಾಗುತ್ತದೆ. ಹೀಗೆ ಈ ದಿನ ಭಕ್ತಾಧಿಗಳು ತಮ್ಮ ಸಂತೋಷ ಮತ್ತು ಪ್ರಾರ್ಥನೆಗಳನ್ನು ಗಣಪತಿಗೆ ಅರ್ಪಿಸುತ್ತಾರೆ. ಲಡ್ಡು ಪ್ರಿಯ ಲಂಬೋದರನಿಗೆ ಬೂಂದಿ ಲಾಡು ರೆಸಿಪಿ

ಹಬ್ಬದ ಅಡುಗೆಗಳು
ಈ ಹಬ್ಬದ ಸಂದರ್ಭದಲ್ಲಿ ಹಲವಾರು ಅಡುಗೆಗಳನ್ನು ಮತ್ತು ಖಾದ್ಯಗಳನ್ನು ಮಾಡಲಾಗುತ್ತದೆ. ಆದರೂ ಗಣಪತಿಯ ಪ್ರಿಯ ಪದಾರ್ಥವಾದ ಮೋದಕಕ್ಕೆ ಈ ಹಬ್ಬದಲ್ಲಿ ಹೆಚ್ಚಿನ ಪ್ರಾಧಾನ್ಯತೆ ಇರುತ್ತದೆ. ಇದು ಗಣಪತಿಯ ನೆಚ್ಚಿನ ತಿಂಡಿ. ಆದ್ದರಿಂದ ಇದನ್ನು ತಪ್ಪದೆ ಮಾಡಲಾಗುತ್ತದೆ. ಜೊತೆಗೆ ಖರ್ಜಿ ಕಾಯಿ, ಲಾಡು, ಬರ್ಫಿ ಮತ್ತು ಪೇಡಾಗಳನ್ನು ಸಹ ಮಾಡಲಾಗುತ್ತದೆ.

English summary

The Story Behind Ganesh Chaturthi

Ganesh Chaturthi is one of the major festivals celebrated in India with great enthusiasm and devotion. The festival marks the birthday of Lord Ganesha; the Lord of knowledge, wisdom, prosperity and good fortune. The festival is also known as Vinayak Chaturthi or Vinayak Chavithi. This day, observed as one of the most auspicious in the Hindu religion, is widely celebrated especially in the state of Maharashtra.
Story first published: Wednesday, September 16, 2015, 17:04 [IST]
X
Desktop Bottom Promotion