For Quick Alerts
ALLOW NOTIFICATIONS  
For Daily Alerts

ಶಕ್ತಿಶಾಲಿಯಾದ ಹನುಮಂತನು ಅರ್ಜುನನ ಮುಂದೆ ಶರಣಾದನೇ?

By Super
|

ಭಾರತದ ಮಹಾ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತ ಎರಡರಲ್ಲೂ ಸಮಾನ ಪಾತ್ರಗಳಿಲ್ಲ. ಆದರೆ ಒಂದು ಪಾತ್ರ ಮಾತ್ರ ಒಂದು ಸ್ತಬ್ಧಚಿತ್ರದ ಮೂಲಕ ಕಂಡುಬರುತ್ತದೆ. ಅದೇ ಕಪಿಧ್ವಜ. ಈ ಧ್ವಜದ ಕುರಿತು ಸ್ವಾರಸ್ಯಕರವಾದ ಕಥೆಯೊಂದಿದೆ.

ತ್ರೇತಾಯುಗದಲ್ಲಿ ಅರ್ಜುನ ಚಂದ್ರಗೋಳಪುರ ಎಂಬ ಸ್ಥಳದ ರಾಜನಾಗಿದ್ದು ವಿಜಯ ಎಂಬ ಹೆಸರು ಪಡೆದಿದ್ದ. ಪ್ರಜೆಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾ ರಾಜ್ಯಭಾರ ಮಾಡುತ್ತಿದ್ದವನಿಗೆ ಒಂದು ಬಾರಿ ಎಂಟೂ ದಿಕ್ಕುಗಳನ್ನು ಜಯಿಸುವ ರಾಜನಾಗಬೇಕೆಂಬ ಬಯಕೆ ಉಂಟಾಯಿತು. ಇದನ್ನು ಜಯಿಸಲು ತನ್ನ ಗುರುವಿನಿಂದ ಮಂತ್ರದೀಕ್ಷೆ ಪಡೆದು ತಪಸ್ಸು ಮಾಡಿದ.

ಈತನ ತಪಸ್ಸಿಗೆ ಮೆಚ್ಚಿ ಹನುಮಂತ ಮತ್ತು ಸುಗ್ರೀವರು ಪ್ರತ್ಯಕ್ಷರಾಗಿ ಅದು ಈ ಜನ್ಮದಲ್ಲಿ ಸಾಧ್ಯವಿಲ್ಲ, ಮುಂದಿನ ಜನ್ಮದಲ್ಲಿ ಸಾಧ್ಯವಾಗುತ್ತದೆ ಎಂದರು. ಅಂತೆಯೇ ಮುಂದಿನ ಜನ್ಮದಲ್ಲಿ ದ್ವಾಪರಯುಗದಲ್ಲಿ ಕುಂತಿಯ ಮಗ ಅರ್ಜುನನಾಗಿ ಜನಿಸಿದ. ಕೊಂಚ ಕಾಲದ ಬಳಿಕ ಹಿಂದಿನ ಜನ್ಮದ ಅಭಿಲಾಶೆ ನೆನಪಾಗಿ ಪುನಃ ದಿಗ್ವಿಜಯಕ್ಕೆಂದು ಹೊರಟ. ಹೀಗೇ ಅಲೆಯುತ್ತಿದ್ದಾಗ ರಾಮ ಲಂಕೆಗೆ ಸೇತುವೆ ಕಟ್ಟಿದ್ದಲ್ಲಿ ಬಂದು ತಲುಪಿದ. ಈ ಬಗ್ಗೆ ಅಲ್ಲಿಯೇ ಇದ್ದ ಕಪಿಯೊಂದು ಎಲ್ಲಾ ವಿವರ ನೀಡಿತು. ಮಹಾಭಾರತದ ಯುದ್ಧದ ವಿಜಯದಿಂದ ಹೆಮ್ಮೆಪಡುತ್ತಿದ್ದ ಅರ್ಜುನ ಈ ಕಥೆ ಕೇಳಿ ಕಪಿಗಳನ್ನು ಹಾಸ್ಯ ಮಾಡುತ್ತಾ, ತಾನಾಗಿದ್ದಿದ್ದರೆ ಇದೇ ವೇಳೆ ಕೇವಲ ಬಾಣದಿಂದಲೇ ಸೇತುವೆ ನಿರ್ಮಿಸಿ

Mythological Tales of Hanuman and Arjuna

ಸುಲಭವಾಗಿ ಲಂಕೆ ತಲುಪುತ್ತಿದ್ದೆ ಎಂದು ಚೇಷ್ಟೆಯಾಡಿದ. ಕೂಡಲೇ ಕಪಿಗಳಲ್ಲಿಯೇ ಮಹಾಕಪಿಯಾದ ಹನುಮಂತ ಪ್ರತ್ಯಕ್ಷನಾಗಿ ಸರಿ, ತೋರು ನಿನ್ನ ಪರಾಕ್ರಮವನ್ನು ಬಾಣದಿಂದ ಸೇತುವೆ ನಿರ್ಮಿಸು, ನನ್ನ ಭಾರ ಹೊರಲಾಗುತ್ತದೆಯೋ ನೋಡು ಎಂದ. ಇತಿಹಾಸದಲ್ಲೇ ಹೊಸ ತಿರುವು ಭೀಮ-ಹನುಮಂತನು ಸಹೋದರರಂತೆ!

ತಕ್ಷಣ ಬಾಣಗಳಿಂದ ತುಂಬಿದ್ದ ತನ್ನ ಬತ್ತಳಿಕೆಯನ್ನು ತೆಗೆದ ಅರ್ಜುನ ಕ್ಷಣಮಾತ್ರದಲ್ಲಿ ಭಾರತದಿಂದ ಲಂಕೆಯವರೆಗೂ ಬಾಣಗಳ ಸೇತುವೆಯನ್ನು ನಿರ್ಮಿಸಿಯೇ ಬಿಟ್ಟ. ಬಳಿಕ ಹನುಮಂತನಿಗೆ ಈ ಸೇತುವೆಯ ಮೇಲೆ ನಡಿ, ಒಂದು ವೇಳೆ ಇದು ಚೂರಾದರೆ ನಾನು ಅಗ್ನಿಪ್ರವೇಶ ಮಾಡಿ ಪ್ರಾಣ ಬಿಡುತ್ತೇನೆ ಎಂದು ಸವಾಲು ಎಸೆದ. ಹನುಮಂತ ಒಂದು ಹೆಜ್ಜೆ ಇಟ್ಟನೋ ಇಲ್ಲವೋ, ಇಡಿಯ ಸೇತುವೆ ಲಟಲಟನೆ ಮುರಿದುಬಿತ್ತು.

ದಿಗ್ಭ್ರಾಂತನಾದ ಅರ್ಜುನ ಮತ್ತೊಮ್ಮೆ ತನ್ನ ಧನುಸ್ಸಿನಿಂದ ಬಾಣಗಳ ಮತ್ತೊಂದು ಸೇತುವೆಯನ್ನು ಕಟ್ಟಿದ. ಹನುಮಂತ ಈ ಸೇತುವೆಯ ಮೇಲೆ ಕಾಲಿಟ್ಟ ತಕ್ಷಣ ಈ ಸೇತುವೆಯೂ ಮುರಿದುಬಿತ್ತು. ಜೊತೆಗೇ ಅರ್ಜುನನ ಅಹಂಭಾವವೂ ಮುರಿದುಬಿತ್ತು. ಸೋಲೊಪ್ಪಿಕೊಂಡ ಅರ್ಜುನ ಅಗ್ನಿಪ್ರವೇಶಿಸಿ ಪ್ರಾಣ ಕಳೆದುಕೊಳ್ಳಲು ಸಿದ್ಧನಾದ. ಆಗ ಅಲ್ಲಿ ಪ್ರತ್ಯಕ್ಷನಾದ ಬಾಲಕನೊಬ್ಬ ಅರ್ಜುನನನ್ನು ಕುರಿತು "ಏಕೆ ಹೀಗೆ ಮಾಡುತ್ತಿದ್ದೀರಿ"ಎಂದು ವಿಚಾರಿಸಿದ. ಅರ್ಜುನ ಮತ್ತು ಹನುಮಂತ ಇದುವರೆಗೆ ನಡೆದ ಘಟನೆಗಳನ್ನು ತಿಳಿಸಿದರು. ಇದಕ್ಕೆ ಉತ್ತರ ನೀಡಿದ ಬಾಲಕ, ನೀವಿಬ್ಬರೂ ಹೇಳುತ್ತಿರುವುದು ಸತ್ಯವೇ ಇರಬಹುದು, ಆದರೆ ಇದನ್ನು ಖಚಿತವಾಗಿ ನೋಡಿದವರಾರೂ ಇಲ್ಲವಲ್ಲ, ನೀವು ಇನ್ನೊಮ್ಮೆ ಸೇತುವೆ ಕಟ್ಟಿ ಮುರಿಯಿರಿ, ನಾನು ಸಾಕ್ಷಿಯಾಗಿರುತ್ತೇನೆ. ಆ ಬಳಿಕ ಅಗ್ನಿಪ್ರವೇಶ ಮಾಡುವಿರಂತೆ ಎಂದ.

ಇದಕ್ಕೆ ಒಪ್ಪಿದ ಅರ್ಜುನ ಇನ್ನೊಂದು ಸೇತುವೆಯನ್ನು ಕಟ್ಟಿದ. ಈಗ ಹನುಮಂತ ಸೇತುವೆ ಮೇಲೆ ಏರಿದ, ಸೇತುವೆ ಮುರಿಯಲಿಲ್ಲ. ಸೇತುವೆ ಮೇಲೆ ಜಿಗಿದಾಡಿದ, ಮುರಿಯಲಿಲ್ಲ, ಕೋಪವೇರಿ ತನ್ನೆಲ್ಲಾ ಶಕ್ತಿಯನ್ನು ಉಪಯೋಗಿಸಿದ ಆದರೂ ಮುರಿಯಲಿಲ್ಲ. ರಾಮಾಯಣದ ಸಮಯದಲ್ಲಿ ಸೀತಾಮಾತೆಯಿಂದ ಪಡೆದ ಶಕ್ತಿಯನ್ನು ಈಗ ಉಪಯೋಗಿಸುತ್ತೇನೆ ಎಂದ ಹನುಮಂತ ಗಾತ್ರದಲ್ಲಿ ಬೆಳೆಯುತ್ತಾ ಹೋದ. ಬೆಳೆಯುತ್ತಾ ಬೆಳೆಯುತ್ತಾ ದೊಡ್ಡ ಪರ್ವತದ ಗಾತ್ರದಷ್ಟು ಬೆಳೆದ. ಆದರೂ ಸೇತುವೆ ಮುರಿಯಲಿಲ್ಲ!

ಇದನ್ನೆಲ್ಲಾ ನೋಡುತ್ತಿದ್ದ ಅರ್ಜುನ ಇಬ್ಬಂದಿಯಲ್ಲಿ ಸಿಕ್ಕುಬಿದ್ದ. ಈ ಹುಡುಗ ಸಾಮಾನ್ಯನಲ್ಲ, ಏಕೆಂದರೆ ಇದೇ ಸೇತುವೆ ಇದಕ್ಕೂ ಮೊದಲು ಹುಲ್ಲುಕಡ್ಡಿಯಂತೆ ಮುರಿದುಬಿದ್ದಿತ್ತು. ಈಗ ಪರ್ವತಗಾತ್ರದ ಹನುಮಂತನಿಗೂ ಮಿಸುಕಾಡುತ್ತಿಲ್ಲ ಎಂದರೆ ಈ ಶಕ್ತಿ ಸ್ವಯಂ ಭಗವಂತ ಶ್ರೀಕೃಷ್ಣನಿಂದಲೇ ಬಂದಿರಬೇಕು ಎಂದುಕೊಂಡ. ಇತ್ತ ಹನುಮಂತನ ಮನದಲ್ಲಿಯೂ ಇದೇ ವಿಚಾರ ಮುಂದುವರೆದಿತ್ತು. ಹಿಂದಿನ ಎರಡೂ ಸೇತುವೆಗಳು ಹುಲ್ಲುಕಡ್ಡಿಯಂತೆ ಮುರಿದಿದ್ದುದು ಈಗ ಪರ್ವತಗಾತ್ರದಿಂದಲೂ ಮುರಿಯುತ್ತಿಲ್ಲವೆಂದರೆ ಇದಕ್ಕೆ ಆ ಹುಡುಗನೇ ಕಾರಣನಿರಬಹುದು, ಹೌದು ಆತ ನನ್ನ ಜಂಬವನ್ನು ಮುರಿಯಲು ಬಂದಿರುವ ಶ್ರೀರಾಮನೇಆಗಿರಬಹುದು ಎಂದು ಯೋಚಿಸಿದ. ಬ್ರಹ್ಮ, ವಿಷ್ಣು, ಮಹೇಶ್ವರ - ಈ ತ್ರಿಮೂರ್ತಿಗಳಲ್ಲಿ ಯಾರು ಸಮರ್ಥರು?

ಕೂಡಲೇ ಸ್ವಗಾತ್ರಕ್ಕೆ ಇಳಿದ ಹನುಮಂತ ಮತ್ತು ಅರ್ಜುನ ಇಬ್ಬರೂ ಆ ಹುಡುಗನ ಕಾಲಿಗೆರೆದರು. ಆಗ ಆ ಹುಡುಗ ತನ್ನ ನಿಜರೂಪವನ್ನು ತೋರಿದ. ಇಬ್ಬರ ಕಲ್ಪನೆಗೂ ಮೀರಿ ಆತ ಭಗವಾನ್ ವಿಷ್ಣುವಾಗಿದ್ದ. ಆತ ಹೇಳಿದ 'ಅರ್ಜುನ, ನೀನು ನಿನ್ನ ವಿದ್ಯೆಯನ್ನು ಕುರಿತು ಅತಿ ಹೆಚ್ಚಿನ ಅಭಿಮಾನ ಹೊಂದಿದ್ದೆ. ವಿಪರೀತವಾದ ಅಭಿಮಾನ ಜಂಭಕ್ಕೆ ಬದಲಾಗಿತ್ತು. ಈ ಜಂಭ ನಿನ್ನ ವಿನಯವನ್ನು ಕೊಂದು ನಿನ್ನಲ್ಲಿನ ವಿನಮ್ರತೆಯನ್ನು ನಾಶಪಡಿಸಿತು. ಮತ್ತು ನೀನು, ಹನುಮಂತ, ನಿನ್ನ ಅಪಾರ ಶಕ್ತಿಯನ್ನು ಕುರಿತು ನಿನ್ನಲ್ಲೂ ಜಂಭ ಮೂಡಿತ್ತು. ನಿನ್ನ ಅಪಾರ ಶಕ್ತಿಯನ್ನು ಕೇವಲ ನಿನ್ನ ಅಹಂಕಾರದ ಪ್ರದರ್ಶನಕ್ಕಾಗಿ ಉಪಯೋಗಿಸಲು ಸಿದ್ಧನಾದೆ.

ನಿಮ್ಮಬ್ಬರಿಗೂ ಶಿಕ್ಷೆಯಾಗಬೇಕು. ಇದಕ್ಕೆ ಪ್ರತೀಕಾರವಾಗಿ ಇಂದಿನಿಂದ ನೀನು ಅರ್ಜುನನ ಧ್ವಜದಲ್ಲಿರಬೇಕು' ಎಂದು ಆಜ್ಞಾಪಿಸಿದ. ಪ್ರಭುವಿನ ಅಣತಿಯಂತೆ ಮಹಾಭಾರತದಲ್ಲಿ ಅರ್ಜುನನ ರಥದ ಧ್ವಜದಲ್ಲಿ ಹನುಮಂತನಿದ್ದ ಕಾರಣ ಈ ಧ್ವಜಕ್ಕೆ ಕಪಿಧ್ವಜ ಎಂಬ ಹೆಸರು ಬಂದಿದೆ.

English summary

Mythological Tales of Hanuman and Arjuna

Once, Arjuna went on pilgrimage to holy places all over India. A Brahmin also went with him. First of all, they went to Rameshwaram on reaching there, the Brahmin said, “Arjuna, this is the place where Lord Rama and the monkeys had built a bridge of arrows from here to Sri Lanka...
X
Desktop Bottom Promotion