For Quick Alerts
ALLOW NOTIFICATIONS  
For Daily Alerts

ಗೃಹ ಪ್ರವೇಶವನ್ನು ಮಾಡುವ ವಿಧಾನ ಹೇಗೆ?

By Super
|

"ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು" ಎಂಬ ಗಾದೆ ಬಹುಶಃ ಎಲ್ಲರೂ ಕೇಳಿರುತ್ತಾರೆ. ಹೊಸ ಮನೆ ಕಟ್ಟುವುದಿರಲಿ ಅಥವಾ ಕೊಳ್ಳುವುದಿರಲಿ ಪ್ರತಿಯೊಬ್ಬರಲ್ಲಿಯೂ ಸಂಭ್ರಮ ಮನೆ ಮಾಡಿರುತ್ತದೆ. ಹೊಸ ಮನೆಯು ಅದರ ಮಾಲೀಕರಿಗೆ ಹೊಸ ಭರವಸೆ ಮತ್ತು ಆಕಾಂಕ್ಷೆಗಳನ್ನು ತರುವ ಮೂಲವಾಗಿ ಕಂಡು ಬರುತ್ತದೆ. ಇದಲ್ಲದೆ ಹೊಸ ಮನೆಯ ಗೃಹ ಪ್ರವೇಶವು ಅತ್ಯಂತ ಸಂಭ್ರಮ ಮತ್ತು ಸಡಗರದ ಜೊತೆಗೆ ಭಕ್ತಿ ಭಾವಗಳನ್ನು ಸಹ ಹೊಮ್ಮಿಸುತ್ತದೆ.

ಇಡೀ ವಿಶ್ವದಲ್ಲಿಯೇ ಹೊಸ ಮನೆಯ ಗೃಹ ಪ್ರವೇಶವು ಅವರವರ ಭಾವ-ಭಕ್ತಿ ಮತ್ತು ಧರ್ಮಗಳಿಗೆ ಅನುಸಾರವಾಗಿ ನೆರವೇರುತ್ತದೆ. ಇದು ಬಹುತೇಕ ಎಲ್ಲಾ ಸಂಸ್ಕೃತಿಗಳಲ್ಲೂ ಕಂಡು ಬರುತ್ತದೆ. ಮಾಲೀಕನು ಹೊಸ ಮನೆಗೆ ದೇವರ ಹೆಸರನ್ನು ಜಪಿಸುತ್ತ ಪ್ರವೇಶವನ್ನು ಮಾಡುತ್ತಾನೆ. ಇದರಿಂದ ಆ ಮನೆಯಲ್ಲಿ ಅದೃಷ್ಟ ಮತ್ತು ಐಶ್ವರ್ಯಗಳು ಸದಾ ನೆಲೆಸುತ್ತವೆ ಎಂಬ ನಂಬಿಕೆ ಅವರಿಗಿರುತ್ತದೆ.

ಹಿಂದೂ ಧರ್ಮದಲ್ಲಿ ಗೃಹ ಪ್ರವೇಶವು ಒಬ್ಬ ವ್ಯಕ್ತಿಯ ವೈಯುಕ್ತಿಕ ಜೀವನದಲ್ಲಿ ಅತ್ಯಂತ ಮಹತ್ವದ ದಿನವಾಗಿರುತ್ತದೆ. ಗೃಹ ಪ್ರವೇಶವು ಒಬ್ಬ ವ್ಯಕ್ತಿಯ ಕಷ್ಟಾರ್ಜಿತ ಹಣದಿಂದ ಬೆವರು ಸುರಿಸಿ, ಶ್ರಮ ಪಟ್ಟು, ಯಶಸ್ವಿಯಾಗಿ ಮನೆ ಕಟ್ಟಿ ಪೂರೈಸಿದನೆಂಬುದನ್ನು ಇತರರಿಗೆ ತೋರಿಸುವ ವಿಧಿಯಾಗಿರುತ್ತದೆ. ಗೃಹ ಪ್ರವೇಶದ ದಿನ ಕುಟುಂಬದ ಸದಸ್ಯರು ಆ ಮನೆಗೆ ಗೊತ್ತು ಪಡಿಸಿದ ಮುಹೂರ್ತದಲ್ಲಿ ದೇವರಿಗೆ ಪೂಜಾ ಕೈಂಕರ್ಯಗಳನ್ನು ಮಾಡಿ, ನಮ್ಮನ್ನು ಎಲ್ಲಾ ರೀತಿಯ ದುಷ್ಟ ಶಕ್ತಿಗಳಿಂದ ಮತ್ತು ಸಂಕಷ್ಟಗಳಿಂದ ಪಾರು ಮಾಡು ದೇವಾ ಎಂದು ಕೋರುತ್ತ ಮನೆಗೆ ಪ್ರವೇಶ ಮಾಡುತ್ತಾರೆ.

ಈ ಗೃಹ ಪ್ರವೇಶದ ವಿಧಿ ವಿಧಾನಗಳಲ್ಲಿ ಕೆಲವೊಂದು ವಿಧಿಗಳನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ. ಅದಕ್ಕೆ ತನ್ನದೇ ಆದ ಕ್ರಮಗಳು ಇವೆ. ಇಲ್ಲಿ ನಾವು ಹೊಸ ಮನೆಯನ್ನು ಪ್ರವೇಶಿಸುವ ನಮ್ಮ ಓದುಗರಿಗಾಗಿ ಅವುಗಳನ್ನು ನೀಡಿದ್ದೇವೆ ಓದಿ ತಿಳಿದುಕೊಳ್ಳಿ.

ಗೃಹ ಪ್ರವೇಶಕ್ಕೆ ಬೇಕಾಗಿರುವ ಸಾಮಾಗ್ರಿಗಳು

ಗೃಹ ಪ್ರವೇಶಕ್ಕೆ ಬೇಕಾಗಿರುವ ಸಾಮಾಗ್ರಿಗಳು

ಗಣಪತಿಯ ವಿಗ್ರಹ ಮತ್ತು ಲಕ್ಷ್ಮೀ ಕಳಶ ಅಥವಾ ನೀರನ್ನು ತುಂಬಿರುವ ಒಂದು ಸಣ್ಣ ಕೊಡ. ತೋರಣ, ಸಾಮಾನ್ಯವಾಗಿ ಮಾವಿನ ಎಲೆಗಳ ತೋರಣ. ಇನ್ನೂ ಜೊತೆಗೆ ಪೂಜೆ ಸಾಮಾನುಗಳಾದ ಅರಿಶಿಣ, ಕುಂಕುಮ, ಅಗರಬತ್ತಿ, ಕರ್ಪೂರ, ದೀಪಗಳು, ಗಂಧ, ಹಣ್ಣುಗಳು, ಹೂವುಗಳು, ಸಿಹಿ - ತಿನಿಸು ಮತ್ತು ದೇವರಿಗೆ ನೈವೇದ್ಯಗಳು. ಇನ್ನೂ ಹೋಮವನ್ನು ಮಾಡಲು ಬೇಕಾದ ಸಾಮಾಗ್ರಿಗಳು ಅಂದರೆ ಹೋಮದ ಕುಂಡ (ಕಬ್ಬಿಣದ ಬಾಣಲೆಯಂತದ್ದು, ಇಲ್ಲವಾದಲ್ಲಿ ಇಟ್ಟಿಗೆ ಮತ್ತು ಮರಳನ್ನು ಸಹ ಬಳಸುತ್ತಾರೆ.) ಸೌದೆ, ತುಪ್ಪ, ಹವನದ ಪುಡಿ, ಬೆಂಕಿ ಪೊಟ್ಟಣ ಇತ್ಯಾದಿ. ಹಾಲಿನ ಪಾತ್ರೆ.

ಮಂಗಳ ಮುಹೂರ್ತ

ಮಂಗಳ ಮುಹೂರ್ತ

ಗೃಹ ಪ್ರವೇಶಕ್ಕೆ ಒಳ್ಳೆಯ ಮುಹೂರ್ತವನ್ನು ಜ್ಯೋತಿಷ್ಯಿಗಳಿಂದ ನಿರ್ಧರಿಸಿಕೊಂಡಷ್ಟು ಒಳ್ಳೆಯದು. ಸೂರ್ಯನು ಉತ್ತರಕ್ಕೆ ಚಲಿಸುವ ಉತ್ತರಾಯಣ ಪುಣ್ಯ ಕಾಲವು ಇದಕ್ಕೆ ಒಳ್ಳೆಯ ಸಮಯ. ಅಲ್ಲದೆ ಅಕ್ಷಯ ತೃತಿಯಾ ಮತ್ತು ವಿಜಯ ದಶಮಿಗಳಂತಹ ಸಾರ್ವತ್ರಿಕ ಪುಣ್ಯ ದಿನಗಳಂದು ಗೃಹ ಪ್ರವೇಶ ಮಾಡಿದರೆ ಮತ್ತಷ್ಟು ಒಳ್ಳೆಯದು ಗೃಹ ಪ್ರವೇಶದ ದಿನ ಬ್ರಾಹ್ಮಿ ಮುಹೂರ್ತದಲ್ಲಿ ಮನೆಯನ್ನು ಪ್ರವೇಶ ಮಾಡಿದರೆ ಶುಭವಾಗುತ್ತದೆ.

ಗೋಮಾತೆಯ ಪೂಜೆ

ಗೋಮಾತೆಯ ಪೂಜೆ

ಹಿಂದೂ ಧರ್ಮದಲ್ಲಿ ಗೋವು ಎಂದರೆ ಸಾಕ್ಷಾತ್ ಮುಕ್ಕೋಟಿ ದೇವತೆಗಳ ಅವಾಸ ಸ್ಥಾನ. ಆದ್ದರಿಂದ ಗೃಹ ಪ್ರವೇಶದ ದಿನ ಹಸುವಿಗೆ ಹೂವಿನ ಹಾರಗಳಿಂದ ಅಲಂಕರಿಸಿ, ಮನೆಯ ಒಳಗೆ ಕರೆದುಕೊಂಡು ಹೋಗಿ ಪ್ರತಿ ಕೋಣೆಯನ್ನು ಸುತ್ತಾಡಿಸಿ, ಅದರ ಆಶೀರ್ವಾದವನ್ನು ಬೇಡುತ್ತಾರೆ. ಹಸುವಿನ ಜೊತೆಗೆ ಕರುವಿದ್ದರೆ ಮತ್ತಷ್ಟು ಒಳ್ಳೆಯದು. ಒಂದನೆ ಮಹಡಿ ಅಥವಾ ಇತರೆ ಮಹಡಿಗಳಲ್ಲಿ ಮನೆಯನ್ನೋ ಅಥವಾ ಫ್ಲಾಟ್ ಖರೀದಿಸಿದವರು ಕಾಮಧೇನುವನ್ನು ಹೇಗೆ ಪೂಜೆ ಮಾಡುವುದು ಎಂದು ಚಿಂತಿಸಬೇಕಾಗಿಲ್ಲ. ಕೆಳಗಿನ ಮಹಡಿಯಲ್ಲಿ ಚಪ್ಪರ ಹಾಕಿ ಅಲ್ಲೇ ಗೋಮಾತೆಯನ್ನು ಪೂಜಿಸಿ.

ಹೊಸ್ತಿಲು ಪೂಜೆ

ಹೊಸ್ತಿಲು ಪೂಜೆ

ಇದು ತುಂಬಾ ಮುಖ್ಯವಾದುದು. ಗಣಪತಿ, ಲಕ್ಷ್ಮೀ ಮತ್ತು ಸರಸ್ವತಿಯರನ್ನು ಆರಾಧಿಸಿ, ನಮ್ಮನ್ನು ದುಷ್ಟ ಶಕ್ತಿಗಳಿಂದ ರಕ್ಷಿಸಿ ಎಂದು ಮನೆಯ ಹೊಸಿಲಿನಲ್ಲಿ ಪೂಜೆ ಮಾಡುತ್ತಾರೆ.

ಮಾಲೀಕರ ಪ್ರವೇಶ

ಮಾಲೀಕರ ಪ್ರವೇಶ

ಮನೆಯ ಮಾಲೀಕರ ಹೆಂಡತಿ ಮೊದಲು ತಮ್ಮ ಕೈಯಲ್ಲಿ ತುಂಬಿದ ಕೊಡವನ್ನು ಹಿಡಿದುಕೊಂಡು, ಬಲಗಾಲನ್ನು ಒಳಗೆ ಇಟ್ಟು ಮನೆಯನ್ನು ಪ್ರವೇಶಿಸಬೇಕು. ಮನೆಯ ಮಾಲೀಕನು ದೇವರ ವಿಗ್ರಹವನ್ನು ಹಿಡಿದುಕೊಂಡು ಆಕೆಯನ್ನು ಅನುಸರಿಸಿಕೊಂಡು ಮನೆಯನ್ನು ಪ್ರವೇಶಿಸುತ್ತಾನೆ. ಆನಂತರ ಐಶ್ವರ್ಯವನ್ನು ಸೂಚಿಸುವ ದಿನಸಿ ವಸ್ತುಗಳನ್ನು ಹಿಡಿದುಕೊಂಡು ಮನೆಯ ಮಕ್ಕಳು ಮನೆಯೊಳಗೆ ಪ್ರವೇಶಿಸುತ್ತಾರೆ. ಕಡೆಯಲ್ಲಿ ಬಂಧುಗಳು ಈ ಮನೆಯನ್ನು ಪ್ರವೇಶಿಸುತ್ತಾರೆ.

ಗಣಪತಿ ಹೋಮ

ಗಣಪತಿ ಹೋಮ

ಹೋಮ ಕುಂಡವನ್ನು ಹೊತ್ತಿಸಿ, ಅದರಲ್ಲಿ ಮೊದಲು ಗಣಪತಿಯನ್ನು ಆವಾಹಿಸಿ ಪೂಜೆ ಸಲ್ಲಿಸುತ್ತಾರೆ. ಗಣಪತಿಯು ಸರ್ವ ವಿಘ್ನಗಳ ನಿವಾರಕನೆಂದೇ ಖ್ಯಾತಿ ಪಡೆದಿರುವವನು. ಗೃಹ ಪ್ರವೇಶಕ್ಕೆ ಇರುವ ಸರ್ವ ವಿಘ್ನಗಳನ್ನು ನಿವಾರಿಸು ಎಂದು ದೇವರನ್ನು ಈ ಹೋಮದ ಮೂಲಕ ಕೇಳಿಕೊಳ್ಳಲಾಗುತ್ತದೆ.

ನವಗ್ರಹ ಹೋಮ

ನವಗ್ರಹ ಹೋಮ

ನವಗ್ರಹಗಳನ್ನು ತೃಪ್ತಿ ಪಡಿಸಲು ಈ ಹೋಮವನ್ನು ಮಾಡಲಾಗುತ್ತದೆ. ಒಂಬತ್ತು ಗ್ರಹಗಳು ಮನೆಯನ್ನು ಕರುಣಿಸಲಿ, ತಮ್ಮ ಕೃಪಾ ಕಟಾಕ್ಷವನ್ನು ಮನೆಯವರ ಮೇಲೆ ತೋರಲಿ ಎಂದು ಈ ಪೂಜೆಯನ್ನು ಮಾಡಲಾಗುತ್ತದೆ.

ಲಕ್ಷ್ಮೀ ಹೋಮ

ಲಕ್ಷ್ಮೀ ಹೋಮ

ಲಕ್ಷ್ಮೀಯು ಹೊಸ ಮನೆಯಲ್ಲಿ ಐಶ್ವರ್ಯ, ಸಂಪತ್ತು ಮತ್ತು ಉತ್ತಮ ಆರೋಗ್ಯವನ್ನು ಕರುಣಿಸಲಿ ಎಂದು ಆಕೆಯನ್ನು ಆಹ್ವಾನಿಸುತ್ತ ಈ ಹೋಮವನ್ನು ಮಾಡಲಾಗುತ್ತದೆ.

ಹಾಲು ಉಕ್ಕಿಸುವ ವಿಧಿ

ಹಾಲು ಉಕ್ಕಿಸುವ ವಿಧಿ

ಪೂಜೆಯಾದ ನಂತರ ಮನೆಯಲ್ಲಿ ಮೊದಲು ಒಲೆ ಹಚ್ಚಿದ ನಂತರ ಅದರಲ್ಲಿ ಹಾಲನ್ನು ಕಾಯಿಸಬೇಕು. ಗೃಹ ಪ್ರವೇಶದಲ್ಲಿ ಹಾಲನ್ನು ಕಾಯಿಸಿ ಉಕ್ಕಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಹಾಲು ಉಕ್ಕಿದಂತೆ ಈ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಉಕ್ಕಲಿ ಎಂಬ ಆಶಯ ಇದರಲ್ಲಿರುತ್ತದೆ. ಆನಂತರ 24ಗಂಟೆಗಳ ಕಾಲ ಈ ಮನೆಯನ್ನು ಯಾವುದೇ ಕಾರಣಕ್ಕು ಖಾಲಿ ಬಿಡಬಾರದು.

English summary

ಗೃಹ ಪ್ರವೇಶವನ್ನು ಮಾಡುವುದು ಹೇಗೆ?

Buying a house is a matter of great excitement for everyone. The new house is a source of new hopes and aspirations for the owner. Hence, the entry into new house has to be grand and auspicious. Griha Pravesh or house warming ceremony is a popular ritual which is followed in most cultures around the world.
X
Desktop Bottom Promotion