For Quick Alerts
ALLOW NOTIFICATIONS  
For Daily Alerts

ವಿಜಯ ದಶಮಿ 2019: ವಿಜಯ ದಶಮಿಯ ದಿನವೇ, ಪಾಂಡವರ ವಿಜಯೋತ್ಸವ!

By Manasa K M
|

ವಿಜಯದಶಮಿ ಅಂದರೆ ದಸರಾ ಹಬ್ಬದ ನವರಾತ್ರಿ ಕಳೆದು ಹತ್ತನೆಯ ದಿನ. ಈ ದಿನ ವಿಜಯದ ಸಂಕೇತ. ಈ ವಿಜಯದಶಮಿಗೆ ಬಹಳ ಕಥೆಗಳು ಇವೆ. ಶ್ರೀ ರಾಮನು ರಾವಣನ ವಿರುದ್ಧ ಯುದ್ಧ ಮಾಡಿ ಗೆದ್ದ ದಿನ ಇದು ಎಂಬ ಪ್ರತೀತಿ ಇದೆ. ಇದೆ ಅಲ್ಲದೆ ಶ್ರೀ ಚಾಮುಂಡೇಶ್ವರಿ ದೇವಿಯು ಅಸುರನಾದ ಮಹಿಷಾಸುರನನ್ನು ಸಂಹರಿಸಿದ ದಿನ ಕೂಡ ಎನ್ನುತ್ತಾರೆ. ಇನ್ನೊಂದು ಜನಪ್ರಿಯ ಕಥೆ ಎಂದರೆ ಮಹಾಭಾರತದ ವಿರಾಟಪರ್ವದಲ್ಲಿ ಪಾಂಡವರು ಯುದ್ಧ ಗೆದ್ದ ಕಥೆ. 2019 ವಿಜಯದಶಮಿ ವಿಶೇಷ ಅದೇನು ಕಥೆ ಎಂದು ನೋಡೋಣವೇ. ನಾಡಹಬ್ಬ ದಸರಾದ ಹಿನ್ನೆಲೆ, ಆಚರಣೆಗಳ ಮಹತ್ವ

ಮಹಾಭಾರತದಲ್ಲಿ ಕೌರವರು ಹಾಗೂ ಪಾಂಡವರು ಜೂಜಾಟ ಆಡುವಾಗ ಪಾಂಡವರು ಸೋತು ಹೋಗುತ್ತಾರೆ. ಸೋತ ನಂತರ ಷರತ್ತಿನಂತೆ ಹನ್ನೆರಡು ವರುಷ ವನವಾಸ ಹಾಗೂ ಹದಿಮೂರನೆಯ ವರುಷ ಅಜ್ಞಾತವಾಸವನ್ನು ಮಾಡಲು ದ್ರೌಪದಿ ಸಮೇತ ಹೊರಡುತ್ತಾರೆ. ಹನ್ನೆರಡು ವರುಷ ವನವಾಸ ಕಳೆದ ನಂತರ ಒಂದು ವರುಷದ ಅಜ್ಞಾತವಾಸ ಬಹು ಕಷ್ಟದ ಷರತ್ತು.

mahabharatha Pandavru

ಈ ವರುಷ ಅವರನ್ನು ಕೌರವರು ಹಾಗೂ ಇತರ ಯಾರೇ ಗುರುತು ಹಿಡಿದರೂ ಮತ್ತೆ ಹನ್ನೆರಡು ವರುಷ ವನವಾಸವೇ ಗತಿ. ಹೀಗಾಗಿ ಹನ್ನೆರಡು ವರುಷದ ನಂತರ ಅವರು ತಮ್ಮ ಅಜ್ಞಾತವಾಸವನ್ನು ಕಳೆಯಲು ವಿರಾಟ ಮಹಾರಾಜನ ರಾಜ್ಯಕ್ಕೆ ಹೊರಡುತ್ತಾರೆ. ಅಲ್ಲಿ ತಮ್ಮನ್ನು ಯಾರು ಗುರುತಿಸದೆ ಇರಲು ಮಾರುವೇಷಗಳನ್ನು ಧರಿಸುತ್ತಾರೆ. ಮಹಾಭಾರತದಲ್ಲಿ ವರ್ಣಿಸಲಾದ ಸುರಸುಂದರಿಯರ ಕಥೆ

ಪಾಂಡವರಲ್ಲಿ ದೊಡ್ಡವರಾದ ಧರ್ಮರಾಜನು "ಕಂಕ" ಎಂಬ ಹೆಸರಿನಲ್ಲಿ ವಿರಾಟ ರಾಜನ ಸಭೆಯಲ್ಲಿ ಬ್ರಾಂಹಣನಾಗಿ ಸೇರುತ್ತಾನೆ. ಎರಡನೆಯವನಾದ ಭೀಮಸೇನ ತನ್ನ ಹೆಸರನ್ನು "ಬಲ್ಲವ" ಎಂದು ಬದಲಿಸಿಕೊಂಡು ಅರಮನೆಯ ಅಡುಗೆ ಭಟ್ಟನಾಗಿ ಹಾಗೂ ಮೂರನೆಯವನಾದ ಅರ್ಜುನನು ತನಗೆ ಉರ್ವಶಿಯು ಕೊಟ್ಟ ಶಾಪವನ್ನು ಧರಿಸಿ "ಬೃಹನ್ನಳೆ"ಯಾಗಿ ಅರಮನೆಯ ಹೆಣ್ಣು ಮಕ್ಕಳಿಗೆ ನಾಟ್ಯ ಗುರುವಾಗಿ ಸೇರಿಕೊಳ್ಳುತ್ತಾರೆ.

ನಕುಲನು "ಗ್ರಂತಿಕ" ಎಂಬ ಹೆಸರಿನಲ್ಲಿ ಕುದುರೆಗಳ ಪಾಲಕನಾಗಿ ಹಾಗೂ ಸಹದೇವನು "ತಂತಿಪಾಲ" ಎಂಬ ಹೆಸರಿನೊಂದಿಗೆ ಹಸುಗಳ ಮೇಲ್ವಿಚಾರಕನಾಗಿ ಅದೇ ವಿರಾಟ ರಾಜನ ಆಶ್ರಯ ಪಡೆಯುತ್ತಾರೆ. ಪಾಂಡವರ ಪಟ್ಟದ ರಾಣಿ ದ್ರೌಪದಿಯು "ಸೈರಂದ್ರಿ" ಎಂಬ ಹೆಸರಿನಲ್ಲಿ ಮಹಾರಾಣಿಯ ಬಳಿ ಕೇಶಾಲಂಕಾರ ನಿಪುಣೆಯಾಗಿ ಸೇರಿಕೊಳ್ಳುತ್ತಾಳೆ. ಯಜ್ಞಕುಂಡದಿಂದ ಆವಿರ್ಭವಿಸಿದ ದ್ರೌಪದಿಯ ಜನ್ಮ ರಹಸ್ಯ

ಹೇಗೆ ಎಲ್ಲರೂ ತಮ್ಮ ತಮ್ಮ ಮಾರುವೇಷದಲ್ಲಿ ವಿರಾಟನಗರಿಯನ್ನು ಪ್ರವೇಶಿಸುವುದಕ್ಕೆ ಮುಂಚೆ ಅವರ ಅಸ್ತ್ರಗಳನ್ನು ಬಚ್ಚಿಡಬೇಕಾಗುತ್ತದೆ. ಎಲ್ಲಿ ಎಂದು ಹುಡುಕುತ್ತಿರಲು, ರಾಜ್ಯದ ಗಡಿಯಲ್ಲಿ ಒಂದು ಸ್ಮಶಾನದ ಹತ್ತಿರ ಒಂದು ದೊಡ್ಡ "ಶಮೀವೃಕ್ಷವು" ಕಾಣಿಸುತ್ತದೆ. ಇಂತಹ ಪುಣ್ಯವೃಕ್ಷದ ಮೇಲೆ ತಮ್ಮ ದಿವ್ಯ ಅಸ್ತ್ರಗಳನ್ನು ಯಾರಿಗೂ ಕಾಣದಂತೆ ಬಚ್ಚಿಡುತ್ತಾರೆ.

ಹೇಗೆ ದ್ರೌಪದಿ ಸಮೇತ ಪಂಚ ಪಾಂಡವರು ವಿರಾಟ ರಾಜನ ಆಶ್ರಯದಲ್ಲಿ ಯಾರಿಗೂ ಅನುಮಾನ ಬರದಂತೆ ಕಾಲ ಕಳೆಯುತ್ತಿರುತ್ತಾರೆ. ವರುಷ ಕಳೆಯಲು ಇನ್ನೂ ಕೆಲವೇ ದಿನಗಳು ಇದ್ದಾಗ ದ್ರೌಪದಿಗೆ ಒಂದು ಕಷ್ಟ ಬಂದು ಒದಗುತ್ತದೆ. ಮಹಾರಾಣಿ ಸುದೇಷ್ಣಾದೇವಿಯ ಬಳಿ ಕೆಲಸ ಮಾಡುತ್ತಾ ಅಲ್ಲೇ ತಂಗಿರುವ ದ್ರೌಪದಿಯನ್ನು ಕೀಚಕನು ನೋಡುತ್ತಾನೆ.

ಕೀಚಕನು ಸುದೇಷ್ಣಾದೇವಿಯ ತಮ್ಮನಾಗಿದ್ದು ವಿರಾಟ ರಾಜನ ಸಭೆಯ ಮುಖ್ಯಸೇನಾಪತಿ ಆಗಿರುತ್ತಾನೆ. ಹೆಂಗಸರ ಮೇಲೆ ಯಾವಾಗಲೂ ಕಾಮುಕ ದೃಷ್ಟಿ ಬೀರುವ ಕೀಚಕನು ದ್ರೌಪದಿಯ ಸೌಂದರ್ಯಕ್ಕೆ ಮಾರು ಹೋಗಿ ಅವಳ ಮೇಲೆ ಆಸೆಪಟ್ಟು ಅವಳ ಬೆನ್ನು ಹಿಂದೆ ಬೀಳುತ್ತಾನೆ.

ರಾಣಿ ಸುದೇಷ್ಣೆ ಹಾಗೂ ವಿರಾಟರಾಜನು ಕೂಡ ಕೀಚಕನನ್ನು ಎದುರು ಹಾಕಿಕೊಳ್ಳಲು ಆಗದೆ ನಿಸ್ಸಹಾಯಕರಾಗುತ್ತಾರೆ. ಆಗ ದ್ರೌಪದಿಯು ಭೀಮಸೇನನ ಮೊರೆ ಹೋಗಲು ಭೀಮಸೇನನು ಕೀಚಕನನ್ನು ಕೊಲ್ಲುತ್ತಾನೆ.

ಕೀಚಕನು ಬಹಳ ಬಲಶಾಲಿ. ಅಂತಹ ಬಲಶಾಲಿಯನ್ನು ಕೊಂದ ವಾರ್ತೆಯು ತಿಳಿಯುತ್ತಲೂ ಕೌರವರಿಗೆ ಭೀಮಸೇನನ ಮೇಲೆ ಅನುಮಾನ ಬರುತ್ತದೆ. ಪಾಂಡವರು ಮಾರುವೇಷದಲ್ಲಿ ವಿರಾಟ ರಾಜ್ಯದಲ್ಲಿ ಇರಬಹುದು, ಇದ್ದರೆ ಅವರನ್ನು ಹುಡುಕಿ ಹೊರಗೆಳೆಯಲು ಯೋಚಿಸುತ್ತಾರೆ.

ದುರ್ಯೋಧನನ ಆಜ್ಞೆಯಂತೆ ತ್ರಿಗತ ರಾಜನಾದ ಸುಶರ್ಮನು ವಿರಾಟ ರಾಜ್ಯದ ಮೇಲೆ ದಾಳಿ ಮಾಡಿ ಅವರ ಹಸುಗಳನ್ನು ಕದಿಯುತ್ತಾರೆ. ಹೀಗೆ ಶುರುವಾಗಲು ವಿರಾಟ ಸೈನ್ಯವೆಲ್ಲ ಸುಶರ್ಮನ ವಿರುದ್ಧ ಯುದ್ಧಕ್ಕೆ ತೊಡಗುತ್ತದೆ. ಇಂತಹ ಯುದ್ಧ ಒಂದು ಕಡೆ ನಡೆಯುತ್ತಿರಲು, ಕೌರವರು ಮತ್ತೊಂದು ಕಡೆಯಿಂದ ಧಾಳಿ ಮಾಡುತ್ತಾರೆ.

ಕಾಪಾಡಿಕೊಳ್ಳಲು ಸೈನ್ಯ ಇಲ್ಲದೆ ಯೋಧರು ಇಲ್ಲದೆ ವಿರಾಟ ರಾಜನ ಕುಮಾರನಾದ ಉತ್ತರಕುಮಾರ ಒಬ್ಬನೇ ಕೌರವರ ವಿರುದ್ಧ ಹೊರಡಲು ಭಯಪಡುತ್ತಾನೆ. ಇಂತಹ ಸಮಯದಲ್ಲಿ ರಾಣಿಯ ಅರಮನೆಯಲ್ಲಿ ಬೃಹನ್ನಳೆಯಾಗಿ ನಾಟ್ಯ ಗುರುವಾಗಿ ಕೆಲಸ ಮಾಡುತ್ತಿರುವ

ಅರ್ಜುನನು ಉತ್ತರ ಕುಮಾರನಿಗೆ ಧೈರ್ಯ ಹೇಳಿ ಅವನನ್ನು ಕರೆದುಕೊಂಡು ಕೌರವರ ವಿರುದ್ಧ ಯುದ್ಧ ಕ್ಕೆ ಹೊರಡುತ್ತಾನೆ. ಗಡಿಯಲ್ಲಿ ಶಮೀ ವೃಕ್ಷದ ಬಳಿ ನಿಂತು ತನ್ನ ದಿವ್ಯಾಸ್ತ್ರಗಳನ್ನು ಧರಿಸಿ ಕೌರವರ ವಿರುದ್ಧ ಯುದ್ದ ಮಾಡಿ ಗೆಲ್ಲುತ್ತಾನೆ.

ಈ ಯುದ್ಧವನ್ನು ಗೆಲ್ಲುವ ದಿನವೇ ವಿಜಯ ದಶಮಿಯ ದಿನ. ಕೌರವರು ತಮ್ಮನ್ನು ಸೋಲಿಸಿದ ಮಹಾವೀರನು ಅರ್ಜುನ ಎಂದು ತಿಳಿದುಕೊಳ್ಳುತ್ತಾರೆ ಆದರೆ ಪಾಂಡವರ ಅಜ್ಞಾತವಾಸದ ಗಡುವು ಮುಗಿದು ಹೋಗಿರುತ್ತದೆ ಆದ್ದರಿಂದ ಪಾಂಡವರು ವಿಜಯವಂತರಾಗಿ ತಮ್ಮ ಅಜ್ಞಾತವಾಸವನ್ನು ಹಾಗೂ ಕೌರವರ ವಿರುದ್ಧ ಯುದ್ಧವನ್ನು ಈ ವಿಜಯ ದಶಮಿಯ ದಿನ ಮುಗಿಸುತ್ತಾರೆ. ಹೀಗೆ ಈ ದಶಮಿಯು ಧರ್ಮಕ್ಕೆ ವಿಜಯ ನೀಡಿ ವಿಜಯ ದಶಮಿಯಾಗಿ ಹೆಸರು ಪಡೆಯಿತು.

English summary

Dussehra History - History and Origin Of Dusshera festival

Vijaya Dashami literally means the celebration of righteousness over evil which is celebrated on the tenth day of the Hindu lunar month. Find out about the origin of the festival and its celebration in India.
X
Desktop Bottom Promotion