For Quick Alerts
ALLOW NOTIFICATIONS  
For Daily Alerts

ನಿಮ್ಮ ಕೈಲಾದಷ್ಟನ್ನು ಮಾಡಿ- ಅಡುಗೆಮನೆಯನ್ನು ಹಸಿರಾಗಿಸಿ

By Hairline International Hair And Skin Clinic
|

ನಿಮ್ಮ ಸುತ್ತಮುತ್ತಲೂ ಹಸಿರು ಉಳಿಸುವ, ಪರಿಸರ ಸ್ನೇಹಿಯಾಗುವ ಎಲ್ಲ ಪ್ರಯತ್ನಗಳು ನಡೆಯುತ್ತಿರುವುದನ್ನು ನೋಡಿರುವಿರಿ. ವಿವಿಧ ದೇಶಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂದರೆ, ವಿಶ್ವ ತಾಪಮಾನ ಶೃಂಗದಲ್ಲಿ ಇದರ ಅಗತ್ಯತೆಯ ಬಗ್ಗೆ ಚರ್ಚಿಸುತ್ತಿದ್ದರೂ, ಒಂದು ಹೊಸ ಬದಲಾವಣೆ ತರುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಹೆಜ್ಜೆಯಿಡಬೇಕಾದ ಅನಿವಾರ್ಯತೆಯಿದೆ. ಬಹುತೇಕ ಸಂದರ್ಭದಲ್ಲಿ, ನಾವೆಲ್ಲರೂ ಏನನ್ನಾದರೂ ಮಾಡಬೇಕು ಎಂದು ಭಾವಿಸುತ್ತೇವೆ. ಆದರೆ, ಎಲ್ಲಿಂದ ಆರಂಭಿಸುವುದು ಎನ್ನುವುದು ನಮಗೆ ಗೊತ್ತಾಗುವುದಿಲ್ಲ.

ಇದನ್ನು ನಿಮ್ಮ ಅಡುಗೆಮನೆಯಿಂದಲೇ ಆರಂಭಿಸಿದರೆ ಹೇಗೆ? ಮನೆ ದೊಡ್ಡದಾಗಿರಲೀ, ಸಣ್ಣದಾಗಿರಲೀ, ಎಲ್ಲ ಮನೆಗಳಲ್ಲೂ ಅಡುಗೆಮನೆಗೊಂದು ಜಾಗ ಇದ್ದೇ ಇರುತ್ತದೆ. ಅದು ಫ್ಯಾನ್ಸಿ ಮಾಡ್ಯುಲರ್ ಅಡುಗೆಮನೆ ಆಗಿರಬಹುದು ಅಥವಾ ಮುಕ್ತ ಅಡುಗೆ ಮನೆ ಆಗಿರಲೂಬಹುದು. ನೀವು ನಿಮ್ಮ ಅಡುಗೆ ಮನೆಯನ್ನು ಹೇಗೆ ನಿಭಾಯಿಸುತ್ತೀರಿ, ಅಲ್ಲಿ ಸಾಮಾಗ್ರಿಗಳನ್ನು ಹೇಗೆ ಸಂಗ್ರಹಿಸುತ್ತೀರಿ, ನಿಮ್ಮ ಆಯ್ಕೆಯ ಗೃಹೋಪಯೋಗಿ ವಸ್ತುಗಳು ಮಾತ್ರವಲ್ಲ ನಿಮ್ಮ ಅಡುಗೆಯ ವಿಧಾನಗಳು ಕೂಡ ನಿಮ್ಮನ್ನು ಹಸಿರಿನತ್ತ ಮುಖಮಾಡುವ ಹಾಗೂ ಇಂಗಾಲದ ಅಂಶವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನೆರವಾಗುತ್ತದೆ.

ಗೋ ಗ್ರೀನ್ ಆಗುವುದೆಂದರೆ ಅಡುಗೆಮನೆಯ ಸೌಂದರ್ಯದೊಂದಿಗೆ ಅಥವಾ ಅಲ್ಲಿರುವ ವಸ್ತುಗಳೊಂದಿಗೆ ರಾಜಿಮಾಡಿಕೊಳ್ಳುವುದು ಎಂಬ ಕಳವಳ ನಿಮಗಿರಬಹುದು. ಆದರೆ, ಇಲ್ಲಿ ಅಂಥದ್ದೇನೂ ನಡೆಯುವುದಿಲ್ಲ. ಹಸಿರಾಗುವುದು ಬಹಳ ಸುಲಭದ ಕೆಲಸ. ಇಲ್ಲಿ ಮತ್ತಷ್ಟು ಸೌಂದರ್ಯಪ್ರಜ್ಞೆಯನ್ನು ಹೊಂದಲು ಮುಕ್ತ ಅವಕಾಶವಿದೆ. ಅಷ್ಟೇ ಅಲ್ಲ, ಹಣಕಾಸಿನ ಉಳಿತಾಯಕ್ಕೂ ಇದು ಸೂಕ್ತವಾದದ್ದು. ಈಗ ಅಡುಗೆಮನೆಯ ಮೂಲಕ ನೀವು ಹೇಗೆ ಗೋ ಗ್ರೀನ್ ಆಗಬಹುದು ಎಂಬುದನ್ನು ನೋಡೋಣ:

ಸಂಗ್ರಹ ವಿಧಾನದಲ್ಲಿ ಬದಲಾವಣೆ
ನೀವು ಯಾವ ರೀತಿಯ ಸ್ಟೋರೇಜ್ ವ್ಯವಸ್ಥೆ ಬಳಸುತ್ತೀರಿ ಎನ್ನುವುದು ಕೂಡ ಪ್ರತಿಯೊಂದು ಅಡುಗೆಮನೆಯ ಪ್ರಮುಖ ಅಂಶವಾಗಿರುತ್ತದೆ. ಹೆಚ್ಚಿನವರು ಕಿಚನ್‍ಗೆ ಲುಕ್ ಕೊಡಬೇಕೆಂದು ಫ್ಯಾನ್ಸಿ ಪ್ಲಾಸ್ಟಿಕ್ ಕಂಟೈನರ್ಗಳನ್ನು ಖರೀದಿಸುತ್ತೇವೆ. ಪ್ಲಾಸ್ಟಿಕ್ ಎನ್ನುವುದು ಪರಿಸರ ಸ್ನೇಹಿಯಲ್ಲ, ಅದನ್ನು ಪುನರ್‍ಬಳಕೆ ಮಾಡಲೂ ಸಾಧ್ಯವಿಲ್ಲ. ಮೈಕ್ರೋವೇವ್ ನಲ್ಲಿ ಬಳಸಬಹುದಾದ ಪ್ಲಾಸ್ಟಿಕ್ ಗಳೂ ದೀರ್ಘಕಾಲದಲ್ಲಿ ಅಪಾಯಕಾರಿ ಎನ್ನುವುದನ್ನು ಸಾಬೀತುಪಡಿಸುವ ಅನೇಕ ಅಧ್ಯಯನಗಳೂ ನಡೆದಿವೆ.

Simple and easy Ways to Go Green in the Kitchen

ನೀವು ಪ್ಲಾಸ್ಟಿಕ್ ಕಂಟೈನರ್‍ಗಳ ಬದಲಿಗೆ ಗಾಜಿನ ಜಾರ್‍ಗಳನ್ನು ಬಳಸಿ
ಇವುಗಳೂ ವಿಭಿನ್ನ ಆಕಾರಗಳು ಹಾಗೂ ಅಳತೆಗಳಲ್ಲಿ ಲಭ್ಯವಿದೆ. ಹೌದು, ಇವುಗಳನ್ನು ನಿಭಾಯಿಸುವಾಗ ಸ್ವಲ್ಪ ಜಾಗರೂಕರಾಗಿರಬೇಕು ನಿಜ. ಆದರೆ, ಇವು ನಿಮ್ಮ ಅಡುಗೆಮನೆಯ ಹಸಿರು ಮಟ್ಟಕ್ಕೆ ಹೊಸ ವಿಭಿನ್ನತೆಯನ್ನು ತಂದುಕೊಡಲಿದೆ. ಇವುಗಳು ಹೆಚ್ಚು ಬಾಳಿಕೆಯೂ ಬರುತ್ತವೆ. ಇವುಗಳನ್ನು ಸ್ವಚ್ಛಗೊಳಿಸುವುದೂ ಸುಲಭ, ಅಲ್ಲದೆ ಇವುಗಳಲ್ಲಿ ಶಿಲೀಂಧ್ರಗಳು ಬೆಳೆಯುವ ಅವಕಾಶವೂ ಕಡಿಮೆ.

ಅಡುಗೆ ಮನೆಯ ಇನ್ನೊಂದು ಪ್ರಮುಖ ಅಂಶವೆಂದರೆ ನೀರಿನ ಬಾಟಲಿಗಳು. ಮನೆಯಿಂದ ಹೊರಗೆ ಹೋಗುವಾಗ, ನೀವು ಪ್ಲಾಸ್ಟಿಕ್ ಬಾಟಲಿಗಳೇ ಓಕೆ ಎಂದು ಭಾವಿಸುತ್ತೀರಿ. ಆದರೆ, ಮನೆಯೊಳಗಿರುವಾಗ, ಗಾಳಿಯಾಡದ ಮುಚ್ಚಳವಿರುವ ಗಾಜಿನ ಬಾಟಲಿಗಳನ್ನೇ ಬಳಸಿ. ಇವುಗಳು ಕೂಡ ವಿವಿಧ ಆಕಾರಗಳು, ಅಳತೆಗಳಲ್ಲಿ ಲಭ್ಯ. ಅಧಿಕ ಪ್ರಮಾಣದ ನೀರನ್ನು ಸಂಗ್ರಹಿಸಿಟ್ಟುಕೊಳ್ಳಬೇಕೆಂದರೆ, ಮಣ್ಣಿನ ಮಡಕೆಯನ್ನೋ, ಸ್ಟೇನ್‍ಲೆಸ್ ಸ್ಟೀಲ್‍ನ ವಾಟರ್ ಫಿಲ್ಟರ್‍ಗಳನ್ನೋ ಉಪಯೋಗಿಸಿ. ಇವುಗಳು ಹೆಚ್ಚು ಸ್ವಚ್ಛವೂ ಹೌದು, ದೀರ್ಘ ಬಾಳಿಕೆಯೂ ಬರುತ್ತವೆ.

ಗೃಹೋಪಯೋಗಿ ವಸ್ತುಗಳ ಸ್ಮಾರ್ಟ್ ಆಯ್ಕೆ
ತಂತ್ರಜ್ಞಾನವು ಎಷ್ಟೊಂದು ಮುಂದುವರಿದಿದೆಯೆಂದರೆ, ನೀವು ಎಲ್ಲದಕ್ಕೂ ಈಗ ಗ್ಯಾಜೆಟ್‍ಗಳನ್ನು ಹೊಂದಿದ್ದೀರಿ. ಇಂತಹ ಗೃಹೋಪಯೋಗಿ ವಸ್ತುಗಳನ್ನು ನಿಮ್ಮ ಅಡುಗೆಮನೆಯಲ್ಲಿ ಜೋಡಿಸಿಡಲು ನಿರ್ಧರಿಸಿದಾಗ, ಈ ಪೈಕಿ ಪ್ರತಿಯೊಂದಕ್ಕೆ ಕೂಡ ವಿದ್ಯುಚ್ಛಕ್ತಿ ಬೇಕು, ಇವುಗಳಿಂದ ಇಂಗಾಲದ ಮಟ್ಟ ಹೆಚ್ಚುತ್ತದೆ ಹಾಗೂ ಸಂಪನ್ಮೂಲ ಬಳಕೆ ಹೆಚ್ಚಾಗುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ನಿಮಗೆ ನಿಜಕ್ಕೂ ಆ ಗ್ಯಾಜೆಟ್‍ಗಳ ಅಗತ್ಯತೆಯಿದೆಯೋ ಅಥವಾ ಅವುಗಳಿಲ್ಲದಿದ್ದರೂ ನಡೆಯುತ್ತದಾ ಎಂಬುದನ್ನು ನಿರ್ಧರಿಸಿಕೊಳ್ಳಿ. ಕಾಫಿ-ಮೇಕರ್, ಸ್ಯಾಂಡ್‍ವಿಚ್ ಮೇಕರ್ ಮತ್ತು ಮೈಕ್ರೋವೇವ್‍ಗಳು ಬಳಕೆಗೆ ಸುಲಭವಾಗಿದ್ದರೂ, ಇವುಗಳು ಅನವಶ್ಯಕ ಗ್ಯಾಜೆಟ್ ಎನ್ನುವುದಂತೂ ಸತ್ಯ.

ಒಂದು ವೇಳೆ, ಇಂತಹ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲೇಬೇಕೆಂದರೆ, ಮೊದಲು ಅವುಗಳ ಸ್ಟಾರ್ ರೇಟಿಂಗ್ ಅನ್ನು ಪರೀಕ್ಷಿಸಿಕೊಳ್ಳಿ. ಅತ್ಯಧಿಕ ರೇಟಿಂಗ್ ಅಂದರೆ 5. ಅಂದರೆ, ಆ ವಸ್ತುವು ಗರಿಷ್ಠ ಪ್ರಮಾಣದ ಶಕ್ತಿಯನ್ನು ಬಳಸಿಕೊಂಡು, ಕನಿಷ್ಠ ಪ್ರಮಾಣದ ಇಂಗಾಲವನ್ನು ಹೊರಸೂಸುತ್ತದೆ ಎಂದರ್ಥ. ಇಂತಹ ಸಾಮಾಗ್ರಿಗಳು ಆರಂಭದಲ್ಲಿ ದುಬಾರಿಯಾಗಿರುತ್ತವೆಯಾದರೂ, ಅವುಗಳ ಪ್ರಯೋಜನವೂ ದರಕ್ಕಿಂತಲೂ ಹೆಚ್ಚಿರುತ್ತದೆ.

ನಿಮ್ಮ ಅಡುಗೆ ಮನೆಯ ನಿರ್ವಹಣೆ
ವಿನ್ಯಾಸವುಳ್ಳ ಅಡುಗೆಮನೆ ಅಥವಾ ಸಾಧಾರಣ ಅಡುಗೆಮನೆಯನ್ನು ಯಾವುದೇ ಕಲೆಯಿಲ್ಲದಂತೆ ಸ್ವಚ್ಛವಾಗಿಡುವುದು ಬಹಳ ಪರಿಶ್ರಮದ ಕೆಲಸ. ಸಾಮಾನ್ಯವಾಗಿ, ನಾವು ಸ್ವಚ್ಛಗೊಳಿಸುವ ದ್ರಾವಣದ ಬಗೆಗಿನ ಸಾಕಷ್ಟು ಜಾಹೀರಾತುಗಳನ್ನು ನೋಡಿ, ಅವುಗಳೇ ಸೂಕ್ತ ಎಂದು ಭಾವಿಸಿಬಿಡುತ್ತೇವೆ. ಆದರೆ, ಅಡುಗೆಮನೆಗೆ ರಾಸಾಯನಿಕ ಉತ್ಪನ್ನಗಳನ್ನು ಖರೀದಿಸುತ್ತಾ ಹಣವನ್ನು ಮತ್ತು ಶಕ್ತಿಯನ್ನು ವ್ಯಯಿಸುವ ಬದಲು, ಮನೆಯಲ್ಲೇ ಕೈಗೆಟಕುವ ವಸ್ತುಗಳಿಂದ ನೀವೇ ಸ್ವಚ್ಛಗೊಳಿಸುವ ದ್ರಾವಣವನ್ನು ತಯಾರಿಸಬಹುದು.


ಉದಾಹರಣೆಗೆ- ವಿನೆಗರ್, ಅಡುಗೆ ಸೋಡಾ, ಉಪ್ಪು ಮತ್ತು ನೀರು ಇತ್ಯಾದಿಗಳ ವಿವಿಧ ಸಂಯೋಜನೆಗಳು ಅತ್ಯುತ್ತಮ ಶುದ್ಧೀಕರಿಸುವ ಅಂಶಗಳಾಗಿದ್ದು, ಇವುಗಳ ಮೂಲಕ ಅತ್ಯಂತ ಕಠಿಣ ಕಲೆಗಳು ಹಾಗೂ ಕೊಳೆಗಳನ್ನು ತೆಗೆದುಹಾಕಬಹುದು. ನಿಂಬೆಹಣ್ಣಿನ ತುಂಡನ್ನು ಕೂಡ ನಿಮ್ಮ ಅಡುಗೆಮನೆಯ ಸುತ್ತಲಿನ ವಾಸನೆ ಹೋಗಲಾಡಿಸುವ ವಸ್ತುವನ್ನಾಗಿ ಬಳಸಬಹುದು.

ಅಡುಗೆಯ ವಿಧಾನಗಳು
ಶಕ್ತಿಯನ್ನು ಉಳಿಸುವ ಇನ್ನೊಂದು ವಿಧಾನವೆಂದರೆ, ಅಡುಗೆಮನೆಯಲ್ಲಿ ಅಡುಗೆ ಅನಿಲದ ಬಳಕೆಯನ್ನು ಮಿತಿಗೊಳಿಸುವುದು. ಅಧಿಕ ಪ್ರಮಾಣದಲ್ಲಿ ಅಡುಗೆ ಮಾಡುವುದು ಕೂಡ ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ. ನಿಮ್ಮ ಕುಟುಂಬದ ಅಗತ್ಯತೆಯನ್ನು ಮನಗಂಡು, ವಿಸ್ತೃತ ಮೆನುವನ್ನು ಪ್ಲ್ಯಾನ್ ಮಾಡಿ, ಇದಕ್ಕಾಗಿ ಒಂದೆರಡು ದಿನ ವ್ಯಯಿಸಿ. ಸಿಂಗಲ್-ಮೀಲ್ ನಂತಹ ಆಹಾರವನ್ನು ಫ್ರಿಡ್ಜ್ ನಲ್ಲಿಟ್ಟು, ಅಗತ್ಯವಿದ್ದಾಗ ಅದನ್ನು ತೆಗೆದು, ಉಣಬಡಿಸಿ. ಎಲ್ಲರೂ ಅಂದುಕೊಂಡಂತೆ, ಆಹಾರವನ್ನು ಫ್ರಿಡ್ಜ್ ನಲ್ಲಿಡುವುದು ಕೆಟ್ಟ ಆಯ್ಕೆಯಲ್ಲ. ಅದನ್ನು ಸರಿಯಾದ ರೀತಿಯಲ್ಲಿಟ್ಟರೆ ಯಾವ ಸಮಸ್ಯೆಯೂ ಇಲ್ಲ. ಇದರಿಂದಾಗಿ, ನೀವು ಅಡುಗೆಯ ಪ್ರಕ್ರಿಯೆಯಲ್ಲಿ ಶಕ್ತಿಯನ್ನೂ ಉಳಿಸಬಹುದು, ಜೊತೆಗೆ ನಿಮ್ಮ ಕುಟುಂಬ ಸದಸ್ಯರೊಂದಿಗೆ ಹೆಚ್ಚಿನ ಸಮಯವನ್ನೂ ಕಳೆಯಬಹುದು.

ಅಡುಗೆಮನೆಯಲ್ಲಿ ಹಸಿರಿನತ್ತ ಚಲಿಸುವುದು (ಗೋ ಗ್ರೀನ್) ಎನ್ನುವುದು ನಿಮ್ಮ ಜೀವನಶೈಲಿಯಲ್ಲಿ ಸರಳ ಬದಲಾವಣೆ ತಂದಂತೆ ಅಷ್ಟೆ. ಆದರೆ, ನೆನಪಿರಲಿ- ನೀವು ಅಡುಗೆಮನೆಯಲ್ಲಿ ಕ್ರಮೇಣವಾಗಿ ಈ ಬದಲಾವಣೆಗಳನ್ನು ತರಬೇಕು. ಆ ಮೂಲಕ ಆ ಕೆಲಸವನ್ನು ಸುಲಭವಾಗಿಸಬೇಕು. ಕಂಟೈನರ್‌ಗಳನ್ನು ಬದಲಾಯಿಸುವುದು ಕೂಡ ಕ್ರಮೇಣವಾಗಿ ನಡೆಯುವ ಪ್ರಕ್ರಿಯೆ. ಮಳಿಗೆಯಿಂದ ತಂದ ಸ್ವಚ್ಛಕಾರಕಗಳು ಖಾಲಿಯಾದ ಬಳಿಕ, ಸ್ವಚ್ಛಗೊಳಿಸುವ ದ್ರಾವಣಗಳನ್ನು ನೀವೇ ತಯಾರಿಸಿ. ಅಡುಗೆಯ ವಿಧಾನವನ್ನೂ ನಿಧಾನವಾಗಿ ಹೆಚ್ಚು ಪರಿಸರ-ಸ್ನೇಹಿ ಪ್ರಕ್ರಿಯೆಯಾಗಿ ಬದಲಾಯಿಸಿಕೊಳ್ಳಿ. ಈ ಎಲ್ಲ ವಿಧಾನಗಳನ್ನು ಅನುಸರಿಸುತ್ತಾ ಹೋದಂತೆ, ಅವುಗಳನ್ನು ನಿಮ್ಮ ಜೀವನಶೈಲಿಯೊಂದಿಗೆ ಹಾಗೂ ಕುಟುಂಬದೊಂದಿಗೆ ಸೇರಿಸಿಕೊಳ್ಳಲು ಸುಲಭವಾಗುತ್ತದೆ. ಕ್ರಮೇಣ ಇದುವೇ ಬದುಕಿನ ಪಥವಾಗುತ್ತದೆ.

English summary

Simple and easy Ways to Go Green in the Kitchen

In this article we discussed about go green concept. Green is Considered as life so we have to beginning our concept from our home. Here we are starting our green aim from kitchen. Making small small changes in your kitchen it will bring big change in atmosphere like dividing wastes, smartness choosing things etc...
X
Desktop Bottom Promotion