For Quick Alerts
ALLOW NOTIFICATIONS  
For Daily Alerts

ಕೊಳೆಯಿಲ್ಲದ ಹೊಳೆಯುವ ಕನ್ನಡಿಗಾಗಿ ಸರಳ ಸಲಹೆಗಳು

|

ಅಲಂಕಾರವನ್ನು ನೋಡಿಕೊಳ್ಳಲು ಮನೆಗೆ ಅಗತ್ಯವಾಗಿರುವುದು ನಿಲುವುಗನ್ನಡಿ. ಸ್ಥಳಕ್ಕೆ ತಕ್ಕನಾಗಿ ಇದರ ಗಾತ್ರವೂ ಚಿಕ್ಕ ಮತ್ತು ದೊಡ್ಡದಾಗುತ್ತಾ ಹೋಗುತ್ತದೆ. ಬಟ್ಟೆಯಂಗಡಿ, ಕ್ಷೌರದಂಗಡಿ ಮೊದಲಾದ ವಾಣಿಜ್ಯ ಸ್ಥಳಗಳಲ್ಲಂತೂ ಕನ್ನಡಿಗಳೇ ವ್ಯಾಪಾರದ ಜೀವಾಳಗಳಾಗಿವೆ. ನುಣುಪಾದ ಗಾಜು ಗಾಳಿಯಲ್ಲಿರುವ ಧೂಳಿನ ಕಣಗಳನ್ನ್ ಆಕರ್ಷಿಸಿ ಒಂದು ದಿನದಲ್ಲಿಯೇ ಮಂಕಾಗಿಬಿಡುತ್ತದೆ. ಕೇವಲ ಧೂಳು ಹಿಡಿದಿದ್ದರೆ ಪರವಾಗಿಲ್ಲ, ನೀರಿನಿಂದ ತೊಳೆದು ಬಿಡಬಹುದು.

ಆದರೆ ಕೆಲವೊಮ್ಮೆ ನಮ್ಮ ದಿನನಿತ್ಯದ ಬಳಕೆಯ ವಸ್ತುಗಳಾದ ಎಣ್ಣೆ, ಉಗುಳು, ಕೂದಲಿನ ಸ್ಪ್ರೇ ಮೊದಲಾದವುಗಳಿಂದ ಸಿಡಿದ ಹನಿಗಳು, ಬೆರಳಚ್ಚುಗಳು, ಗಾಳಿಯಲ್ಲಿ ತೇಲಿಬಂದ ಹೊಗೆಯ ಕಣಗಳು (ರಸ್ತೆಗೆ ಮುಖಮಾಡಿರುವ ಕನ್ನಡಿಗಳಿಗೆ ಈ ತೊಂದರೆ ಬಹುಮುಖ್ಯವಾದುದು) ಮೊದಲಾದವು ಅಲ್ಲಿಯೇ ಗಟ್ಟಿಯಾಗಿ ತಳವೂರಿ ನಿವಾರಣೆ ಕಷ್ಟವಾಗುತ್ತದೆ. ಹೆಚ್ಚಿನ ಒತ್ತಡ ನೀಡಿದರೆ ಗಾಜಿನಲ್ಲಿ ಬಿರುಕು ಬರುವ ಸಂಭವವಿರುವುದರಿಂದ ಇವನ್ನು ಕರಗಿಸಬಲ್ಲ ದ್ರಾವಕಗಳನ್ನು ಉಪಯೋಗಿಸುವ ಅವಶ್ಯಕತೆಯಿದೆ. ಸಾಮಾನ್ಯವಾಗಿ ಮನೆಯಲ್ಲಿ ಬಟ್ಟೆಯೊಗೆಯಲು

ಉಪಯೋಗಿಸುವ ಪುಡಿಯನ್ನೇ ಎಲ್ಲರೂ ಸಿದ್ಧವಾಗಿ ಉಪಯೋಗಿಸುತ್ತಾರೆ. ಆದರೆ ಈ ದ್ರಾವಣ ನಿಧಾನವಾಗಿ ಗಾಜನ್ನೂ ಕರಗಿಸಬಹುದಾದುದರಿಂದ ಮತ್ತು ಕಣ್ಣಿಗೆ ಕಾಣದ ಗೀರುಗಳುಂಟಾಗುವುದರಿಂದ ಕ್ರಮೇಣ ಗಾಜಿನ ಹೊರಮೈ ನಿಧಾನಕ್ಕೆ ತನ್ನ ಹೊಳಪನ್ನು ಕಳೆದುಕೊಳ್ಳುತ್ತಾ ಬರುತ್ತದೆ.

ಇಂದು ಗಾಜನ್ನು ಸ್ವಚ್ಛ ಮಾಡಲೆಂದೇ ಹಲವು ದ್ರಾವಣಗಳು, ರಬ್ಬರಿನ ವೈಪರ್ ಮತ್ತು ಬಟ್ಟೆಗಳು ದೊರೆಯುತ್ತವೆ. ಆದರೆ ಅಡುಗೆಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಈ ಆರು ವಸ್ತುಗಳನ್ನು ಉಪಯೋಗಿಸಿ ವೃತ್ತಿಪರರಿಂದ ಪಡೆಯಬಹುದಾದ ಸ್ವಚ್ಛತೆಯನ್ನು ಪಡೆಯಬಹುದು.

ಅಡುಗೆ ಸೋಡಾ
ಒಂದು ಸ್ವಚ್ಛವಾದ ಬಟ್ಟೆ ಅಥವಾ ಸ್ಪಾಂಜಿನಲ್ಲಿ ಒಂದು ಚಮಚದಷ್ಟು ಅಡುಗೆ ಸೋಡಾ ಪುಡಿಯನ್ನು ಹಾಕಿ ಸ್ವಲ್ವವೇ ನೀರಿನಿಂದ ಇಡಿಯ ಬಟ್ಟೆ ಒದ್ದೆಯಾಗಿರುವಂತೆ ಮಾಡಿಕೊಳ್ಳಿ. ನಯವಾಗಿ ಕಿವುಚಿ ಅಡುಗೆ ಸೋಡಾ ಇಡಿಯ ಬಟ್ಟೆಯಲ್ಲಿ ಹೀರಿಕೊಳ್ಳುವಂತೆ ಮಾಡಿ. ಈಗ ಈ ಬಟ್ಟೆಯನ್ನು ಉಪಯೋಗಿಸಿ ನಯವಾಗಿ ಗಾಜಿನ ಮೇಲೆ ತಿಕ್ಕುತ್ತಾ ಬನ್ನಿ.

Simple Ways To Get Stain-Free, Shiny Mirror

ಒಂದು ನಿಮಿಷದ ಒಳಗೇ ಈ ಭಾಗ ಒಣಗಿ ತೆಳುವಾದ ಅಪಾರದರ್ಶಕ ಪೊರೆಯಂತಾಗುತ್ತದೆ. ಈಗ ಇನ್ನೊಂದು ಸ್ವಚ್ಛವಾದ ಬಟ್ಟೆಯನ್ನು ತೆಗೆದುಕೊಂಡು (ಹಳೆಯ, ಆದರೆ ಸ್ವಚ್ಛವಾದ ಮೈ ಒರೆಸುವ ಟವೆಲ್ ತುಂಬಾ ಉಪಯುಕ್ತ) ಈ ಪದರವನ್ನು ಹೆಚ್ಚಿನ ಒತ್ತಡವಿಲ್ಲದೇ ಒರೆಸಿ.

ಇಲ್ಲಿ ಅನುಸರಿಸಬೇಕಾದ ಎಚ್ಚರಿಕೆ ಎಂದರೆ ಒಂದೇ ಕ್ರಮದಲ್ಲಿ ಒರೆಸಿ, ಅದಕ್ಕೆ ವಿರುದ್ದವಾದ ದಿಕ್ಕಿನಲ್ಲಿ ಒರೆಸಬೇಡಿ. ಉದಾಹರಣೆಗೆ ಮೇಲಿನಿಂದ ಕೆಳಕ್ಕೆ ಒರೆಸಿದರೆ ಇಡಿಯ ಕನ್ನಡಿಗೆ ಅದೇ ಕ್ರಮದಲ್ಲಿ ಒರೆಸಿ, ಕೆಳಗಿನಿಂದ ಮೇಲೆ ಬೇಡ. ಅಂತೆಯೇ ಒಮ್ಮೆ ಒರೆಸಿದ ಬಳಿಕ ಟವೆಲ್ಲಿನಲ್ಲಿ ಸಂಗ್ರಹವಾದ ಕೊಳೆಯ ಭಾಗ ಮತ್ತೆ ಕನ್ನಡಿಗೆ ತಾಗದಂತೆ ಎಚ್ಚರಿಕೆ ವಹಿಸಬೇಕು. ಇದಕ್ಕಾಗಿ ಪ್ರತಿ ಬಾರಿ ಒರೆಸಿದ ಬಳಿಕ ಸ್ವಲ್ಪ ಮೇಲಕ್ಕೆ ಮಡಚಿ ಹೊಸ ಭಾಗದಲ್ಲಿ ಒರೆಸಬೇಕು. ಬಳಿಕ ಇನ್ನೂ ಸ್ವಲ್ಪ ಮೇಲಕ್ಕೆ ಮಡಚಿ ಇನ್ನೊಂದು ಭಾಗವನ್ನು ಒರೆಸಬೇಕು. ಈ ಕ್ರಮದಿಂದ ಕನ್ನಡಿ ಅತ್ಯಂತ ಶುಭ್ರವಾಗಿ ವರ್ಷಗಟ್ಟಲೇ ತನ್ನ ಹೊಳಪನ್ನು ಕಾಪಾಡಿಕೊಂಡು ಬರುತ್ತದೆ.

ಭಟ್ಟಿ ಇಳಿಸಿದ ನೀರು
ಕೆಲವೊಮ್ಮೆ ನಲ್ಲಿಯ ನೀರಿನಲ್ಲಿ ಕರಗಿರುವ ಕೆಲವು ಲವಣಗಳು ಗಾಜಿನೊಂದಿಗೆ ಸ್ಪಂದಿಸಿ ಕಣ್ಣಿಗೆ ಕಾಣದ ಗೀರುಗಳನ್ನು ಉಂಟುಮಾಡುತ್ತವೆ. ಕ್ರಮೇಣ ಈ ಗೀರುಗಳು ಸಾಂದ್ರಗೊಂಡು ಗಾಜು ಮಂಕಾಗುತ್ತಾ ಬರುತ್ತದೆ. ಸಾಮಾನ್ಯವಾಗಿ ರಸ್ತೆಗೆ ಮುಖಮಾಡಿರುವ ಕಟ್ಟಡಗಳ ಕನ್ನಡಿಗಳ ಕೆಳಭಾಗ ಮಂಕಾಗಿದ್ದು ಮೇಲ್ಭಾಗ ಹೊಳಪಿನಿಂದ ಕೂಡಿರುತ್ತದೆ.


ಮಳೆನೀರು ಹೆಚ್ಚಾಗಿ ಕೆಳಭಾಗವನ್ನು ತಲುಪುವುದೇ ಇದಕ್ಕೆ ಕಾರಣ. ಕನ್ನಡಿಯನ್ನು ಸ್ವಚ್ಛಗೊಳಿಸಲು ಬ್ಯಾಟರಿಗಳಿಗೆ ತುಂಬಿಸಲು ಉಪಯೋಗಿಸುವ ಭಟ್ಟಿ ಇಳಿಸಿದ ನೀರನ್ನು ಬಳಸಿದರೆ ಈ ತೊಂದರೆ ನಿವಾರಣೆಯಾಗುತ್ತದೆ. ಈ ನೀರಿನಲ್ಲಿ ಯಾವುದೇ ಲವಣಗಳಿಲ್ಲದಿರುವ ಕಾರಣ ಗಾಜು
ಹೆಚ್ಚಿನ ಹೊಳಪನ್ನು ಪಡೆಯುತ್ತದೆ.

ವಿನೇಗರ್ (Vinegar)
ವಿನೇಗರ್‌ನಲ್ಲಿ ಎರಡು ಬಗೆಗಳಿವೆ. ಬಿಳಿ ಮತ್ತು ಕಂದು ಶಿರ್ಕಾ. ಕನ್ನಡಿಯನ್ನು ಸ್ವಚ್ಛಗೊಳಿಸಲು ಬಿಳಿಯ (ಅಂದರೆ ನೀರಿನಂತೆ ಪಾರದರ್ಶಕವಾದ) ಶಿರ್ಕಾ ಉತ್ತಮ. ಕಂದು ಶಿರ್ಕಾ ಹೆಚ್ಚು ಪ್ರಭಾವಶಾಲಿಯಾದುದರಿಂದ ಕನ್ನಡಿಗೆ ಹಾನಿಯುಂಟುಮಾಡಬಹುದು.


ಬಿಳಿಯ ಶಿರ್ಕಾವನ್ನು ಸಮಪ್ರಮಾಣದಲ್ಲಿ ಸ್ವಚ್ಛ ನೀರಿನೊಂದಿಗೆ ಬೆರೆಸಿ ನೀರನ್ನು ಸಿಂಪಡಿಸುವ ಉಪಕರಣದಿಂದ ಗಾಜನ್ನು ತೇವಗೊಳಿಸಿ. ಸುಮಾರು ಅರ್ಧ ನಿಮಿಷದ ಬಳಿಕ ಮೇಲೆ ತಿಳಿಸಿದ ವಿಧಾನದಲ್ಲಿಯೇ ಟವೆಲ್ ಉಪಯೋಗಿಸಿ ಸ್ವಚ್ಛಗೊಳಿಸಿ.

ಶೇವಿಂಗ್ ಕ್ರೀಂ
ಗಡ್ಡವನ್ನು ಮೃದುವಾಗಿಸಲು ಉಪಯೋಗಿಸುವ ಶೀವಿಂಗ್ ಕ್ರೀಂ ಕನ್ನಡಿಯನ್ನು ಸ್ವಚ್ಛಗೊಳಿಸಲೂ ಉಪಯೋಗಿಸಬಹುದು ಎಂದರೆ ಅಚ್ಚರಿಯಾಗುತ್ತದೆ. ಇದಕ್ಕಾಗಿ ಮೊದಲು ಹಳೆಯ ಶೇವಿಂಗ್ ಬ್ರಶ್ ಒಂದನ್ನು ಬಳಸಿ ನೊರೆನೊರೆಯಾಗುವಂತೆ ಮಾಡಿಕೊಳ್ಳಿ. ಬಳಿಕ ಈ ಬ್ರಶ್ ಉಪಯೋಗಿಸಿ ತೆಳುವಾಗಿ ಕನ್ನಡಿಯ ಮೇಲೆ ಹಚ್ಚಿ. ಒಂದು ಅಥವಾ ಎರಡು ನಿಮಿಷಗಳಲ್ಲಿ ಈ ನೊರೆ ಒಣಗುತ್ತದೆ. ಬಳಿಕ ಟವೆಲ್ ಉಪಯೋಗಿಸಿ ಏಕದಿಕ್ಕಿನಲ್ಲಿ ಒತ್ತಡವಿಲ್ಲದೇ ಒರೆಸಿ.


ಈಗ ಕನ್ನಡಿಯ ಮೇಲೆ ತೆಳುವಾದ ನೊರೆಯ ಪದರವಿರುವುದರಿಂದ ಈ ಕನ್ನಡಿಯ ಮೇಲೆ ಹಬೆಯ ತೇವ ಕುಳಿತುಕೊಳ್ಳುವುದಿಲ್ಲ. ಈ ಕಾರಣಕ್ಕಾಗಿ ಸ್ನಾನಗೃಹದಲ್ಲಿರುವ ಕನ್ನಡಿಯನ್ನು ಸ್ವಚ್ಛಗೊಳಿಸಲು ಶೇವಿಂಗ್ ಕ್ರೀಂ ಅತ್ಯುತ್ತಮವಾಗಿದೆ. ಇದೇ ಕ್ರಮವನ್ನು ಕಾರಿನಗಾಜು, ಕನ್ನಡಕ ಮೊದಲಾದ ತೇವ ಕುಳಿತುಕೊಂಡು ಕಿರಿಕಿರಿ ಅನುಭವಿಸುವ ಕನ್ನಡಿಗಳಿಗೂ ಅನ್ವಯಿಸಬಹುದು.

ಹಳೆದ ಕಂದು ವೃತ್ತಪತ್ರಿಕೆ
ವೃತ್ತಪತ್ರಿಕೆಯೂ ಕನ್ನಡಿಯನ್ನು ಸ್ಪಟಿಕದಂತೆ ಸ್ವಚ್ಛಗೊಳಿಸಬಲ್ಲದು. ಆದರೆ ಬಿಳಿಯ ಮತ್ತು ಹೊಳಪಾದ ಮೇಲ್ಮೈಯುಳ್ಳ ಪತ್ರಿಕೆ ಈ ಕಾರ್ಯಕ್ಕೆ ಸಮರ್ಪಕವಲ್ಲ. ಪತ್ರಿಕೆಯ ಒಳಭಾಗದ ಕಂದು ಬಣ್ಣದ (ಸಾಮಾನ್ಯವಾಗಿಕಪ್ಪುಬಿಳಿಪು ಚಿತ್ರ ಅಥವಾ ಪ್ರಮುಖವಲ್ಲದ ಸುದ್ದಿಗಳನ್ನು, ಜಾಹೀರಾತುಗಳನ್ನು ಪ್ರಕಟಿಸಲು ಬಳಸುವ ಪುಟ) ಕಾಗದ ಕನ್ನಡಿಯನ್ನು ಸ್ವಚ್ಛಗೊಳಿಸಲು ಅತ್ಯುತ್ತಮವಾಗಿದೆ. ಈ ಪುಟವನ್ನು ಮುದ್ದೆಮಾಡಿ ಸ್ವಚ್ಛವಾದ ನೀರಿನಲ್ಲಿ ತೋಯಿಸಿ ಕನ್ನಡಿಯ ಮೇಲೆ ವೃತ್ತಾಕಾರದಲ್ಲಿ ಒರೆಸುತ್ತಾ ಒದ್ದೆಯಾಗಿಸುತ್ತಾ ಬನ್ನಿ.

ಈ ನೀರಿನೊಂದಿಗೆ ಕೊಂಚ ಬಿಳಿಯ ವಿನೇಗರ್ (ಶಿರ್ಕಾವನ್ನು)ಸೇರಿಸಿದರೆ ಇನ್ನೂ ಉತ್ತಮ. ಒಂದು ನಿಮಿಷದ ಬಳಿಕ ಒಣಗಿ ತೆಳುವಾದ ಪದರ ಉಳಿಯುತ್ತದೆ. ಬಳಿಕ ಟವೆಲ್ ಅಥವಾ ಇದೇ ಕಂದು ಬಣ್ಣದ ಒಣಗಿದ ಪುಟವನ್ನು (ಈಗ ಮುದ್ದೆ ಮಾಡದೇ) ಒಂದೇ ದಿಕ್ಕಿನಲ್ಲಿ ಒರೆಸುತ್ತಾ ಬನ್ನಿ. ಕನ್ನಡಿ ಸ್ಪಟಿಕದಂತೆ ಹೊಳೆಯುತ್ತದೆ. ಇಲ್ಲಿ ಎಚ್ಚರಿಕೆ ವಹಿಸಬೇಕಾದ ವಿಷಯವೆಂದರೆ ಪತ್ರಿಕೆಯಲ್ಲಿ ಮುದ್ರಿತವಾದ ಶಾಯಿ. ಒಂದು ವೇಳೆ ಈ ಶಾಯಿ ಸುಲಭವಾಗಿ ಕರಗಿ ಕನ್ನಡಿಯ ಮೇಲೆ ಉಳಿದಿರುವ ಪ್ರಮೇಯವಿದ್ದರೆ ಈ ಕಾಗದವನ್ನು ಬಳಸಬೇಡಿ.

ಏಕೆಂದರೆ ಈ ಶಾಯಿಯಲ್ಲಿರುವ ಸೀಸ (lead) ಕನ್ನಡಿಯಿಂದ ಇಳಿದು ಕಾರಿನ ಬಣ್ಣಕ್ಕೆ ತಾಕಿದರೆ ಬಣ್ಣವನ್ನು ಕುಂದಿಸಬಹುದು. (ವಿ.ಸೂ: ಇದೇ ಕಾರಣಕ್ಕಾಗಿ ವೃತ್ತಪತ್ರಿಕೆಗಳಲ್ಲಿ ಎಂದಿಗೂ ಆಹಾರವಸ್ತುಗಳನ್ನು ಪ್ಯಾಕ್ ಮಾಡಬಾರದು. ಏಕೆಂದರೆ ಎಣ್ಣೆ ಮತ್ತು ನೀರಿನಲ್ಲಿ ಈ ಶಾಯಿ ಕರಗಿ ಸೀಸದ ಅಂಶ ಆಹಾರದೊಂದಿಗೆ ನಮ್ಮ ದೇಹವನ್ನು ಸೇರುತ್ತವೆ. ಪೆಟ್ರೋಲಿನಲ್ಲಿರುವ ಸೀಸವೂ ಗಾಳಿಯ ಮೂಲಕ ದೇಹ ಪ್ರವೇಶಿಸುವ ಕಾರಣ ಪೆಟ್ರೋಲಿನ್ನು ಸೀಸರಹಿತವಾಗಿಸಿ (unleaded petrol) ಮಾರುಕಟ್ಟೆಗೆ ಬಿಡಲಾಗುತ್ತದೆ)

ಕ್ಲಬ್ ಸೋಡಾ
ಒಂದು ಕಾಲದಲ್ಲಿ ಸ್ಥಳೀಯವಾಗಿ ಸೋಡಾವನ್ನು ತಯಾರಿಸಿ ಗೋಲಿಯಿರುವ ಬಾಟಲಿಯಲ್ಲಿ ಮಾರಲಾಗುತ್ತಿತ್ತು. ಆದರೆ ಇಂದು ಕೊಂಚ ಹೆಚ್ಚಿನ ಪ್ರಮಾಣದಲ್ಲಿ ಇಂಗಾಲದ ಡೈ ಆಕ್ಸೈಡ್ ಇರುವ ಕ್ಲಬ್ ಸೋಡಾ ಮಾರುಕಟ್ಟೆಯಲ್ಲಿ ದೊರಕುತ್ತದೆ.


ಸೋಡಾವನ್ನು ಚಿಮುಕಿಸುವ ಬಾಟಲಿಯಲ್ಲಿ ತುಂಬಿಸಿ ನೊರೆಬರುತ್ತಿದ್ದಂತೆಯೇ ಕನ್ನಡಿಯ ಮೇಲೆ ಚಿಮುಕಿಸಿ ಕೂಡಲೇ ಟವೆಲ್ ಉಪಯೋಗಿಸಿ ಒರೆಸಿದರೆ ಗಾಜು ಸ್ವಚ್ಛವಾಗುತ್ತದೆ.
English summary

Simple Ways To Get Stain-Free, Shiny Mirror

Mirrors gather dirt easily even after you clean them thoroughly. The worse part is the frustrating streaks that form on the mirror after cleaning it. You must have tried all the best products to clean mirrors, but to no avail. Bathroom mirrors are a menace as they have all the household grime
Story first published: Friday, December 12, 2014, 10:27 [IST]
X
Desktop Bottom Promotion