For Quick Alerts
ALLOW NOTIFICATIONS  
For Daily Alerts

ಸುಂದರ ಜೆನ್ ಗಾರ್ಡನ್ ನಿರ್ಮಾಣ ಇನ್ನು ಬಹು ಸರಳ!

By Super
|

’ನನ್ನ ಹೃದಯವಿದ್ದಲ್ಲಿದೆ ನನ್ನ ಮನೆ’ ಎಂಬುದೊಂದು ಗಾದೆ. ಉದ್ಯೋಗ, ವ್ಯಾಪಾರನಿಮಿತ್ತ ಹೊರಹೋಗುವ ನಾವು ಮನೆಗೆ ಬರುವಾಗ ಮನ ಹಲವು ಬೇಗುದಿಗಳಿಂದ ತುಂಬಿರುತ್ತದೆ. ಮನೆ ಸೇರಿದಾಕ್ಷಣ ಒಂದು ರೀತಿಯ ನೆಮ್ಮದಿ ಆವರಿಸುತ್ತದೆ. ಒಂದು ವೇಳೆ ಮನೆಯಲ್ಲಿ ಇರಬೇಕಾದ ವಸ್ತು ಇರತಕ್ಕದ್ದ ಸ್ಥಳದಲ್ಲಿಲ್ಲದಿದ್ದರೆ ಆ ನೆಮ್ಮದಿ ಕದಡುತ್ತದೆ. ಈ ನೆಮ್ಮದಿಯನ್ನು ಹೆಚ್ಚಿಸಬೇಕಾದರೆ ನಮ್ಮ ವಾಸಸ್ಥಳವನ್ನೇ ಕೊಂಚ ಮಾರ್ಪಾಡಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಜಪಾನೀಯರು ಯಶಸ್ಸು ಪಡೆದ ಜ಼ೆನ್ ರಾಕ್ ಗಾರ್ಡನ್ ನಮಗೊಂದು ಮಾದರಿಯಾಗಬಲ್ಲದು.

How to create a perfect zen garden

ಈ ಉದ್ಯಾನಗಳು ಜಪಾನ್ ನಲ್ಲಿ ನೂರಾರು ವರ್ಷಗಳಿಂದ ಅಸ್ತಿತ್ವದಲ್ಲಿವೆ. ಇದರ ಕಣಕಣವನ್ನೂ ಅತಿಕಾಳಜಿಯಿಂದ ಓರಣವಾಗಿಟ್ಟುಕೊಳ್ಳಲಾಗಿದೆ. ನಿಮ್ಮ ಮನೆಯಲ್ಲಿರುವ ಅಂಗಳ, ಬಾಲ್ಕನಿ, ಛಾವಣಿ ಅಥವಾ ಬೇರೆ ಯಾವುದೇ ಅನುಕೂಲಕರ ಸ್ಥಳದಲ್ಲಿ ಕೆಲವು ಮಾರ್ಪಾಡುಗಳೊಂದಿಗೆ ನಿಮ್ಮ ಮನೆಯಲ್ಲಿಯೇ ಈ ಜ಼ೆನ್ ಉದ್ಯಾನವನವನ್ನು ನಿರ್ಮಿಸಿಕೊಳ್ಳುವ ಬಗೆ ಹೀಗಿದೆ:

೧) ಮರಳು - ಶಾಂತವಾತಾವರಣವನ್ನು ನೀಡಬಲ್ಲದು


ಜಪಾನಿನ ಉದ್ಯಾನದಲ್ಲಿ ನಡೆಯುವ ಸ್ಥಳದಲ್ಲಿ ನಯವಾದ ಮರಳನ್ನು ಹಾಕಿರುತ್ತಾರೆ. ನಿಮ್ಮ ಮನೆಯ ಜ಼ೆನ್ ಉದ್ಯಾನ ನಿರ್ಮಿಸಬೇಕೆಂದಿರುವ ಸ್ಥಳದಲ್ಲಿ ನೆಲದಲ್ಲಿ ನಯವಾದ ಮರಳನ್ನು ಹರಡುವುದು ಮೊದಲ ಹೆಜ್ಜೆ. ಉದ್ಯಾನದ ಕೆಲ ಸಲಕರಣೆಗಳನ್ನು ಉಪಯೋಗಿಸಿ ಚಿಕ್ಕ ಚಿಕ್ಕ ದಿಬ್ಬ ಅಥವಾ ಅಲೆಗಳಂತೆ ಈ ನೆಲವನ್ನು ರೂಪಿಸಿಕೊಳ್ಳಬಹುದು.

೨) ನೀರಿನ ಜುಳುಜುಳು ಶಬ್ಧ ಅನಿವಾರ್ಯ


ಜ಼ೆನ್ ವೇದಾಂತದ ಪ್ರಕಾರ ನಿರಾಳವಾದ ಮನಸ್ಸಿಗೆ ನೀರಿನ ಜುಳುಜುಳು ಶಬ್ದ ಮನದಲ್ಲಿ ನಿರುದ್ವಿಗ್ನತೆಯನ್ನು ಮೂಡಿಸುತ್ತದೆ. ನಿಮ್ಮ ಉದ್ಯಾನದಲ್ಲಿ ಚಿಕ್ಕ ಕಾರಂಜಿಯೊಂದಿರುವುದು ಅಗತ್ಯ. ಚಿಕ್ಕ ಚಿಕ್ಕ ಕಲ್ಲಿನ ನಡುವೆ ಪುಟಿಯುವಂತಿರುವ ಕಾರಂಜಿ ಅಥವಾ ಸ್ವಲ್ಪ ಎತ್ತರದಿಂದ ಮರದ ಪೈಪು ಅಥವಾ ದೋಣಿಯಿಂದ ಕೆಳಕ್ಕೆ ಇಳಿದು ಒಂದೆಡೆ ಚಿಕ್ಕ ಸಪ್ಪಳದೊಂದಿಗೆ ಬೀಳುವಂತೆ ರೂಪಿಸುವುದು ಎರಡನೇ ಹೆಜ್ಜೆ.

೩) ಒರಟು ಕಲ್ಲುಗಳು ಮತ್ತು ನಯವಾದ ಕಲ್ಲುಗಳು


ಹೊಳೆಬದಿ ಸಿಗುವ ನಯವಾದ, ವಿವಿಧ ಬಣ್ಣಗಳ ಹಾಗೂ ಬೆಟ್ಟದ ಮೇಲೆ ಸಿಗುವ ಒರಟು ಕಲ್ಲುಗಳು ಸಾಕಷ್ಟು ಸಂಖ್ಯೆಯಲ್ಲಿ ಈ ಸ್ಥಳದಲ್ಲಿರಬೇಕು. ಆದರೆ ತುಂಬಾ ಹೆಚ್ಚಿನ ಸಂಖ್ಯೆಯಲ್ಲೂ ಇರಬಾರದು. ಲಗೋರಿ ಆಟದಲ್ಲಿ ಜೋಡಿಸುವಂತೆ ಚಪ್ಪಟೆಯಾದ ದೊಡ್ಡ ಕಲ್ಲುಗಳ ಮೇಲೆ ಚಿಕ್ಕದಾದುದನ್ನು ಒಂದರ ಮೇಲೊಂದರಂತೆ ಪೇರಿಸಿಡಬೇಕು. ವಿವಿಧ ಬಣ್ಣಗಳ ಸಂಯೋಜನೆ ಇನ್ನೂ ಒಳ್ಳೆಯದು. ನಡೆದಾಡುವ ಒಂದು ಪಥವನ್ನು ರೂಪಿಸಿ ಕಪ್ಪು ಮತ್ತು ಬಿಳಿ ಕಲ್ಲುಗಳು ಒಂದರ ಪಕ್ಕ ಇನ್ನೊಂದು ಬರುವಂತೆ ಪಥದ ಪಕ್ಕ ಎರಡೂ ಕಡೆ ಉದ್ದಕ್ಕೂ ಜೋಡಿಸುತ್ತಾ ಹೋಗಬೇಕು. ಇದು ಮೂರನೇ ಹೆಜ್ಜೆ.

೪) ಚಿಕ್ಕ ಚಿಕ್ಕ ವಿಗ್ರಹಗಳು


ನಿಮ್ಮ ಇಷ್ಟದೇವರ, ಮುದನೀಡುವ ಕಲಾಕೃತಿಗಳ ವಿಗ್ರಹಗಳನ್ನು ಸ್ವಲ್ಪ ಎತ್ತರದಲ್ಲಿ ಕಾಣುವಂತೆ ಇಡಬೇಕು. ನೆಲದಿಂದ ನಮ್ಮ ಸೊಂಟದೆತ್ತರಕ್ಕೆ ಜೋಡಿಸುವುದು ಒಳ್ಳೆಯದು. ಜಪಾನ್ ನಲ್ಲಿ ಬುದ್ಧನ ವಿಗ್ರಹಗಳು ಬಹಳ ಜನಪ್ರಿಯ. ಇಷ್ಟೇ ಅಲ್ಲದೇ ಕಪ್ಪೆ, ಹಕ್ಕಿಗಳು, ಮೀನು, ಆಮೆ ಮೊದಲಾದ ಜಲಚರ ಜೀವಿಗಳ ವಿಗ್ರಹಗಳನ್ನೂ ಇಡಬಹುದು. ಆದರೆ ಈ ಜೀವಿಗಳು ಸಾಮಾನ್ಯವಾಗಿ ಕಂಡುಬರುವ ಸ್ಥಳದಲ್ಲಿ ಸ್ಥಾಪಿಸುವುದು ಅಗತ್ಯ. ಅಂದರೆ ಆಮೆಯನ್ನು ನೆಲದಲ್ಲೂ ಹಕ್ಕಿಯನ್ನು ಕೊಂಚ ಮೇಲ್ಭಾಗದಲ್ಲಿಡುವುದು ಒಳ್ಳೆಯದು. ಜಪಾನ್ ನ ಪಗೋಡ ಮಾದರಿಗಳನ್ನೂ ಆಯ್ದುಕೊಳ್ಳಬಹುದು. ಗಾಳಿಯಾಡಿಗಾದ ಗಂಟೆ ಬಾರಿಸುವ ಪುಟ್ಟ ತೂಗುಗಂಟೆಗಳನ್ನೂ ಆಯ್ದುಕೊಳ್ಳಬಹುದು. ಸ್ಥಳದಲ್ಲಿ ಸಾಕಷ್ಟು ಹಸಿರನ್ನು ನೆಡುವುದು ಉತ್ತಮ. ಇದು ನಾಲ್ಕನೆಯ ಮತ್ತು ಅಂತಿಮ ಹೆಜ್ಜೆ. ಪ್ರತಿದಿನ ಈ ಸ್ಥಳದಲ್ಲಿ ಕೊಂಚ ಕಾಲ ನಿರಾಳವಾಗಿ ಕಾಲ ಕಳೆಯುವುದರಿಂದ ಮನಸ್ಸು ನಿರಾಳವಾಗುತ್ತದೆ, ಶಾಂತೆ ನೆಮ್ಮದಿ ನೆಲೆಸುತ್ತದೆ.
English summary

How to create a perfect zen garden

How to create a perfect zen garden, Tips for gardening, how to make a zen garden, how to create a zen garden on a budget.
Story first published: Wednesday, October 29, 2014, 17:25 [IST]
X
Desktop Bottom Promotion