For Quick Alerts
ALLOW NOTIFICATIONS  
For Daily Alerts

ಬೇಸಿಗೆ ಶಿಬಿರವನ್ನು ಸಜ್ಜುಗೊಳಿಸುವ ಮುನ್ನ, ಒಂದಿಷ್ಟು ಟಿಪ್ಸ್

By Super
|

ಬೇಸಿಗೆ ರಜೆ ಬಂದ ಬಳಿಕ ಮನೆಯಲ್ಲಿಯೇ ಕುಳಿತುಕೊಳ್ಳುವುದು ಯಾರಿಗೂ ಇಷ್ಟವಿಲ್ಲದ ಸಂಗತಿ. ಪ್ರವಾಸ, ಶೈಕ್ಷಣಿಕ ಶಿಬಿರ, ಸೈಕ್ಲಿಂಗ್, ಒಟ್ಟಾರೆ ನಾಲ್ಕು ಗೋಡೆಗಳ ನಡುವಿನಿಂದ ಹೊರಬಂದು ನಿಸರ್ಗದ ನಡುವೆ ಕೊಂಚ ಕಾಲ ಕಳೆಯುವ ಮೂಲಕ ಜೀವನದಲ್ಲಿ ಕೆಲವೊಂದು ಅತ್ಯಮೋಘ ಅನುಭವಗಳನ್ನು ಪಡೆಯಬಹುದು. ಅದರಲ್ಲೂ ಕೊಂಚಕಾಲ ನಿಸರ್ಗದ ಮಡಿಲಲ್ಲಿ ಯಾವುದೇ ಒತ್ತಡವಿಲ್ಲದೇ ಕೆಲಕಾಲ ಕಳೆದು ಮನೆಗೆ ಹಿಂದಿರುಗುವುದು ಇಂದಿನ ದಿನಗಳಲ್ಲಿ ಅಗತ್ಯವಾದುದು ಸಹಾ.

ಸುಮ್ಮನೇ ಒಬ್ಬಂಟಿಯಾಗಿ ಯಾವುದೇ ಗುಡ್ಡದ ಮೇಲೆ ಹೋದರೆ ಇದರಲ್ಲಿ ಹೆಚ್ಚಿನ ಸಂತೋಷ ಸಿಗದು. ಆದರೆ ಕೆಲವು ಸಮಾನಸ್ಕಂದ ಸ್ನೇಹಿತರೊಡನೆ ಸೂಕ್ತ ಸ್ಥಳವೊಂದನ್ನು ಆರಿಸಿಕೊಂಡು ಶಿಬಿರವೊಂದನ್ನು ಸ್ಥಾಪಿಸಿ ಕೊಂಚ ಕಾಲ ಯಾವುದೇ ಉದ್ವೇಗವಿಲ್ಲದೇ ವಿವಿಧ ಚಟುವಟಿಕೆಗಳ ಮೂಲಕ ಇಡಿಯ ದಿನ ಅಥವಾ ಒಂದೆರಡು ದಿನಗಳನ್ನು ಕಳೆಯುವ ಮೂಲಕ ಮನಸ್ಸು ಪ್ರಫುಲ್ಲವಾಗುವುದು ಮಾತ್ರವಲ್ಲ, ಸ್ನೇಹಿತರೊಡನ ಬಾಂಧವ್ಯವೂ ಹೆಚ್ಚು ಗಾಢವಾಗುತ್ತದೆ.

ಈ ವಿಷಯ ಮನಕ್ಕೆ ಬರುತ್ತಿದ್ದಂತೆಯೇ ಮುಂದಿನ ಬಾರಿ ಎಲ್ಲಿ ಹೋಗುವುದು ಎಂಬ ಪ್ರಶ್ನೆ ಖಂಡಿತಾ ನಿಮ್ಮ ಗಮನಕ್ಕೆ ಬಂದಿರುತ್ತದೆ. ಇನ್ನೂ ಬುದ್ಧಿವಂತರು ಯಾವ ಯಾವ ಸ್ನೇಹಿತರನ್ನು ಕರೆದೊಯ್ಯಬೇಕು ಎಂದೂ ಲೆಕ್ಕಾಚಾರವನ್ನೂ ಹಾಕಿ ಆಗಿರುತ್ತದೆ. ಆದರೆ ಎಲ್ಲಿ ಹೋಗುವುದಾದರೂ ಇದಕ್ಕೆ ಸೂಕ್ತ ಪೂರ್ವಸಿದ್ಧತೆ ಅಗತ್ಯ. ಅಗತ್ಯ ಸಾಮಾಗ್ರಿಗಳನ್ನು ಕೊಂಡೊಯ್ಯುವುದು ಮತ್ತು ಅನಗತ್ಯವಾದುದನ್ನು ಕೊಂಡೊಯ್ಯದೇ ಇರುವುದೇ ಜಾಣರ ಲಕ್ಷಣ. ಅಲ್ಲದೇ ಬೇಸಿಗೆ ಶಿಬಿರ ಕೊಂಚ ದೂರ ಇರುವಂತೆ ನೋಡಿಕೊಂಡು ಈ ಶಿಬಿರಕ್ಕೆ ನಿಗದಿತ ದಿನಕ್ಕೂ ಒಂದು ದಿನ ಮುಂಚಿತವಾಗಿ ಒಂದಿಬ್ಬರು ಹೋಗಿ ಎಲ್ಲ ಸಿದ್ಧತೆಗಳನ್ನು ನಡೆಸಿ ಉಳಿದವರು ಹೆಚ್ಚಿನ ಶ್ರಮವಿಲ್ಲದೇ ತಲುಪುವುದು ಒಂದು ಕ್ರಮವಾದರೆ ಎಲ್ಲರೂ ಒಟ್ಟಿಗೇ ಹೊರಟು ಒಂದೇ ಸಮಯದಲ್ಲಿ ತಲುಪಿ ಕೆಲಸಗಳನ್ನು ಹಂಚಿಕೊಳ್ಳುವುದು ಇನ್ನೊಂದು ಕ್ರಮ. ಎರಡೂ ಕ್ರಮಗಳಲ್ಲಿ ತನ್ನದೇ ಆದ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳಿವೆ.

How To Decorate A Summer Camp Cabin

ಬೇಸಿಗೆ ಶಿಬಿರದಲ್ಲಿ ತಂಗುದಾಣವನ್ನು ಸ್ಥಾಪಿಸುವುದು ಅತ್ಯಂತ ಮುಖ್ಯವಾದ ಕಾರ್ಯ. ಈಗ ಮಡಚಿಕೊಂಡು ಸುಖವಾಗಿ ಎತ್ತಿಕೊಂಡು ಹೋಗಬಹುದಾದ ಟೆಂಟುಗಳು ಲಭ್ಯವಿವೆ. ಒಂದು ವೇಳೆ ಹೆಚ್ಚಿನ ಜನರು ಒಂದೆಡೆ ಸೇರುವುದಾದರೆ ಮೊದಲ ಕ್ರಮ ಸೂಕ್ತ. ನಿಗದಿತ ಸಂಖ್ಯೆಯ ಸ್ನೇಹಿತರಿಗೆ ಎರಡನೆಯ ಕ್ರಮ ಸೂಕ್ತ. ಯಾವುದೇ ಕ್ರಮದ ಮೂಲಕ ನಿಮ್ಮ ಗಮ್ಯಸ್ಥಾನವನ್ನು ತಲುಪಿ ಶಿಬಿರವನ್ನು ಸ್ಥಾಪಿಸಿದರೂ ಈ ಶಿಬಿರ ಸ್ಮರಣಾರ್ಥಕವಾಗಲು ಕೊಂಚ ಶ್ರಮವಹಿಸಿದರೆ ಸಾಕು.

ಇದರಿಂದ ಈ ದಿನಗಳನ್ನು ಬಹುಕಾಲದವರೆಗೆ ಮೆಲುಕು ಹಾಕಲು ಸಾಧ್ಯವಾಗುತ್ತದೆ. ಈ ಶಿಬಿರವನ್ನು ಒಂದು ವಿಷಯಕ್ಕೆ ಸಂಬಂಧಿಸಿದಂತೆ ಅಲಂಕರಿಸಿದರೆ ಶಿಬಿರಕ್ಕೆ ಕಳೆಕಟ್ಟುತ್ತದೆ. ಸಾಮಾನ್ಯವಾಗಿ ಬಾಲಕರು ಕಡಲ್ಗಳ್ಳರ, ನದಿ, ಸಮುದ್ರದ ಅಲೆ ಮೊದಲಾದವುಗಳನ್ನು ಆಯ್ದುಕೊಂಡರೆ ಬಾಲಕಿಯರು ಹೂವುಗಳ, ಕಥೆಗಳಲ್ಲಿ ಬರುವ ಕಾಲ್ಪನಿಕ ಪಾತ್ರಗಳ ವಿಷಯವನ್ನು ಇಷ್ಟಪಡುತ್ತಾರೆ. ಎಲ್ಲರೂ ಒಪ್ಪುವ ಒಂದು ವಿಷಯವನ್ನು ಆರಿಸಿಕೊಂಡು ಈ ಶಿಬಿರವನ್ನು ಅದರಂತೆ ಅಲಂಕರಿಸಿ, ಶಿಬಿರದ ಸಮಯದಲ್ಲಿ ಆ ಪಾತ್ರಗಳನ್ನು ಅನುಸರಿಸುವ ಮೂಲಕ ಬೇಸಿಗೆ ಶಿಬಿರದ ಸಮಯವನ್ನು ಅಮೋಘವಾಗಿ ಆಚರಿಸಬಹುದು. ಇದರ ಬಗ್ಗೆ ಕೆಲವು ಅಮೂಲ್ಯ ಸಲಹೆಗಳನ್ನು ನೀಡಲಾಗಿದೆ, ಮುಂದೆ ಓದಿ...

ಇಡಿಯ ತಂಡ ಒಪ್ಪುವಂತಹ ವಿಷಯವನ್ನು ಮೊದಲೇ ನಿರ್ಧರಿಸಿ
ನಿಮ್ಮ ತಂಡದಲ್ಲಿ ಎಷ್ಟು ಜನರಿದ್ದಾರೋ ಅಷ್ಟೂ ಜನರು ಒಪ್ಪುವಂತಹ ಒಂದು ವಿಷಯವನ್ನು ಮೊದಲೇ ಆರಿಸಿಕೊಳ್ಳಿ. ಇದು ಕ್ಲಿಷ್ಟವಾಗಬೇಕಾದುದೇನೂ ಇಲ್ಲ. ಉದಾಹರಣೆಗೆ ಇಂದಿನ ವಿಷಯ ಬಿಳಿ, ಎಂದಿದ್ದರೆ ಎಲ್ಲರೂ ಬಿಳಿ ವಸ್ತುಗಳನ್ನೇ ಹೆಚ್ಚಾಗಿ ತರಬೇಕು, ಬಿಳಿ ಟಿ ಶರ್ಟ್, ಪ್ಯಾಂಟ್, ಟೊಪ್ಪಿ, ಕ್ಯಾನ್ ವಾಸ್ ಶೂ, ಸಾಧ್ಯವಾದಷ್ಟು ಬಿಳಿಯ ವಸ್ತುಗಳನ್ನು ತಂದರೆ ಆಯಿತು. ಬಾಲಕಿಯರು ಡಿಸ್ನಿ ಪಾತ್ರಗಳ ವಿಷಯಗಳನ್ನು, ಗುಲಾಬಿ ಬಣ್ಣವನ್ನು, ಒಟ್ಟಾರೆ ಎಲ್ಲರೂ ಒಪ್ಪುವಂತಹ ಒಂದು ವಿಷಯವಾದರೆ ಸಾಕು.

ಶಿಬಿರದಲ್ಲಿ ಪೋಸ್ಟರುಗಳನ್ನು ಅಂಟಿಸಿ
ಒಮ್ಮೆ ವಿಷಯ ಯಾವುದು ಎಂದು ಗೊತ್ತಾಯಿತೋ, ಮುಂದಿನ ಕ್ರಮವಾಗಿ ಈ ಬಣ್ಣ ಅಥವಾ ವಿಷಯಕ್ಕೆ ಸಂಬಂಧಪಟ್ಟ ಕೆಲವು ಪೋಸ್ಟರುಗಳನ್ನು ನಿಮ್ಮ ಶಿಬಿರದ ಗೋಡೆಗಳಿಗೆ ಪಿನ್ ಮೂಲಕ ಲಗತ್ತಿಸಿ. ಉದಾಹರಣೆಗೆ ನಿಮ್ಮ ವಿಷಯ ಕಡಲ್ಗಳ್ಳರದ್ದಿದ್ದರೆ ಕ್ಯಾಪ್ಟನ್ ಜಾ ಸ್ಪಾರೋ ಪೋಸ್ಟರ್ ಶಿಬಿರದ ಮುಂದಿನ ಗೋಡೆಗೆ ಅಂಟಿರಲಿ. ಅಂತೆಯೇ ಟಿನ್ ಟಿನ್ ಕಾಮಿಕ್ಸ್ ನ ಕ್ಯಾಪ್ಟನ್ ಹ್ಯಾಡಕ್ ಸಹಾ ಉತ್ತಮ ಆಯ್ಕೆಯಾಗಬಲ್ಲದು.

ನಿಮ್ಮ ಮಾತುಗಳನ್ನೂ ಬರೆದು ಗೋಡೆಗೆ ಅಂಟಿಸಿ
ನಿತ್ಯವೂ ವೃತ್ತಪತ್ರಿಕೆಗಳಲ್ಲಿ ಖ್ಯಾತನಾಮರು ಹೇಳಿದ ಮಾತುಗಳನ್ನು ಪ್ರಕಟಿಸುತ್ತಾರೆ. ಅವರ ಮಾತುಗಳನ್ನು ಪ್ರಕಟಿಸಲು ಪತ್ರಿಕೆ, ಮಾಧ್ಯಮಗಳಿವೆ. ಆದರೆ ಜನಸಾಮಾನ್ಯರಾದ ನಮ್ಮ ಮಾತುಗಳನ್ನು ಕೇಳಲು ಯಾರಿದ್ದಾರೆ? ಈ ಶಿಬಿರದಲ್ಲಿ ನಮ್ಮ ಮಾತುಗಳನ್ನು ನಮ್ಮ ಸ್ನೇಹಿತರಿಗೇ ಮೊದಲು ತಿಳಿಸೋಣ. ನಮಗೆ ಹೇಳಬೇಕೆನಿಸಿದ ಮಾತುಗಳನ್ನು ಒಂದು ಪುಟದಲ್ಲಿ ದೊಡ್ಡದಾಗಿ ಬರೆದು ಕೆಳಗೆ ನಮ್ಮ ಹೆಸರನ್ನು ಹಾಕಿ ಇಡಿಯ ಶಿಬಿರದ ಒಳಗೆ ಹೊರಗೆಲ್ಲಾ ಅಂಟಿಸಿ. ಯಾರು ಏನು ಬರೆದಿದ್ದಾರೆ ಎಂದು ಓದುವುದೇ ಒಂದು ಮಜಾ. ಅಷ್ಟೇ ಅಲ್ಲ, ಅವರ ಅಂತಃಕರಣ ಅರಿಯುವ ಒಂದು ಕ್ರಮ ಸಹಾ.

ನಿಮ್ಮ ಚಿತ್ರಗಳನ್ನು ಅಂಟಿಸಿ
ನಿಮ್ಮ ಹಿಂದಿನ ಶಿಬಿರದಲ್ಲಿ ಕಳೆದ ಕ್ಷಣಗಳನ್ನು ಸೆರೆಹಿಡಿದ ಚಿತ್ರಗಳನ್ನು ಸಹಾ ಶಿಬಿರದ ಗೋಡೆಗಳಿಗೆ ಅಂಟಿಸಿ. ಒಂದು ವೇಳೆ ನಿಮ್ಮ ಕುಟುಂಬದೊಂದಿಗೆ ಶಿಬಿರಕ್ಕೆ ಬಂದಿದ್ದರೆ ಹಿಂದಿನ ಶಿಬಿರದ ಚಿತ್ರಗಳನ್ನೂ ಪ್ರಕಟಿಸಿ. ಇದರಿಂದ ನಿಮ್ಮ ಸ್ನೇಹಿತರೊಡನೆ ಕೆಲವು ಕ್ಷಣಗಳನ್ನು ಸಂತೋಷವಾಗಿ ಕಳೆಯಲು, ಹಿಂದಿನ ಶಿಬಿರದ ಮೋಜಿನ ಸಂಗತಿ ನೆನಪಿಗೆ ಬರಲು ಸಾಧ್ಯವಾಗುತ್ತದೆ.

ಪ್ರಕಟಣಾ ಫಲಕವೊಂದಿರಲಿ (Bulletin Board)
ಒಂದು ವೇಳೆ ತಂಡದಲ್ಲಿ ಹತ್ತಕ್ಕಿಂತ ಹೆಚ್ಚು ಜನರಿದ್ದರೆ ಮತ್ತು ಒಂದಕ್ಕಿಂತ ಹೆಚ್ಚು ದಿನ ಶಿಬಿರದಲ್ಲಿ ಕಳೆಯುವವರಿದ್ದರೆ ಕೆಲಸಗಳನ್ನು ಸರಿಯಾಗಿ ಹಂಚಿಕೊಳ್ಳುವುದೇ ನಿಜವಾದ ಸಂತೋಷವಾಗಿದೆ. ಆದರೆ ಹೆಚ್ಚಿನ ಅನುಭವಗಳಲ್ಲಿ ಸುಲಭವಾದ ಕೆಲಸವನ್ನು ತಾನು ವಹಿಸಿ ಕಷ್ಟದ ಕೆಲಸ ನಮಗೆ ನೀಡಲಾಯಿತು ಎಂಬ ದೂರುಗಳು ಹಿಂದಿನ ಶಿಬಿರದ ಅನುಭವಗಳಲ್ಲಿ ಕಂಡುಬಂದಿದೆ. ಆದ್ದರಿಂದ ಇದು ಆಗದಂತೆ ತಡೆಯಲು ಒಂದು ಪ್ರಕಟಣಾ ಫಲಕವೊಂದನ್ನು ಸ್ಥಾಪಿಸಿ ಯಾವ ಕೆಲಸಗಳನ್ನು ಯಾರು ಮಾಡುವುದು, ಯಾವ ಸಮಯದಲ್ಲಿ ಯಾವ ಕಾರ್ಯಗಳನ್ನು ನಿರ್ವಹಿಸುವುದು, ಊಟದ ಸಮಯ ಮೊದಲಾದವುಗಳನ್ನು ಚುಟುಕಾಗಿ ಬರೆದು ಪ್ರಕಟಿಸುವ ಮೂಲಕ, ಮತ್ತು ಮುಖ್ಯವಾಗಿ ಈ ಕೆಲಸ ನಿರ್ವಹಿಸುವವರ ಹೆಸರುಗಳನ್ನು ಬರೆಯುವ ಮೂಲಕ ಶಿಬಿರ ಸುಸೂತ್ರವಾಗಿ ನಡೆಯಲು ಸಾಧ್ಯವಾಗುತ್ತದೆ. ಮನಃಶಾಸ್ತ್ರಜ್ಞರ ಪ್ರಕಾರ ನಮಗೆಲ್ಲರಿಗೂ ನಮ್ಮ ಹೆಸರು ಕರೆದು ಕೂಗುವುದು, ಹೆಸರಿನ ಮುಂದೆ ಕರ್ತವ್ಯವನ್ನು ಸೂಚಿಸುವುದರಿಂದ ಆತ್ಮತೃಪ್ತಿ ಹೆಚ್ಚುತ್ತದೆ.

ನಿಮ್ಮ ಮಲಗುವ ಹಾಸು ಮತ್ತು ದಿಂಬು ಸಹಾ ವಿಷಯಕ್ಕೆ ಅನುಗುಣವಾಗಿರಲಿ
ಪ್ರತಿಯೊಬ್ಬರೂ ತಮ್ಮ ಮಲಗುವ ವಸ್ತುಗಳನ್ನು ಅಂದರೆ ತೆಳು ಹಾಸಿಗೆ, ಹೊದಿಕೆ, ದಿಂಬುಗಳನ್ನು ತಾವೇ ತರಲಿ. ಇದು ಸಂಪೂರ್ಣವಾಗಿ ಅವರದ್ದೇ ಆಯ್ಕೆಯಾಗಿರಲಿ. ಒಂದು ವೇಳೆ ತಂಡದಲ್ಲಿ ಮಕ್ಕಳಿದ್ದರೆ ಅವರೇ ತಮ್ಮ ಆಯ್ಕೆಯ ದಿಂಬು ಹೊದಿಕೆಗಳನ್ನು ತರಲಿ. ಈ ಶಿಬಿರ ತಾತ್ಕಾಲಿಕವಾಗಿದ್ದರೂ ಇದರಲ್ಲಿ ಕಳೆಯುವ ಕ್ಷಣಗಳು ನಮ್ಮ ನೆನಪಿನಲ್ಲಿ ಶಾಶ್ವತವಾಗಿ ಉಳಿಯುವ ಕಾರಣ ಇವೆಲ್ಲವೂ ಇಂದಿನ ಶಿಬಿರದ ವಿಷಯಕ್ಕೆ ಅನುಗುಣವಾಗಿಯೇ ಇರುವಂತೆ ನೋಡಿಕೊಳ್ಳುವ ಮೂಲಕ ತಂಡದಲ್ಲಿ ಭಾಗಿಯಾದ ಸಂತೋಷ ಮೂಡುತ್ತದೆ.

ನಿಮ್ಮದೇ ಧ್ವಜವೊಂದಿರಲಿ
ಶಿಬಿರವನ್ನು ಸ್ಥಾಪಿಸಿದ ಬಳಿಕ ಮೇಲೊಂದು ಧ್ವಜ ಸ್ಥಾಪಿಸುವುದು ಅತಿ ಅಗತ್ಯ. ಈ ಧ್ವಜ ಇಂದಿನ ವಿಷಯಕ್ಕೆ ಅನುಗುಣವಾಗಿರಲಿ. ಸಿದ್ಧರೂಪದ ಧ್ವಜ ಸಿಗದಿದ್ದರೆ 3'X 5' ಗಾತ್ರದ ಬಟ್ಟೆಯನ್ನು ಕೊಂಡು ಇದರಲ್ಲಿ ನಿಮ್ಮ ಶಿಬಿರದ ವಿಷಯದ ಕುರಿತಾದ ಒಂದು ಲಾಂಛನ ಬರುವಂತೆ, ಸಾಧ್ಯವಾದರೆ ಸ್ಥಳ ಮತ್ತು ದಿನಾಂಕವನ್ನೂ ನಮೂದಿಸಿ ಶಿಬಿರದ ಮೇಲೆ ಹಾರುತ್ತಿರುವಂತೆ ಮಾಡಿ. ಇದರಿಂದ ಬೇರೆಯವರಿಗೆ ಈ ಸ್ಥಳದ ಬಗ್ಗೆ ತಿಳಿಸಲು ನೆರವಾಗುತ್ತದೆ. ಒಂದು ವೇಳೆ ಮೊದಲ ಕ್ರಮದ ಶಿಬಿರವಾದರೆ ಒಂದು ಎತ್ತರದ ಕಂಭ ಸ್ಥಾಪಿಸಿ ಧ್ವಜವನ್ನು ಎತ್ತರಕ್ಕೆ ಹಾರಿಸುವ ಮೂಲಕ ಉಳಿದವರಿಗೆ ಇಲ್ಲಿ ಬರಲು ತಿಳಿಸಲು ಸುಲಭವಾಗುತ್ತದೆ.

ತಂಡದ ಸದಸ್ಯರು ಹಾಗೂ ಒಂದು ವೇಳೆ ಇತರ ವಸ್ತುಗಳನ್ನೇನಾದರೂ ಹೊರಗಿನಿಂದ ತರಿಸುವುದಾದರೆ ಅವರ ಪ್ರತಿನಿಧಿಗಳಿಗೆ ಇಲ್ಲಿ ತಲುಪಲೂ ಈ ಧ್ವಜ ನೆರವಾಗುತ್ತದೆ. ಈ ಧ್ವಜವನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುವಂತೆ ವಿಷಯದ ಕುರಿತಾದ ಚಿತ್ರವನ್ನು ಬಿಡಿಸುವುದು ಮಾತ್ರ ಮುಖ್ಯ. ಉದಾಹರಣೆಗೆ ಕೋಟೆಯ ಚಿತ್ರವಿದ್ದರೆ ಇದನ್ನು ದೊಡ್ಡದಾಗಿ ಬಿಡಿಸಿ. ಇಲ್ಲಿ ಬರುತ್ತಿರುವವರಿಗೆ ಕೋಟೆಯ ಚಿತ್ರ ಇರುವ ಶಿಬಿರದ ಬಳಿ ಬನ್ನಿ ಎಂದು ತಿಳಿಸಿದರೆ ಇದನ್ನು ದೂರದಿಂದಲೇ ನೋಡಿ ಇಲ್ಲಿ ತಲುಪಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಒಂದೇ ಸ್ಥಳದಲ್ಲಿ ಒಂದಕ್ಕಿಂತ ಹೆಚ್ಚು ಶಿಬಿರಗಳಿದ್ದರೂ ಸರಿಯಾದ ಶಿಬಿರಕ್ಕೆ ತಲುಪಲೂ ಈ ವಿಧಾನ ಸೂಕ್ತ.

ಬೆಳಗುವ ಕ್ರಿಸ್ಮಸ್ ದೀಪಗಳಿರಲಿ


ಇಂದು ಮಾರುಕಟ್ಟೆಯಲ್ಲಿ ಬ್ಯಾಟರಿಗಳಿಂದ ನಡೆಯುವ ಅಥವಾ ವಿದ್ಯುತ್ ನಿಂದ ನಡೆಯುವ ಚಿಕ್ಕ ಚಿಕ್ಕ ದೀಪಗಳ ಉದ್ದದ ಹಾರ ದೊರಕುತ್ತದೆ. ಇವುಗಳನ್ನು ನಿಮ್ಮ ಶಿಬಿರದ ಸುತ್ತ ಹರಡಿದಂತೆ ಅಳವಡಿಸಿದರೆ ರಾತ್ರಿಯ ಹೊತ್ತು ಇವು ಮಿಣುಕುತ್ತಾ ಶಿಬಿರದ ಸಂಭ್ರವನ್ನು ಇನ್ನಷ್ಟು ಹೆಚ್ಚಿಸುತ್ತವೆ.
English summary

How To Decorate A Summer Camp Cabin

Summer Camp!!! The pair of words is enough to fill you with fun and boost you for the programme. Till now you’ve only seen in movies and read in stories about summer camp. How many times have you imagined how to decorate a summer camp cabin, what you will do with your friends, how you will play the treasure hunting games, etc. So, to help you beat the summer heat with creative ideas to decorate your very own summer camp cabin, here are some essential tips, do have a look.
X
Desktop Bottom Promotion