For Quick Alerts
ALLOW NOTIFICATIONS  
For Daily Alerts

ದುರಭ್ಯಾಸಗಳು ಆರೋಗ್ಯಕ್ಕೆ ಒಳ್ಳೆಯದನ್ನೇ ಮಾಡುತ್ತದೆಯಂತೆ!

By Arshad
|

ಪ್ರತಿಯೊಬ್ಬರಲ್ಲಿಯೂ ಒಂದಲ್ಲಾ ಒಂದು ಅಭ್ಯಾಸಗಳು ಇದ್ದೇ ಇರುತ್ತವೆ. ಆದರೆ ಕೆಲವು ಅಭ್ಯಾಸಗಳು ಇತರರಿಗೆ ಅಸಭ್ಯ ಎನಿಸಬಹುದು, ಕಿರಿಕಿರಿ ತರಿಸಬಹುದು, ಧಾರ್ಮಿಕವಾಗಿ ವಿರುದ್ಧವಾಗಿರಬಹುದು, ಸಂಪ್ರದಾಯಕ್ಕೆ ಸಲ್ಲದೇ ಇರಬಹುದು. (ಉದಾಹರಣೆಗೆ ಎಡಗೈಯಲ್ಲಿ ಆಹಾರವನ್ನು ತಿನ್ನುವುದು) ಆದರೆ ಈ ಅಭ್ಯಾಸಗಳು ನಮ್ಮ ನಿತ್ಯದ ಭಾಗವೇ ಆಗಿಬಿಟ್ಟಿರುವುದರಿಂದ ಇವುಗಳಿಂದ ಹೊರಬರುವುದು ಕಷ್ಟಸಾಧ್ಯ.

ಕೆಲವು ಅಭ್ಯಾಸಗಳೇ ನಮ್ಮ ಗುರುತೂ ಆಗಬಹುದು, ನಮ್ಮ ಆರೋಗ್ಯವನ್ನೂ ಸುಧಾರಿಸಬಹುದು ಅಥವಾ ಕೆಡಿಸಲೂ ಬಹುದು. ಕೆಲವು ಅಭ್ಯಾಸಗಳು ಅತ್ಯಂತ ದುರಭ್ಯಾಸಗಳಾಗಿದ್ದು, ಇದರ ಅರಿವಿದ್ದೂ ಹೊರಬರುವುದು ಕಷ್ಟವಾಗುತ್ತದೆ. ಉದಾಹರಣೆಗೆ ಮದ್ಯಪಾನ, ಧೂಮಪಾನ, ಗುಟ್ಕಾ ಮೊದಲಾದವು. ಇವುಗಳ ಪ್ಯಾಕೆಟ್ಟುಗಳ ಮೇಲೆಯೇ ಇವುಗಳ ದುಷ್ಪರಿಣಾಮಗಳನ್ನು ಮುದ್ರಿಸಲಾಗಿದ್ದರೂ ಬಳಕೆದಾರರು ಇದನ್ನು ಅಲಕ್ಷಿಸುತ್ತಾರೆ. ಅಂತೆಯೇ ಕೆಲವು ಅಭ್ಯಾಸಗಳು ಒಳ್ಳೆಯದೇ ಆಗಿವೆ.

ಉದಾಹರಣೆಗೆ ವೃತ್ತಪತ್ರಿಕೆಗಳನ್ನು ಪೂರ್ತಿಯಾಗಿ ಓದುವುದು. ಇತರರ ದೃಷ್ಟಿಯಲ್ಲಿ ಅಗತ್ಯವಾದುದನ್ನು ಮಾತ್ರ ಓದಿ ಮುಗಿಸಿದರೆ ಉತ್ತಮ. ಆದರೆ ಇಡಿಯ ಪತ್ರಿಕೆಯನ್ನು ಓದಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಕೆಲವರು ಇದನ್ನು ದುರಭ್ಯಾಸ ಎನ್ನುವುದುಂಟು. ಆದರೆ ಈ ಅಭ್ಯಾಸದಿಂದ ಲಭಿಸುವ ಜ್ಞಾನ ಮಾತ್ರ ಅಪಾರವಾದ ಪ್ರಯೋಜನವುಳ್ಳದ್ದಾಗಿದೆ. ನಿಮಗೆ ಮಾರಕವಾಗಲಿರುವ ಪ್ರತಿ ದಿನದ 10 ದುರಭ್ಯಾಸಗಳು

ದುರಭ್ಯಾಸಗಳಿಂದ ಹೊರಬರುವುದು ಕಷ್ಟವಾದರೂ ಅಸಾಧ್ಯವಲ್ಲ. ದಿನಕ್ಕೆ ನೂರು ಸಿಗರೇಟು ಸೇದುವ ಅಭ್ಯಾಸವಿದ್ದವರೂ ಯಶಸ್ವಿಯಾಗಿ ಈ ಚಟದಿಂದ ಹೊರಬಂದಿದ್ದಾರೆ. ಇದಕ್ಕೆ ಮನಸ್ಸನ್ನು ಗಟ್ಟಿ ಮಾಡುವುದು ಮುಖ್ಯ. ಕೆಲವು ಅಭ್ಯಾಸಗಳು ದುರಭ್ಯಾಸಗಳಂತೆ ಕಂಡುಬಂದರೂ ಒಂದಲ್ಲ ಒಂದು ರೀತಿಯಲ್ಲಿ ಪರೋಕ್ಷವಾಗಿ ಆರೋಗ್ಯಕ್ಕೆ ಉತ್ತಮವೇ ಆಗಿದೆ ಎಂದು ಒಂದು ಸಂಶೋಧನೆ ತಿಳಿಸುತ್ತದೆ. ಇವು ಯಾವ ದುರಭ್ಯಾಸಗಳಪ್ಪಾ ಎಂಬ ಕುತೂಹಲ ಮೂಡಿತೇ? ಮುಂದೆ ಓದಿ....

ಚಾಕಲೇಟು ತಿನ್ನುವುದು

ಚಾಕಲೇಟು ತಿನ್ನುವುದು

ಮಕ್ಕಳು ಚಾಕಲೇಟು ತಿಂದರೆ ಹಿರಿಯರ ಮೊತ್ತಮೊದಲ ಪ್ರತಿಕ್ರಿಯೆ ಎಂದರೆ 'ಚಾಕಲೇಟು ಹೆಚ್ಚು ತಿನ್ನಬೇಡ, ಹಲ್ಲು ಹಾಳಾಗುತ್ತದೆ' ಆದರೆ ಕಪ್ಪು ಚಾಕಲೇಟಿನಲ್ಲಿ ಹಲವು ಆಂಟಿ ಆಕ್ಸಿಡೆಂಟುಗಳು, ಫ್ಲೇವನಾಯ್ಡುಗಳು ಮತ್ತಿತರ ಪೋಷಕಾಂಶಗಳಿವೆ. ಇವು ರಕ್ತನಾಳಗಳ ಸೆಡೆತವನ್ನು ಸಡಿಲಿಸಿ ರಕ್ತದ ಒತ್ತಡವನ್ನು ಕಡಿಮೆಗೊಳಿಸುತ್ತದೆ. ಆದರೆ ಚಾಕಲೇಟಿನ ಪ್ರಮಾಣ ಕಡಿಮೆ ಇರಬೇಕು ಅಷ್ಟೇ. ಆದರೆ ಚಾಕಲೇಟು ಎಂದರೆ ಕಪ್ಪು ಚಾಕಲೇಟು ಆರೋಗ್ಯಕ್ಕೆ ಉತ್ತಮ. ಕಂದು ಅಥವಾ ಇತರ ಚಾಕಲೇಟುಗಳು ಆರೋಗ್ಯಕ್ಕೆ ಅಷ್ಟು ಉತ್ತಮವಲ್ಲ.

ನಿದ್ದೆಯಿಂದ ತಡವಾಗಿ ಏಳುವುದು

ನಿದ್ದೆಯಿಂದ ತಡವಾಗಿ ಏಳುವುದು

ಜನಸಾಮಾನ್ಯರಲ್ಲಿ ಹೆಚ್ಚಿನವರು ಬೆಳಗ್ಗಿನ ನಿದ್ದೆಯನ್ನು ಇಷ್ಟಪಡುತ್ತಾರೆ. ಅದರಲ್ಲೂ ಕೆಲವರು ತುಂಬಾ ತಡವಾಗಿ ಏಳಲು ಇಚ್ಛಿಸುತ್ತಾರೆ. ಮುಂಜಾನೆ ಬೇಗ ಏಳುವುದು ಉತ್ತಮ ಅಭ್ಯಾಸವೇ ಆಗಿದೆ. ಆದರೆ ರಾತ್ರಿ ತಡವಾಗಿ ಮಲಗಿ ಬೆಳಿಗ್ಗೆ ಬೇಗ ಎದ್ದರೆ, ಅದರಲ್ಲೂ ಅಲಾರಾಂ ಇಟ್ಟು ಬಲವಂತವಾಗಿ ದೇಹವನ್ನು ಎಬ್ಬಿಸಿದರೆ ನಿದ್ದೆಯ ಸಮಯದಲ್ಲಿ ಆಗಬೇಕಾದ ಅನೈಚ್ಛಿಕ ಕಾರ್ಯಗಳಾದ ಜೀರ್ಣಕ್ರಿಯೆ ಮೊದಲಾದವು ಬಾಧೆಗೊಳಗಾಗುತ್ತವೆ. ಅಲ್ಲದೇ ಬಲವಂತವಾಗಿ ಹಸಿವು ಮೂಡಿ ಅನಗತ್ಯವಾಗಿ ಅನಾರೋಗ್ಯಕರ ಆಹಾರವನ್ನು ಸೇವಿಸಬೇಕಾಗಿ ಬಂದು ಹಲವು ಪರೋಕ್ಷ ತೊಂದರೆಗಳು ಎದುರಾಗಬಹುದು. ಜೊತೆಗೇ ದೇಹದ ಜೀವರಾಸಾಯನಿಕ ಕ್ರಿಯೆಗಳೂ ಬಾಧೆಗೊಳಗಾಗಬಹುದು. ಬದಲಿಗೆ ದೇಹಕ್ಕೆ ಪೂರ್ಣವಾದ ನಿದ್ದೆ ಪಡೆದು ಬಳಿಕ ಎದ್ದೇಳುವುದು ಉತ್ತಮ. ಆದರೆ ಇದು ನಿತ್ಯದ ಅಭ್ಯಾಸವಾಗಬಾರದು, ಅನಿವಾರ್ಯವಾಗಿ ರಾತ್ರಿ ತಡವಾದಾಗ ಮಾತ್ರ ಅನುಸರಿಸಬೇಕು.

ಒತ್ತಡವೂ ಒಳ್ಳೆಯದೇ

ಒತ್ತಡವೂ ಒಳ್ಳೆಯದೇ

ಇಂದಿನ ದಿನಗಳಲ್ಲಿ ಕೆಲಸದ ಒತ್ತಡ ಹೆಚ್ಚಿನವರ ನೆಮ್ಮದಿ ಕೆಡಿಸುತ್ತಿದೆ. ಆದರೆ ಒಂದು ಸಂಶೋಧನೆಯ ಪ್ರಕಾರ ಕೊಂಚ ಒತ್ತಡವಿದ್ದರೆ ರಕ್ತದ ಪರಿಚಲನೆ ಉತ್ತಮಗೊಳ್ಳುತ್ತದೆ, ದೇಹದ ಕ್ಷಮತೆಯನ್ನು ಹೆಚ್ಚಿಸುತ್ತದೆ ಹಾಗೂ ಎಚ್ಚರಾವಸ್ಥೆಯನ್ನು ಹೆಚ್ಚಿಸುತ್ತದೆ. ಇನ್ನೂ ಕೊಂಚ ಹೆಚ್ಚು ಅಂದರೆ ಮಧ್ಯಮ ಪ್ರಮಾಣದ ಒತ್ತಡದಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ನಮಗೆ ವಹಿಸಿದ ಕಾರ್ಯವನ್ನು ಇನ್ನಷ್ಟು ದಕ್ಷತೆಯಿಂದ ನಿರ್ವಹಿಸಲು ಸಾಧ್ಯವಾಗುತ್ತದೆ. ಸೇನೆಯಲ್ಲಿ ಇದೇ ಕಾರಣದಿಂದ ಪ್ರತಿ ಆಜ್ಞೆಯನ್ನೂ ಎತ್ತರದ ದನಿಯಲ್ಲಿ ಮತ್ತು ಇಷ್ಟೇ ಹೊತ್ತಿನೊಳಗೆ ನಡೆಸಲೇಬೇಕೆಂಬ ನಿರ್ದೇಶನದೊಡನೆ ನೀಡಲಾಗುತ್ತದೆ.ಅಂತೆಯೇ ಸೈನಿಕರು ದೈಹಿಕವಾಗಿ ಹೆಚ್ಚು ಸಮರ್ಥರಿರುತ್ತಾರೆ. ಒಂದು ಆಂಗ್ಲ ಗಾದೆಯಂತೆ ಕಷ್ಟಗಳು ಮತ್ತು ಒತ್ತಡಗಳು ನಿಮ್ಮನ್ನು ಇನ್ನಷ್ಟು ಸಬಲರನ್ನಾಗಿಸುತ್ತವೆ. ಆದರೆ ವಿಪರೀತ ಹೆಚ್ಚು ಒತ್ತಡ ಆರೋಗ್ಯವನ್ನು ಕೆಡಿಸುತ್ತದೆ.

ಕ್ಯಾಂಡಿ ತಿನ್ನುವುದು

ಕ್ಯಾಂಡಿ ತಿನ್ನುವುದು

ಅಪ್ಪಟ ಸಕ್ಕರೆಯಿಂದ ಮಾಡಲಾಗಿರುವ ಕ್ಯಾಂಡಿ ಎಲ್ಲರ ಪ್ರಿಯವಾದ ತಿನಿಸಾಗಿದೆ. ಆದರೆ ಕ್ಯಾಂಡಿ ತಿನ್ನಬೇಡ, ಡಯಾಬಿಟೀಸ್ ಬರುತ್ತದೆ ಎಂದೇ ಹೆಚ್ಚಿನವರು ಹೆದರಿಸುತ್ತಾರೆ. ವಾಸ್ತವವಾಗಿ ಸಕ್ಕರೆ ತಿನ್ನುವುದರಿಂದ ಮಧುಮೇಹ ಬರುವುದಿಲ್ಲ. ಮಧುಮೇಹವಿದ್ದವರು ಸಕ್ಕರೆ ತಿನ್ನಬಾರದು ಅಷ್ಟೇ. ಇತ್ತೀಚೆಗೆ ಸಂಶೋಧನೆಗಳ ಮೂಲಕ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಮಧುಮೇಹಕ್ಕೆ ಹೆದರಿ ಕ್ಯಾಂಡಿಗಳನ್ನು ತಿನ್ನದೇ ಬಿಟ್ಟರೆ ಇದೊಂದು ಕೊರತೆಯೆಂದು ಮನ ಪರಿಗಣಿಸಿ ಇನ್ನಾವುದೋ ಚಟಕ್ಕೆ ಬಲಿಯಾಗುತ್ತೇವೆ. ಇದರಲ್ಲಿ ಹಲವರು ದೇಹಕ್ಕೆ ಹಾನಿಕರವಾದ ಧೂಮಪಾನ, ಗುಟ್ಕಾಗಳಿಗೆ ದಾಸರಾಗಿರುವ ಮಾಹಿತಿ ದಂಗುಬಡಿಸುತ್ತದೆ. ಆದರೆ ವಾರಕ್ಕೆರಡು ಅಥವಾ ಮೂರು ಕ್ಯಾಂಡಿಗಳನ್ನು ತಿನ್ನುವುದು ಆರೋಗ್ಯಕ್ಕೆ ಉತ್ತಮ! ಇದರಿಂದ ಮನ ದುಷ್ಟಟಗಳತ್ತ ಒಲವು ತೋರುವುದು ತಪ್ಪಿದಂತೆಯೂ ಆಯಿತು, ಹೊಟ್ಟೆಯಲ್ಲಿನ ಉರಿಯನ್ನು ತಪ್ಪಿಸಿದಂತೆಯೂ ಆಯಿತು. ಅಲ್ಲದೇ ಕ್ಯಾಂಡಿಯನ್ನು ಕರಗಿಸಲು ಕೊಂಚ ಹೆಚ್ಚಿನ ಕೊಬ್ಬು ಬಳಕೆಯಾಗುವುದರಿಂದ ಸೊಂಟದ ಸುತ್ತಳತೆಯೂ ಕರಗುವುದು.

ಋಣಾತ್ಮಕ ಚಿಂತನೆ

ಋಣಾತ್ಮಕ ಚಿಂತನೆ

ಯಾವಾಗಲೂ ಧನಾತ್ಮಕರಾಗಿಯೇ ಚಿಂತಿಸಿ ಎಂದು ಎಲ್ಲಾ ಮೇಧಾವಿಗಳು ಹೇಳುತ್ತಾರೆ. ಇದು ನೂರಕ್ಕೆ ನೂರು ಸತ್ಯವಾದರೂ ಕೆಲವು ಋಣಾತ್ಮಕ ಚಿಂತನೆಗಳೂ ಇರಬೇಕು ಎಂದು ಸಂಶೋಧನೆಯೊಂದು ತಿಳಿಸುತ್ತದೆ. ಜಗತ್ತಿನಲ್ಲಿ ಒಳ್ಳೆಯ ಮತ್ತು ಕೆಟ್ಟ ವಿಷಯಗಳು ಜೊತೆಜೊತೆಯಾಗಿ ಇರುವಂತೆ ಚಿಂತನೆಗಳೂ ಧನಾತ್ಮಕ ಮತ್ತು ಋಣಾತ್ಮಕವಾಗಿಯೂ ಇರಬೇಕು. ಆದರೆ ಇದನ್ನು ತುಲನೆ ಮಾಡಿ ಸರಿಯಾದುದನ್ನು ಆಯ್ಕೆ ಮಾಡಿಕೊಳ್ಳುವುದು ಮಾತ್ರ ವಿವೇಕವಾಗಿದೆ. ಉದಾಹರಣೆಗೆ ವೇಗವಾಗಿ ವಾಹನಗಳು ಬರುತ್ತಿರುವ ರಸ್ತೆ ದಾಟಲು ಇರುವ ಪಾದಾಚಾರಿ ಪಟ್ಟೆಗಳು ಸುಮಾರು ಅರ್ಧ ಕಿ.ಮೀ ಇದೆ. ಆದರೆ ಯಾವುದೋ ಒಂದು ವಾಹನ ಕೊಂಚ ನಿಧಾನವಾಗಿ ಬರುತ್ತಿದ್ದಾಗ ಲಭಿಸುವ ಕೆಲವು ಕ್ಷಣಗಳನ್ನು ಉಪಯೋಗಿಸಿ ರಸ್ತೆದಾಟಿಬಿಟ್ಟರೆ ಎಂಬ ಚಿಂತನೆ ಧನಾತ್ಮಕವಾಗಿದ್ದರೂ ಅಪಾಯಕಾರಿಯಾಗಿದೆ. ಬೇಡ, ಅರ್ಧ ಕಿ.ಮೀ ನಡೆದರೂ ಚಿಂತೆ ಇಲ್ಲ, ಸುರಕ್ಷಿತರಾಗಿಯೇ ಮನೆ ಸೇರೋಣ ಎಂಬ ಚಿಂತನೆ ಋಣಾತ್ಮಕವಾಗಿದ್ದರೂ ಸುರಕ್ಷಿತವಾಗಿದೆ.

ಚ್ಯೂಯಿಂಗ್ ಗಮ್ ತಿನ್ನುವುದು

ಚ್ಯೂಯಿಂಗ್ ಗಮ್ ತಿನ್ನುವುದು

ಮದುವೆ ಎಂದರೆ ಚ್ಯೂಯಿಂಗ್ ಗಮ್ ಇದ್ದಂತೆ ಮೊದಮೊದಲು ಸಿಹಿಯಾಗಿದ್ದುದು ಬಳಿಕ ಸಪ್ಪೆಯಾಗಿ ಉಗಿಯಲೂ ಆಗದೇ ನುಂಗಲೂ ಆಗದೇ ಇರುವ ಮುದ್ದೆ ಎಂದು ಕುಹಕವೊಂದು ತಿಳಿಸುತ್ತದೆ. ಆದರೆ ಚ್ಯೂಯಿಂಗ್ ಗಮ್ ತಿನ್ನುವುದರಿಂದ ಮೆದುಳಿನ ಏಕಾಗ್ರತೆ ಹೆಚ್ಚುತ್ತದೆ ಹಾಗೂ ಇದರಿಂದ ನಮ್ಮ ನಿತ್ಯದ ಕೆಲಸಗಳನ್ನು ಇನ್ನಷ್ಟು ಸಕ್ಷಮವಾಗಿ ಪೂರ್ಣಗೊಳಿಸಬಹುದು ಎಂದು ಸಂಶೋಧನೆಯೊಂದು ತಿಳಿಸುತ್ತದೆ. ಕ್ರಿಕೆಟ್ ಆಟಗಾರರಲ್ಲಿ ಹಲವರು ತಮ್ಮ ಏಕಾಗ್ರತೆಯನ್ನು ಹೆಚ್ಚಿಸಲು ಚ್ಯೂಯಿಂಗ್ ಗಮ್ ಮೆಲ್ಲುತ್ತಿರುವುದನ್ನು ನೀವು ಗಮನಿಸಿರಬಹುದು. ಏಕಾಗ್ರತೆ ಹೆಚ್ಚುವುದರಿಂದ ಒತ್ತಡ ಕಡಿಮೆಯಾಗಿ ಹೆದರಿಕೆಯಾಗುವುದು ಕಡಿಮೆಯಾಗುತ್ತದೆ. ವೇಗದ ಬೌಲರುಗಳನ್ನು ಎದುರಿಸುವ, ಕ್ಲಿಷ್ಟಕರವಾದ ಗಣಿತಸೂತ್ರವನ್ನು ಬಿಡಿಸಲು ಅಗತ್ಯವಾದ ಏಕಾಗ್ರತೆ ಲಭ್ಯವಾಗುತ್ತದೆ. ಆದರೆ ಚ್ಯೂಯಿಂಗ್ ಗಮ್ ಅಗಿದೂ ಅಗಿದೂ ಬೇಜಾರಾದ ಬಳಿಕ ಬಾಯಲ್ಲಿದ್ದ ತುಂಡನ್ನು ಎಲ್ಲೆಂದರಲ್ಲಿ ಅಂಟಿಸುವುದು ಮಾತ್ರ ಅತ್ಯಂತ ಕೆಟ್ಟ ಅಭ್ಯಾಸವಾಗಿದೆ. ಇದನ್ನು ಒಂದು ಕಾಗದ ಅಥವಾ ಚ್ಯೂಯಿಂಗ್ ಗಮ್ ನದ್ದೇ ಕವರ್ ಕಾಗದದೊಳಗೆ ಪೊಟ್ಟಣಕಟ್ಟಿ ವಿಸರ್ಜಿಸುವುದು ಉತ್ತಮ ಅಭ್ಯಾಸವಾಗಿದೆ.

English summary

Bad Habits That Are Good For Health

Habits are a part of human personality. People have both mixed, bad as well as good habits. Habits are addictive and are difficult to quit. Your habits somehow decide your nature and health as well. Following are some of the bad habits that prove to be good for your health.
X
Desktop Bottom Promotion