For Quick Alerts
ALLOW NOTIFICATIONS  
For Daily Alerts

ಔಷಧಿಯಂತೆ ಕಾರ್ಯನಿರ್ವಹಿಸುವ ಅಡುಗೆಮನೆ ಸಾಮಾಗ್ರಿಗಳು

By Super
|

ನಮಗೆ ಆರೋಗ್ಯದಲ್ಲಿ ಸ್ವಲ್ಪವೂ ಏರುಪೇರಾದರೆ ವೈದ್ಯರ ಬಳಿ ಓಡಿ ಔಷಧಿಗಳನ್ನು ತೆಗೆದುಕೊಳ್ಳುತ್ತೇವೆ. ಆದರೆ ಈ ಔಷಧಿಗಳಲ್ಲಿರುವ ಮೂಲವಸ್ತುಗಳು ನಮ್ಮ ಅಡುಗೆಮನೆಗಳಲ್ಲಿರುವ ಸಾಮಾನ್ಯ ಆಹಾರವಸ್ತುಗಳಲ್ಲಿಯೇ ಇವೆ ಎಂದರೆ ನಂಬುತ್ತೀರಾ? ಹೌದು, ಸಾಮಾನ್ಯವಾಗಿ ಪ್ರತಿಯೊಂದೂ ಅಡುಗೆಮನೆಯಲ್ಲಿರುವ ಸಾಮಾನ್ಯ ವಸ್ತುಗಳು ಬೆಲೆಕೊಟ್ಟು ಕೊಳ್ಳುವ ಔಷಧಿಗಳಂತೆಯೇ ಕೆಲಸ ಮಾಡುತ್ತವೆ, ಕೆಲವೊಮ್ಮೆ ಇನ್ನೂ ಚೆನ್ನಾಗಿ. ಉದಾಹರಣೆಗೆ ಕತ್ತಿ ತಾಗಿ ಬೆರಳು ಕೊಯ್ದುಕೊಂಡಾಗ ನಮ್ಮ ಹಿರಿಯರು ಮೊದಲು ಮಾಡುವ ಕೆಲಸವೆಂದರೆ ಗಾಯಕ್ಕೆ ಅರಿಶಿನದ ಪುಡಿ ಅಥವಾ ಕಾಫಿಪುಡಿಯನ್ನು ಸುರಿದು ಒಂದು ಬಟ್ಟೆಯ ಪಟ್ಟಿ ಕಟ್ಟಿಬಿಡುವುದು.

ಇದು ಗಾಯದಲ್ಲಿ ನಂಜು ಉಂಟಾಗುವುದನ್ನು ತಡೆಯುತ್ತದೆ. ಇಂದು ಲಭ್ಯವಿರುವ ಗಾಯಕ್ಕೆ ಹಚ್ಚುವ ಮುಲಾಮು, ಪಟ್ಟಿಗಳಲ್ಲಿ ಅರಿಶಿನದ್ದೇ ಸಾಮಾಗ್ರಿಗಳಿವೆ. ಅಂದರೆ ಅರಿಶಿನವೂ ಔಷಧದಂತೆ ಕೆಲಸ ನಿರ್ವಹಿಸುತ್ತದೆ ಎಂದಾಯ್ತು! ಇಂತಹ ಹತ್ತು ಔಷಧೀಯ ಗುಣವುಳ್ಳ ಹತ್ತು ಪ್ರಮುಖ ಆಹಾರಗಳನ್ನು ಅವಲೋಕಿಸೋಣ

ಅರಿಶಿನದ ಪುಡಿ

ಅರಿಶಿನದ ಪುಡಿ

ಸಾಧಾರಣವಾಗಿ ಅರಿಶಿನಪುಡಿಯನ್ನು ನಾವು ಹೆಚ್ಚಿನ ಎಲ್ಲಾ ಅಡುಗೆಗಳಲ್ಲಿ ಬಳಸುತ್ತೇವೆ. ರುಚಿಯನ್ನು ಹೆಚ್ಚಿಸುವ ಅಪ್ಪಟ ಹೊಂಬಣ್ಣದ ಈ ಪುಡಿ ವಾಸ್ತವವಾಗಿ ನೈಸರ್ಗಿಕ ನಂಜುನಿರೋಧಕವಾಗಿದೆ. ಜೊತೆಗೆ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ, ಉರಿಯನ್ನು ಶಮನಗೊಳಿಸುವ ಅಂಶಗಳನ್ನು ಹೊಂದಿದೆ. ಅಲ್ಲದೇ ಉತ್ತಮ ಆಂಟಿ ಆಕ್ಸಿಡೆಂಟುಗಳನ್ನೂ ಹೊಂದಿದೆ. ಈ ಎಲ್ಲಾ ಗುಣಗಳು ಹಲವು ಕಾಯಿಲೆಗಳಿಗೆ ಅರಿಶಿನವನ್ನು ಔಷಧಿಯಾಗಿ ಉಪಯೋಗಿಸಲು ನೆರವಾಗುತ್ತವೆ. ಚಿಕ್ಕ ಪುಟ್ಟ ಗಾಯಗಳಿಂದ ಹಿಡಿದು ಸುಟ್ಟ ಗಾಯ (ಅರಿಶಿನಪುಡಿಯನ್ನು ನೀರಿನಲ್ಲಿ ಮಿಶ್ರಣ ಮಾಡಿ ಲೇಪನ ಹಚ್ಚಬೇಕು), ಜಜ್ಜಿದ ಗಾಯ, ಮೊಡವೆ, ಚರ್ಮದ ತುರಿಕೆ, ಬೆರಳು ಸಂದುಗಳಲ್ಲಿ ಸೋಂಕು, ಹೊಟ್ಟೆಯ ವಿವಿಧ ಸೋಂಕುಗಳನ್ನು ನಿವಾರಿಸಲು ನೆರವಾಗುತ್ತದೆ. ಬಿಸಿ ಹಾಲಿನೊಂದಿಗೆ ಬೆರೆಸಿ ಕುಡಿದಾಗ ಕೆಮ್ಮು, ಶೀತ, ನೆಗಡಿ, ಸಂಧಿವಾತ, ಅಲ್ಲದೇ ಮಹಿಳೆಯರಿಗೆ ಮಾಸಿಕ ದಿನಗಳಲ್ಲಿ ಹೊಟ್ಟೆನೋವನ್ನು ತಡೆಯಲೂ ನೆರವಾಗುತ್ತದೆ.

ಹಸಿಶುಂಠಿ

ಹಸಿಶುಂಠಿ

ಹಸಿಶುಂಠಿಯು ಒಂದು ನೈಸರ್ಗಿಕ ಉರಿಯೂತ ನಿವಾರಕ(anti-inflammatory), ಸೆಳೆತನಿವಾರಕ (antispasmodic) ಬೂಸುನಿವಾರಕ (antifungal), ನಂಜುನಿವಾರಕ(antiseptic), ಬ್ಯಾಕ್ಟೀರಿಯಾ ನಿವಾರಕ (antibacterial), ಮತ್ತು ವೈರಸ್ ನಿವಾರಕ (antiviral) ಗುಣಗಳನ್ನು ಹೊಂದಿದೆ. ಜೊತೆಗೇ ಇದೊಂದು ಪ್ರಬಲ ನೋವು ನಿವಾರಕವಾಗಿದ್ದು ಹಲವು ರೀತಿಯ ನೋವುಗಳನ್ನು ಶಮನಮಾಡಬಲ್ಲದು. ಇದರಲ್ಲಿ ಉತ್ತಮ ಪ್ರಮಾಣದ ಪೊಟ್ಯಾಶಿಯಂ, ಗಂಧಕ, ಸತು, ವಿಟಮಿನ್ ಎ, ಸಿ, ಇ ಮತ್ತು ಬಿ ಕಾಂಪ್ಲೆಕ್ಸ್ ಅಂಶಗಳಿವೆ. ಈ ಎಲ್ಲಾ ಅಂಶಗಳು ಪ್ರಮುಖವಾಗಿ ಜಠರ ಮತ್ತು ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತವೆ. ಶುಂಠಿಯನ್ನು ಅಜೀರ್ಣತೆ, ಹುಳಿತೇಗು, ಸುಸ್ತು, ತಲೆತಿರುಗುವಿಕೆ, ಪ್ರಯಾಣದಲ್ಲಿ ವಾಕರಿಕೆ ಮೊದಲಾದ ತೊಂದರೆಗಳಿಗೆ ಔಷಧಿಯಾಗಿ ಬಳಸಬಹುದು. ಮೈ ಕೈ ನೋವು, ಜ್ವರ, ಶೀತ, ಕೆಮ್ಮು, ಉಸಿರಾಟದ ತೊಂದರೆಗಳಿಗೆ ಬಳಸಬಹುದು. ಇತ್ತೀಚಿನ ಸಂಶೋಧನೆಗಳ ಪ್ರಕಾರ ಶುಂಠಿ ಕ್ಯಾನ್ಸರ್ ಕಾರಕ ಜೀವಕೋಶಗಳ ವಿರುದ್ದ ಸೆಣೆಸುವುದರಿಂದ ವಿವಿಧ ಕ್ಯಾನ್ಸರ್ ಕಾಯಿಲೆಗಳಿಗೆ ರಕ್ಷಣೆಯನ್ನು ಪಡೆಯಬಹುದು.

ದಾಲ್ಚಿನ್ನಿ

ದಾಲ್ಚಿನ್ನಿ

ಮೊಗ್ಗು, ಎಲೆ ಮತ್ತು ಚೆಕ್ಕೆಯ ರೂಪದಲ್ಲಿ ಲಭ್ಯವಿರುವ ದಾಲ್ಚಿನ್ನಿ ನಂಜುನಿವಾರಕ, ಉರಿಯೂತ ನಿವಾರಕ, ಅಪಾನವಾಯು ನಿವಾರಕ (carminative and antiflatulent)ವಾಗಿದೆ. ಇದರಲ್ಲಿ ಉತ್ತಮ ಪ್ರಮಾಣದಲ್ಲಿ ಪೊಟ್ಯಾಶಿಯಂ, ಕ್ಯಾಲ್ಸಿಯಂ, ಮ್ಯಾಂಗನೀಸ್, ಕಬ್ಬಿಣ, ಸತು ಮತ್ತು ತಾಮ್ರದಂತಹ ಲೋಹವಸ್ತುಗಳಿವೆ. ಜೊತೆಗೆ ಉತ್ತಮ ಪ್ರಮಾಣದಲ್ಲಿ ವಿಟಮಿನ್ ಎ ನಿಯಾಸಿನ್ ಮತ್ತು ಪೈರಿಡಾಕ್ಸಿನ್ ಎಂಬ ಪೋಷಕಾಂಶಗಳಿವೆ. ದಾಲ್ಚಿನ್ನಿಯನ್ನು ಶೀತ, ನೆಗಡಿ, ಅಪಾನವಾಯು ಪ್ರಕೋಪ, ಅಜೀರ್ಣತೆ, ಎದೆಯಲ್ಲಿ ಉರಿ, ವಾಕರಿಕೆ, ಅತಿಸಾರ, ಸಂಧಿವಾತ ಮತ್ತು ಋತುಚಕ್ರದ ಅವಧಿಯಲ್ಲಿ ನೋವು ಕಾಣಿಸಿಕೊಂಡಾಗ ಔಷಧಿಯಾಗಿ ಬಳಸಲಾಗುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ನೈಸರ್ಗಿಕವಾಗಿ ಸ್ವೇದಕಾರಿ (diaphoretic), ಮೂತ್ರವರ್ಧಕ (diuretic), ಕಫಹಾರಿ (expectorant), ಜೀವಿರೋಧಿ(antibacterial), ಬೂಸು ನಿವಾರಕ (antifungal), ವೈರಸ್ಸುಗಳ ವಿರುದ್ಧ ಹೋರಾಡುವ (antiviral) ಮತ್ತು ನಂಜುನಿರೋಧಕ (antiseptic) ಗುಣಗಳಿವೆ. ಈ ಎಲ್ಲಾ ಗುಣಗಳ ಕಾರಣ ಇದನ್ನು ಮಹತ್ವದ ಆಹಾರವೆಂದು ಆಯುರ್ವೇದದಲ್ಲಿ ತಿಳಿಸಲಾಗಿದೆ. ಅಲ್ಲದೇ ಉತ್ತಮ ಪ್ರಮಾಣದಲ್ಲಿರುವ ಪೊಟ್ಯಾಶಿಯಂ, ಕ್ಯಾಲ್ಸಿಯಂ, ಸತು ಹಾಗೂ ಇನ್ನಿತರ ಪೋಷಕಾಂಶಗಳು ದೇಹವನ್ನು ವಿವಿಧ ಕಾಯಿಲೆಗಳ ವಿರುದ್ದ ಸೆಣಸಲು ನೆರವಾಗುತ್ತವೆ. ಬೆಳ್ಳುಳ್ಳಿಯನ್ನು ಕೆಮ್ಮು, ಶ್ವಾಸಕೋಶದ ಸೋಂಕು, ಗಂಟಲುಬೇನೆ, ಒರಟಾದ ಗಂಟಲು, ಸೈನಸ್ ತೊಂದರೆಗಳು, ಕಿವಿಯಲ್ಲಿ ಸೋಂಕು, ಅಸ್ತಮಾ, ಅಜೀರ್ಣತೆ, ಹೊಟ್ಟೆಯಲ್ಲಿ ನೋವು, ಉದರಶೂಲೆ (colic), ಹಲ್ಲುನೋವು, ಕೀಟಗಳು ಕಡಿದ ಸ್ಥಳದಲ್ಲಿ ನೋವು ನಿವಾರಕವಾಗಿ, ಹುಳಕಡ್ಡಿ ಮೊದಲಾದ ಚರ್ಮವ್ಯಾಧಿಗಳಿಗೂ ಚಿಕಿತ್ಸೆ ನೀಡಲು ಬಳಸಬಹುದು.

ಲಿಂಬೆಹಣ್ಣು

ಲಿಂಬೆಹಣ್ಣು

ಬೀಜ ಒಂದಿಲ್ಲದಿದ್ದರೆ ಲಿಂಬೆಹಣ್ಣು ಸಂಜೀವಿನಿಯೇ ಆಗುತ್ತಿತ್ತು ಎಂದು ಆಯುರ್ವೇದ ಪಂಡಿತರು ಅಭಿಪ್ರಾಯ ಪಡುತ್ತಾರೆ. ಏಕೆಂದರೆ ಲಿಂಬೆರಸದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳಿವೆ. ಪ್ರಮುಖವಾಗಿ ವಿಟಮಿನ್ ಸಿ ಮತ್ತು ಫೋಲೇಟ್ ಹೆಚ್ಚಿನ ಪ್ರಮಾಣದಲ್ಲಿವೆ. ಲಿಂಬೆರಸವನ್ನು ತಲೆನೋವು, ಗಂಟಲಿನ ಸೋಂಕು, ಕಫ, ಅಜೀರ್ಣ, ಮಲಬದ್ದತೆ, ಹಲ್ಲಿನ ತೊಂದರೆಗಳು, ತಲೆಹೊಟ್ಟು, ಕೀಟಗಳ ಕಡಿತ ಶಮನಮಾಡಲು, ಸಂಧಿವಾತ, ಒಳಾಂಗಣ ರಕ್ತಸ್ರಾವ ಮೊದಲಾದ ತೊಂದರೆಗಳಿಗೆ ಔಷಧಿಯಾಗಿ ಬಳಸಲ್ಪಡುತ್ತದೆ.

ಜೇನುತುಪ್ಪ

ಜೇನುತುಪ್ಪ

ಎಂದೂ ಕೆಡದ ಅಹಾರ ಎಂದು ಪವಿತ್ರ ಕುರಾನ್ ನಲ್ಲಿ ಬಣ್ಣಿಸಲಾಗಿರುವ ಜೇನುತುಪ್ಪ ಮಧುಮೇಹಿಗಳ ಹೊರತು ಇತರರಿಗೆ ಉತ್ತಮ ಔಷಧಿಯಾಗಿದೆ. ಜೇನು ನೈಸರ್ಗಿಕವಾದ ವೈರಸ್ ನಿವಾರಕ (antiviral), ಬೂಸುನಿವಾರಕ (antifungal), ಸೋಂಕುನಿವಾರಕ (antiseptic) ಆಗಿದೆ. ಇದರಲ್ಲಿ ಸಕ್ಕರೆಯ ಸಹಿತ ಹಲವು ವಿಟಮಿನ್ನುಗಳು ಮತ್ತು ಖನಿಜಗಳಾದ ಮೆಗ್ನೀಶಿಯಂ, ಕ್ಯಾಲ್ಸಿಯಂ, ಸೋಡಿಯಂ, ತಾಮ್ರ, ಕಬ್ಬಿಣ, ಮ್ಯಾಂಗನೀಸ್, ಗಂಧಕ, ಸತು ಮತ್ತು ಫಾಸ್ಪೇಟ್ ಗಳಿವೆ. ಜೇನುತುಪ್ಪವನ್ನು ಕೆಮ್ಮು, ಗಂಟಲ ಕೆರೆತ, ದನಿಪೆಟ್ಟಿಗೆಯ ಉರಿಯೂತ(laryngitis), ಬಾಯಿಹುಣ್ಣು (canker sore), ಚರ್ಮದ ತುರಿಕೆ, ಬೆಳಗ್ಗಿನ ಆಯಾಸ ಮತ್ತು ಹೊಟ್ಟೆಯಲ್ಲಿನ ಹುಣ್ಣು (ಅಲ್ಸರ್) ಮೊದಲಾದ ತೊಂದರೆಗಳಿಗೆ ಔಷಧಿಯಾಗಿ ಉಪಯೋಗಿಸಲ್ಪಡುತ್ತದೆ.

ಈರುಳ್ಳಿ

ಈರುಳ್ಳಿ

ಈರುಳ್ಳಿ ಸಹಾ ನೈಸರ್ಗಿಕವಾಗಿ ಉರಿಯೂತ ನಿವಾರಕ(anti-inflammatory), ನಂಜುನಿವಾರಕ(antiseptic), ಪ್ರತಿಜೀವಕ (antibiotic), ಸೂಕ್ಷ್ಮಜೀವಿ ಪ್ರತಿರೋಧಕ (antimicrobial), ಅಪಾನವಾಯು ನಿರೋಧಕ (carminative) ಗುಣಗಳನ್ನುಹೊಂದಿದೆ. ಇದರಲ್ಲಿ ಪ್ರಮುಖವಾಗಿ ವಿಟಮಿನ್ ಸಿ, ಬಿ೧, ಬಿ೬ ಮತ್ತು ಕೆ ಲಭ್ಯವಿದೆ. ಜೊತೆಯಲ್ಲಿ ಇತರ ಖನಿಜಗಳಾದ ಬಯೋಟಿನ್, ಕ್ರೋಮಿಯಂ, ಕ್ಯಾಲ್ಸಿಯಂ, ಫೋಲಿಕ್ ಆಮ್ಲ ಮತ್ತು ಕರಗುವ ನಾರು ಇದೆ. ನೀರುಳ್ಳಿಯನ್ನು ದಿನನಿತ್ಯದ ತೊಂದರೆಗಳಾದ ಶೀತ, ಕೆಮ್ಮು, ಅಸ್ತಮಾ, ನ್ಯುಮೋನಿಯಾ ಜ್ವರ, ಏರಿಳಿತದ ಜ್ವರ (hay fever) ಗಳಿಗೆ ಔಷಧಿಯಾಗಿ ಬಳಸಬಹುದು. ಜೊತೆಗೇ ಜಠರದ ಸೋಂಕು, ವಾಕರಿಕೆ ಮತ್ತು ಅತಿಸಾರಕ್ಕೂ ನೀರುಳ್ಳಿ ಉತ್ತಮವಾದ ಪರಿಹಾರ ನೀಡುತ್ತದೆ.

ಲವಂಗ

ಲವಂಗ

ಹಲ್ಲುನೋವಾದರೆ ಹೆಚ್ಚಿನವರು ಲವಂಗವನ್ನು ನೋವಿರುವ ಜಾಗದಲ್ಲಿಟ್ಟುಕೊಳ್ಳಲು ಸಲಹೆ ನೀಡುತ್ತಾರೆ. ಏಕೆಂದರೆ ಲವಂಗದಲ್ಲಿ ಈ ನೋವಿಗೆ ಕಾರಣವಾದ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಗುಣವಿದೆ. ಲವಂಗದಲ್ಲಿ ಉತ್ಕರ್ಷಣ ನಿರೋಧಕ (antioxidant), ನಂಜುನಿವಾರಕ(antiseptic), ಉರಿಯೂತ ನಿವಾರಕ(anti-inflammatory), ಅಪಾನವಾಯು ನಿರೋಧಕ (carminative) ಗುಣಗಳಿವೆ. ಲವಂಗವನ್ನು ಹಲ್ಲುನೋವು, ಬಾಯಿಹುಣ್ಣು, ಒಸಡುಗಳಲ್ಲಿ ಸೋಂಕು, ಮೂಳೆಸಂಧಿಗಳಲ್ಲಿ ನೋವು, ಸ್ನಾಯುಸೆಳೆತ, ಮೈ ಕೈ ನೋವು, ಅಜೀರ್ಣ, ವಾಕರಿಕೆ, ವಾಂತಿ, ಹೊಟ್ಟೆಯುರಿ, ಅಪಾನವಾಯು ಪ್ರಕೋಪ ಮತ್ತು ಕಾಲರಾ ಜ್ವರ ಗಳಿಗೆ ಔಷಧಿಯಾಗಿ ಬಳಸಬಹುದು.

ಏಲಕ್ಕಿ

ಏಲಕ್ಕಿ

ಮಸಾಲೆ ಪದಾರ್ಥಗಳ ರಾಣಿ ಎಂದೇ ಪ್ರಸಿದ್ಧಿ ಪಡೆದಿರುವ ಏಲಕ್ಕಿ ಅಡುಗೆಯನ್ನು ಘಂ ಎನ್ನಿಸುವುದರ ಜೊತೆಗೆ ಆರೋಗ್ಯವನ್ನೂ ಉತ್ತಮಗೊಳಿಸುತ್ತದೆ. ಏಲಕ್ಕಿಯಲ್ಲಿ ಅಪಾನವಾಯು ನಿರೋಧಕ (carminative), ಉತ್ಕರ್ಷಣ ನಿರೋಧಕ (antioxidant), ನಂಜುನಿವಾರಕ(antiseptic), ಸ್ನಾಯು ಸೆಳೆತ ನಿರೋಧಕ (antispasmodic), ಮೂತ್ರವರ್ಧಕ (diuretic), ಮತ್ತು ಕಫಹಾರಿ (expectorant) ಗುಣಗಳಿಗೆ. ಏಲಕ್ಕಿಯಲ್ಲಿ ಖನಿಜಗಳಾದ ಪೊಟ್ಯಾಶಿಯಂ, ಕ್ಯಾಲ್ಸಿಯಂ, ತಾಮ್ರ, ಕಬ್ಬಿಣ ಮತ್ತು ಮೆಗ್ನೀಶಿಯಂಗಳಿವೆ. ಏಲಕ್ಕಿಯನ್ನು ಬಾಯಿಯಲ್ಲಿ ದುರ್ವಾಸನೆ ಮತ್ತು ಬಾಯಿಯ ಹುಣ್ಣುಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ.

ಜೀರಿಗೆ

ಜೀರಿಗೆ

ಜೀರಿಗೆ ಕಾಳುಗಳು ಉರಿಯೂತ ನಿವಾರಕ(anti-inflammatory), ಅಪಾನವಾಯು ನಿರೋಧಕ (carminative) ಮತ್ತು ಉತ್ಕರ್ಷಣ ನಿರೋಧಕ (antioxidant) ಗುಣಗಳನ್ನು ಹೊಂದಿವೆ. ಈ ಪುಟ್ಟ ಕಾಳುಗಳಲ್ಲಿ ಆಗಾಧ ಪ್ರಮಾಣದಲ್ಲಿ ಕರಗುವ ನಾರು ಇರುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ಇದೇ ಕಾರಣದಿಂದಾಗಿ ಹೆಚ್ಚಿನ ದಕ್ಷಿಣ ಭಾರತೀಯ ಹೋಟೆಲುಗಳಲ್ಲಿ ಊಟದ ಬಳಿಕ ಕುಡಿಯಲು ಜೀರಿಗೆ ಹಾಕಿ ಕುದಿಸಿದ ನೀರನ್ನೇ ಕೊಡುತ್ತಾರೆ. ಜೀರಿಗೆಯಲ್ಲಿ ಖನಿಜಗಳಾದ ಕಬ್ಬಿಣ, ತಾಮ್ರ, ಕ್ಯಾಲ್ಸಿಯಂ, ಪೊಟ್ಯಾಶಿಯಂ, ಮ್ಯಾಂಗನೀಸ್, ಸೆಲೆನಿಯಂ ಮತ್ತು ಸತುಗಳಿವೆ. ಜೀರಿಗೆಯನ್ನು ಅಜೀರ್ಣ, ಅಪಾನವಾಯುಪ್ರಕೋಪ, ಅತಿಸಾರ, ಹುಳಿತೇಗು, ಹೊಟ್ಟೆನೋವು, ಬೆಳಗ್ಗಿನ ಆಯಾಸ, ಮೂತ್ರಪಿಂಡಗಳ ಉದರಶೂಲೆ (renal colic), ಶೀತ, ಕೆಮ್ಮು, ಜ್ವರ, ಗಂಟಲಿನ ಬೇನೆ ಮತ್ತು ನಿದ್ದೆಯಿಲ್ಲದಿರುವಿಕೆ ಮೊದಲಾದ ತೊಂದರೆಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ.

English summary

10 Kitchen Ingredients That Work Like Medicines

The use of natural ingredients to treat health problems is becoming more and more common with every passing year, and for good reason. Many common kitchen ingredients provide impressive health benefits. Here are the top 10 kitchen ingredients that also work like medicines.
X
Desktop Bottom Promotion