For Quick Alerts
ALLOW NOTIFICATIONS  
For Daily Alerts

ತೂಕ ಇಳಿಸಿಕೊಳ್ಳಲು ಆಯುರ್ವೇದ ಸೂಚಿಸುವ ಸುಲಭ ವಿಧಾನಗಳು

By Arshad Hussain
|

ಬಹಳ ಹಿಂದಿನ ಕಾಲದಿಂದಲೂ ಭಾರತೀಯರು ಉತ್ತಮ ಆರೋಗ್ಯವನ್ನು ಹೊಂದುತ್ತಾ ಬಂದಿದ್ದು ಇದರ ಹಿಂದೆ ಆಯುರ್ವೇದದ ಪಾಲನೆ ಖಚಿತವಾದ ಸಂಗತಿಯಾಗಿದೆ. ಸ್ಥೂಲಕಾಯ ಹೊಂದಿರುವುದು ಆಯುರ್ವೇದದ ಪ್ರಕಾರ ಒಂದು ವ್ಯಾಧಿಯಾಗಿದೆ. ಸುಲಭವಾದ ಹಾಗೂ ಆರೋಗ್ಯಕರ ಆಹಾರಗಳನ್ನು ಸೂಚಿಸುವ ಮೂಲಕ ಸದೃಢ ಶರೀರ ಮತ್ತು ಹೆಚ್ಚಿನ ಆಯಸ್ಸು ನೀಡುವ ಆಯುರ್ವೇದ "ದೀರ್ಘಾಯಸ್ಸಿನ ವಿಜ್ಞಾನ" ವಾಗಿದೆ.

ಆಯುರ್ವೇದದಲ್ಲಿ ಥಟ್ಟನೆ ಪವಾಡ ಮಾಡಿ ಬಿಡುವ ಯಾವುದೇ ಚಮತ್ಕಾರವಿಲ್ಲ. ಅದು ಸೂಚಿಸುವುದೇನಿದ್ದರೂ ನಿಸರ್ಗದ ನಿಯಮಗಳಿಗನುಸಾರವಾದ ಚಿಕಿತ್ಸೆಯನ್ನು. ಈ ಚಿಕಿತ್ಸೆಗೆ ಕೊಂಚ ದೀರ್ಘ ಕಾಲ ಹಿಡಿಯಬಹುದು. ಆಯುರ್ವೇದ ಸೂಚಿಸಿದ ಈ ಕೆಳಗಿನ ನಿಯಮಗಳನ್ನು ಪಾಲಿಸುವ ಮೂಲಕ ಸ್ಥೂಲಕಾಯದ ಮೇಲೆ ಹತೋಟಿ ಸಾಧಿಸಿ ಉತ್ತಮ ಆರೋಗ್ಯ ಪಡೆಯಬಹುದು.

ಊಟದಲ್ಲಿ ಸರಳತೆ: ನಮ್ಮ ಮನಸ್ಸನ್ನು ಸರಳ ಆಹಾರಗಳತ್ತ ಒಲಿಸಿಕೊಳ್ಳುವುದು ಆಯುರ್ವೇದ ಸೂಚಿಸುವ ಮೊದಲ ಸೂಚನೆ. ಸರಳ ಊಟವೆಂದರೆ ಕನಿಷ್ಟ ಎಣ್ಣೆ ಬಳಸಿದ, ತಾಜಾ ತರಕಾರಿ ಮತ್ತು ಧಾನ್ಯಗಳನ್ನು ಬೇಯಿಸಿ ತಯಾರಿಸಿದ ಹಾಗೂ ಸುಲಭವಾಗಿ ಜೀರ್ಣವಾಗುವಂತಹ ಆಹಾರಗಳನ್ನು ಕ್ಲುಪ್ತ ಸಮಯಕ್ಕೆ ಸೇವಿಸುವುದು. ಆದರೆ ಬೇರೆ ಆಹಾರಗಳನ್ನು ಕಂಡ ಕಣ್ಣು ತಿನ್ನುವ ಆಸೆಯನ್ನು ಪ್ರಲೋಭಿಸುವುದರಿಂದ ಈ ಪ್ರಲೋಭನೆಯನ್ನು ಹತ್ತಿಕ್ಕುವಲ್ಲಿ ಮಾನಸಿಕ ಧೃಢತೆ ಬಲುಮುಖ್ಯವಾಗಿದೆ.

ಇಂತಹ ಆಹಾರಗಳನ್ನು ಕಂಡಕೂಡಲೇ ಮನಸ್ಸಿಗೆ "ಈ ಆಹಾರ ನನಗಲ್ಲ" ಎಂದು ಸ್ಪಷ್ಟವಾಗಿ ಮನವರಿಕೆ ಮಾಡಿಸಿಕೊಡುವುದು ಮುಖ್ಯ ಅಂಶವಾಗಿದೆ. ಅಕ್ಕಿಯ ಗಂಜಿ, ಹಬೆಯಲ್ಲಿ ಬೇಯಿಸಿದ ತರಕಾರಿಗಳು, ತರಕಾರಿಗಳ ಸೂಪ್ ಗಳು, ಗೋಧಿಯಿಂದ ತಯಾರಿಸಿದ ಖಾದ್ಯಗಳು ಮೊದಲಾದವು ನಮ್ಮ ಆಹಾರದಲ್ಲಿ ಪ್ರಮುಖ ಪಾತ್ರ ವಹಿಸಬೇಕು.

ನಿಮಗೆ ತೂಕ ಇಳಿಸಲು ಸಹಕಾರಿ ಈ 11 ವಿಧಾನಗಳು!

ಲಘು ಆಹಾರ

ಲಘು ಆಹಾರ

ಇಂದಿನ ದಿನಗಳಲ್ಲಿ ನಮ್ಮ ಕೈಗೆಟಕುವಂತೆ ಹಲವು ಸಿದ್ಧ ಆಹಾರಗಳು ಲಭ್ಯವಿವೆ. ಆದರೆ ಹೆಚ್ಚಿನವು ಎಣ್ಣೆಯಲ್ಲಿ ಕರಿದಿರುವ, ಹುರಿದಿರುವ, ಹೆಚ್ಚಿನ ಕ್ಯಾಲೋರಿಗಳುಳ್ಳ ಆಹಾರಗಳೇ ಆಗಿವೆ. ಇವುಗಳನ್ನು ಬಯಸುವ ಮನಸ್ಸಿಗೆ ಕೊಂಚ ಲಗಾಮು ಇಟ್ಟು ನೈಸರ್ಗಿಕವಾದ ಹಣ್ಣು, ಹಣ್ಣಿನ ರಸ, ಹಬೆಯಲ್ಲಿ ಬೇಯಿಸಿದ ಬಾಳೆಹಣ್ಣು ಮೊದಲಾದವುಗಳನ್ನು ಲಘು ಆಹಾರಗಳನ್ನಾಗಿ ಸೇವಿಸಬಹುದು. ಹಪ್ಪಳವನ್ನೂ ಎಣ್ಣೆಯಲ್ಲಿ ಕರಿಯುವುದಕ್ಕಿಂತ ಚಿಕ್ಕ ಉರಿಯಲ್ಲಿ ಹದವಾಗಿ ಸುಟ್ಟು ತಿನ್ನುವುದು ಉತ್ತಮ.

ಹೆಚ್ಚಿನ ನಾರುಯುಕ್ತ ಧಾನ್ಯಗಳು ಮತ್ತು ಕಾಳುಗಳು

ಹೆಚ್ಚಿನ ನಾರುಯುಕ್ತ ಧಾನ್ಯಗಳು ಮತ್ತು ಕಾಳುಗಳು

ಹೆಚ್ಚು ನಾರು ಇರುವ ಆಹಾರಗಳನ್ನು ಆಯುರ್ವೇದ ಶಿಫಾರಸ್ಸು ಮಾಡುತ್ತದೆ. ಮಧ್ಯಾಹ್ನದ ಮತ್ತು ರಾತ್ರಿಯ ಊಟಕ್ಕೆ ಹೆಚ್ಚಿನ ನಾರು ಇರುವ ಧಾನ್ಯಗಳನ್ನು ಮತ್ತು ಕಾಳುಗಳನ್ನು ಹೆಚ್ಚಾಗಿ ಸೇವಿಸಬೇಕು. ಬಾರ್ಲಿ, ಹಬೆಯಲ್ಲಿ ಬೇಯಿಸಿದ ತರಕಾರಿಗಳು, ಓಟ್ಸ್, ಮೊದಲಾದವು ಹೆಚ್ಚು ನಾರಿನ ಅಂಶವನ್ನು ಹೊಂದಿದ್ದು ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ನೀಡುವ ಜೊತೆಗೆ ತೂಕ ಇಳಿಸಿಕೊಳ್ಳಲೂ ಸಹಾಯ ಮಾಡುತ್ತವೆ. ಆದರೆ ಯಾವುದೇ ಕಾರಣಕ್ಕೂ ಸಿದ್ಧಪಡಿಸಿದ ಆಹಾರಗಳನ್ನು ಸೇವಿಸಬಾರದು.

ಸಿಹಿತಿನಿಸುಗಳು

ಸಿಹಿತಿನಿಸುಗಳು

ನಿಮ್ಮ ಚಹಾದಲ್ಲಿರುವ ಸಕ್ಕರೆಯ ಹೊರತಾಗಿ ಬೇರೆ ಯಾವುದೇ ಸಿಹಿ ಪದಾರ್ಥವನ್ನು ತಿನ್ನಬಾರದು. ದೇಹಕ್ಕೆ ಅಗತ್ಯವಾದ ಸಕ್ಕರೆಯನ್ನು ಬಾರ್ಲಿಯ ಖಾದ್ಯ ನಮಗೆ ಒದಗಿಸಿರುವುದರಿಂದ ಹೆಚ್ಚಿನ ಸಕ್ಕರೆಯನ್ನು ಸೇವಿಸಲು ಪ್ರೇರೇಪಿಸುವ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು.

ಹೆಚ್ಚಿನ ಪ್ರೋಟೀನ್ ಯುಕ್ತ ಆಹಾರಗಳು

ಹೆಚ್ಚಿನ ಪ್ರೋಟೀನ್ ಯುಕ್ತ ಆಹಾರಗಳು

ದೇಹಕ್ಕೆ ಅಗತ್ಯವಾದ ಪ್ರೋಟೀನುಗಳನ್ನು ವಿವಿಧ ಕಾಳುಗಳು ಪೂರೈಸುತ್ತವೆ. ತೊಗರಿಬೇಳೆ, ಕಡಲೆಬೇಳೆ, ಹುರುಳಿ ಕಾಳು, ಹೆಸರು ಕಾಳು ಮೊದಲಾದವು ಪ್ರೋಟೀನ್ ನ ಉತ್ತಮ ಆಗರಗಳಾಗಿವೆ. ಆಯುರ್ವೇದದಲ್ಲಿ ಮಾಂಸಾಹಾರ ನಿಷೇಧವಿಲ್ಲದಿದ್ದರೂ ಇಂದಿನ ದಿನಗಳಲ್ಲಿ ಅನೈಸರ್ಗಿಕ ವಿಧಾನಗಳಿಂದ ಕೃತಕ ಹಾರ್ಮೋನುಗಳ ಮೂಲಕ ಬೆಳೆಸಲ್ಪಟ್ಟ ಕೋಳಿ ಮತ್ತಿತರ ಮಾಂಸವನ್ನು ಸೇವಿಸದಿರುವುದು ಉತ್ತಮವಾಗಿದೆ. ಆಯುರ್ವೇದದ ಪ್ರಕಾರ ಸಾರಿನಲ್ಲಿ ಬೇಯಿಸಿದ ಚಿಕ್ಕ ಮೀನು ಉತ್ತಮವಾಗಿದೆ. ಮೀನನ್ನು ಹುರಿದು ಸೇವಿಸುವುದು ಒಳ್ಳೆಯದಲ್ಲ.

ಪಾನೀಯಗಳು

ಪಾನೀಯಗಳು

ಗಟ್ಟಿಯಾದ ಮೊಸರಿಗಿಂತ ಮಜ್ಜಿಗೆ, ಉಳಿದಂತೆ ಪ್ರತಿದಿನ ಒಂದೂವರೆ ಲೀಟರ್ ಕನಿಷ್ಟ ಉಗುರುಬೆಚ್ಚನೆಯ ನೀರನ್ನು ಕುಡಿಯುವುದು ಒಳ್ಳೆಯದು. ಅತಿ ಶೀತಲವೂ ಅಲ್ಲದ, ಅತಿ ಬಿಸಿಯೂ ಅಲ್ಲದ ನೀರು ಹಸಿವನ್ನು ಮುಂದೂಡುವುದು. ಜೊತೆಗೆ ಟೀ ಅಥವಾ ಕಾಫಿಯ ಸೇವನೆಯೂ ಒಳ್ಳೆಯದು.

ನಮ್ಮ ಅಚ್ಚುಮೆಚ್ಚಿನ ಆಹಾರಗಳಿಂದ ದೂರವಿರುವುದು

ನಮ್ಮ ಅಚ್ಚುಮೆಚ್ಚಿನ ಆಹಾರಗಳಿಂದ ದೂರವಿರುವುದು

ನಮ್ಮೆಲ್ಲರ ಇಷ್ಟದ ಖಾದ್ಯಗಳು ಬೇರೆಬೇರೆಯಾಗಿವೆ. ನಮಗೆ ಯಾವ ಖಾದ್ಯ ಹೆಚ್ಚು ಇಷ್ಟವೋ ಅವುಗಳ ಬದಲಿಗೆ ಬೇರೆ ಆಹಾರಗಳನ್ನು ಬಯಸಬೇಕು. ಉದಾಹರಣೆಗೆ ನಿಮಗೆ ಅಕ್ಕಿಯ ಖಾದ್ಯಗಳು ಇಷ್ಟವಾದರೆ ಗೋಧಿಯ ಖಾದ್ಯಗಳನ್ನು ಬಯಸಬೇಕು. ಇದರಿಂದಾಗಿ ಮನಸ್ಸಿನ ಮೇಲಿನ ಹತೋಟಿಯನ್ನು ಇನ್ನಷ್ಟು ಬಲಗೊಳಿಸಬಹುದು.

ಕ್ಯಾಲೋರಿಗಳನ್ನು ಲೆಕ್ಕ ಮಾಡುವುದು

ಕ್ಯಾಲೋರಿಗಳನ್ನು ಲೆಕ್ಕ ಮಾಡುವುದು

ಆಯುರ್ವೇದದಲ್ಲಿ ಆಹಾರ ಹಾಗೂ ಶಕ್ತಿಯನ್ನು ಅಳೆಯುವ ಯಾವುದೇ ತಂತ್ರವಿಲ್ಲ. ಆದರೆ ಆಧುನಿಕ ವಿಜ್ಞಾನ ಈ ಶಕ್ತಿಯನ್ನು ಕ್ಯಾಲೋರಿಗಳ ಲೆಕ್ಕದ ಮೂಲಕ ಅಳೆಯುತ್ತದೆ. ಕ್ಯಾಲೋರಿಗಳ ಲೆಕ್ಕವನ್ನು ಅಳೆಯುವ ಬದಲು ಮನಸ್ಸಿನ ನಿಗ್ರಹಕ್ಕೆ ಆಯುರ್ವೇದ ಒತ್ತು ನೀಡುತ್ತದೆ. ನಿಗದಿತ ಆಹಾರ ಹಾಗೂ ಬೇಡದ ಆಹಾರಗಳಿಗೆ 'ಬೇಡ' ಎಂದು ಹೇಳುವುದನ್ನು ಆಯುರ್ವೇದ ಪ್ರತಿಪಾದಿಸುತ್ತದೆ.

ನಿಸರ್ಗದೊಂದಿಗೆ ದಿನ ಕಳೆಯಿರಿ

ನಿಸರ್ಗದೊಂದಿಗೆ ದಿನ ಕಳೆಯಿರಿ

ನಿಸರ್ಗ ನಮಗೆ ಹಗಲು ರಾತ್ರಿಗಳನ್ನು ನೀಡಿರುವುದು ಚಟುವಟಿಕೆ ಹಾಗೂ ವಿಶ್ರಾಂತಿಗಾಗಿ. ಈ ನಿಯಮವನ್ನು ಬದಲಿಸದಿರಲು ಆಯುರ್ವೇದ ಸೂಚಿಸುತ್ತದೆ. ಇಂದಿನ ದಿನಗಳಲ್ಲಿ ತಡರಾತ್ರಿಯವರೆಗೆ ಎಚ್ಚರವಿರುವುದು, ಹಗಲು ತಡವಾಗಿ ಏಳುವುದು ಮೊದಲಾದವು ದೇಹದ ಮೇಲೆ ಪರಿಣಾಮವನ್ನು ಬೀರುತ್ತವೆ. ಪ್ರತಿದಿನ ಸೂರ್ಯೋದಯಕ್ಕೂ ಮೊದಲು ಏಳುವುದು, ಹಗಲು ಇಡೀ ಮಲಗದೇ ಚಟುವಟಿಕೆಯಿಂದಿರುವುದು, ರಾತ್ರಿ ಆದಷ್ಟು ಬೇಗನೇ ಮಲಗುವುದು ಉತ್ತಮ ಆರೋಗ್ಯಕ್ಕೆ ಅಗತ್ಯವಾಗಿದೆ. ಈಗೆ ಮೇಲೆ ತಿಳಿಸಿದ ನಿಯಮಗಳನ್ನು ಕಟ್ಟು ನಿಟ್ಟಾಗಿ ಒಂದು ತಿಂಗಳು ಪಾಲಿಸಿದರೆ ತೂಕ ಇಳಿದಿರುವುದು ಮಾತ್ರವಲ್ಲ, ಆರೋಗ್ಯದಲ್ಲಿ ಸುಧಾರಣೆಯೂ ಸ್ಪಷ್ಟವಾಗಿ ಗೋಚರಿಸುತ್ತದೆ. ಆಯುರ್ವೇದದ ಪ್ರಕಾರ ಸರಳ ಆಹಾರ ಹಾಗೂ ದೈಹಿಕ ಚಟುವಟಿಕೆಗಳೇ ಸದೃಢ ಶರೀರ ಮತ್ತು ಉತ್ತಮ ಆರೋಗ್ಯಕ್ಕೆ ಕಾರಣವಾಗಿವೆ.

English summary

Tips for weight loss according to ayurveda

Being overweight is treated as a lifestyle illness in Ayurveda. Remember, with Ayurveda, there are no shortcuts.The following tips are part of a comprehensive lifestyle makeover:
X
Desktop Bottom Promotion