For Quick Alerts
ALLOW NOTIFICATIONS  
For Daily Alerts

ದೇಹದ ಆರೋಗ್ಯದ ಗುಟ್ಟು ಕೂದಲಿಂದ ರಟ್ಟು

By Madhumati Hiremath
|

ನೀಳವಾದ ಕೇಶರಾಶಿ ಎಂದರೆ ಯಾರಿಗೆ ತಾನೇ ಇಷ್ಟ ಇರಲ್ಲ ? ರಸ್ತೆಯಲ್ಲಿ ಯಾರಿಗಾದರೂ ಚೆಲುವಾದ ಕೂದಲಿದ್ದರೆ ಎರಡು-ಮೂರು ಸಲ ತಿರುಗಿ ನೋಡುತ್ತೇವೆ. ಕೇಶರಾಶಿ ಹಾಗು ಕೇಶ ವಿನ್ಯಾಸದಿಂದಲೇ ಒಬ್ಬ ವ್ಯಕ್ತಿಯ ಬಾಹ್ಯ ಸೌಂದರ್ಯವನ್ನು ಅಳೆಯುವದೂ ಇದೆ. ಸದೃಡ ಕೇಶ ಮತ್ತು ಹೊಳೆಯುವ ಉಗುರುಗಳು ನಮ್ಮ ಸೌಂದರ್ಯ ಮಾತ್ರವಲ್ಲದೇ ಉತ್ತಮ ಆರೋಗ್ಯದ ಲಕ್ಷಣಗಳಾಗಿವೆ. ಉಗುರು/ಕೂದಲು ಮತ್ತು ಆರೋಗ್ಯದ ನಡುವೆ ಒಂದು ಅವಿನಾಭಾವ ಸಂಬಂಧವಿದ್ದು, ಅನೇಕ ಬಾರಿ ನಿಮ್ಮ ಕೂದಲು ನಿಮ್ಮ ಆರೋಗ್ಯ ಅಥವಾ ಅನಾರೋಗ್ಯದ ಬಗ್ಗೆ ನಿಖರ ವರದಿ ಒಪ್ಪಿಸುತ್ತವೆ.

ನೀವು ನಿಮ್ಮ ಕೂದಲನ್ನು, ಅವುಗಳ ಭಾಷೆಯನ್ನು ಚೆನ್ನಾಗಿ ಅರಿತಿದ್ದರೆ, ಅವುಗಳಲ್ಲುಂಟಾಗುವ ಬದಲಾವಣೆಯನ್ನು ಗಮನಿಸುತ್ತಿದ್ದರೆ, ಖಂಡಿತ ನಿಮ್ಮ ಕೂದಲು ನಿಮ್ಮ ಆರೋಗ್ಯದ ಬಗ್ಗೆ ಏನು ಹೇಳುತ್ತಿದೆ ಎಂಬುದರ ಅರಿವಾಗುತ್ತದೆ ! ನಿಮ್ಮ ಕೇಶದ ಮಾತು ಕೇಳಿ. ನಿಮ್ಮ ಆರೋಗ್ಯದಲ್ಲಾಗಿರುವ ಅನುಚಿತ ಬೆಳವಣಿಗೆಯ ಕಾರಣವನ್ನು ಹುಡುಕಿರಿ. ಇದರಿಂದ ಮುಂದಿನ ಚಿಕಿತ್ಸೆಗೆ ಸಹಾಯವಾಗುವುದು.

Things Your Hair Says About Your Health

ಕೂದಲಿನಲ್ಲಾಗುವ ಏರುಪೇರುಗಳನ್ನು ಗಮನಿಸುವುದು ತುಂಬಾ ಸುಲಭ. ಅದರಲ್ಲೂ ಹೆಚ್ಚುತ್ತಿರುವ ಸೌಂದರ್ಯ ಪ್ರಜ್ಞೆ, ದಿನಕ್ಕೆರಡು ಗಂಟೆ ಕನ್ನಡಿಯ ಮುಂದೆ ಕಳೆಯುವ ಈ ಕಾಲದಲ್ಲಂತೂ ನಮ್ಮ ಕೂದಲಿನಲ್ಲಾಗುವ ಬದಲಾವಣೆಗಳನ್ನು ಅತಿ ಬೇಗ ಗುರುತಿಸಬಹುದು. ಕೂದಲಿನಲ್ಲಾಗುವ ಬದಲಾವಣೆಗಳ ಮೂಲಕ ನಮ್ಮ ದೇಹದಲ್ಲಾಗುತ್ತಿರುವ ಬದಲಾವಣೆಗಳನ್ನೂ ಸಹ ಶೀಘ್ರಗತಿಯಲ್ಲಿ ಗುರುತಿಸಬಹುದು. ನಿಮ್ಮ ಉದ್ದನೆಯ ದಟ್ಟವಾದ ಕೇಶರಾಶಿ ದಿನೇ-ದಿನೇ ಸೊರಗುತ್ತಿದ್ದರೆ, ಒಂದೊಮ್ಮೆ ಸದೃಡವಾಗಿ ಎಲ್ಲರ ಆಕರ್ಷಣೆಗೆ ಕಾರಣವಾಗಿದ್ದ ನಿಮ್ಮ ಕೂದಲು, ಈಗ ತೆಳುವಾಗಿ, ನೀವು ಅವನ್ನು ಮರೆಮಾಚುವಂತಾಗಿದ್ದರೆ! ನಿಮ್ಮ ಕೇಶದಲ್ಲಾಗಿರುವ ಈ ಬದಲಾವಣೆಯು ನಿಮ್ಮ ಆರೋಗ್ಯ ತಪಾಸಣೆ ಅವಶ್ಯಕತೆಯನ್ನು ಸಾರಿಹೇಳುತ್ತಿವೆ ಎಂದರ್ಥ.

ಕೂದಲುಗಳು ಬೆಳೆಯಲು ಹಾಗೂ ಅಳಿಯಲು ಕಾರಣಗಳೇನು? ನಮ್ಮ ಕೇಶರಾಶಿಯ ಯಾವ ವರ್ತನೆಗೆ ಏನು ಅರ್ಥ? ಕೇಶದ ರಚನಾ ವ್ಯತ್ಯಾಸವನ್ನು ಸರಿಪಡಿಸುವುದು ಹೇಗೆ?

ಇಲ್ಲಿದೆ ವಿವರಣೆ.

1 . ಓಹ್ ! ದಪ್ಪ ಕೂದಲು ಸೊರಗುತ್ತಿದೆಯೇ
ಒಂದೊಮ್ಮೆ ಸುಂದರವಾಗಿ, ದಟ್ಟವಾಗಿ ಕಂಗೊಳಿಸುತ್ತಿದ್ದ ನಿಮ್ಮ ಕೂದಲು, ಇತ್ತೀಚೆಗೆ ತೆಳುವಾಗಲಾರಂಭಿಸಿವೆ ಎಂಬ ಆತಂಕವೇ ? ನಿಮ್ಮ ಕೇಶದ ಈ ಕ್ಷಿಪ್ರ ಬದಲಾವಣೆಗೆ ಏನಾದರೊಂದು ಕಾರಣವಿರಲೇಬೆಕಲ್ಲವೇ? ಮೊದಲು ಆ ಕಾರಣವನ್ನು ತಿಳಿಯಿರಿ. ಹೆಚ್ಚಿನ ಜನರಲ್ಲಿ ಕೂದಲುದುರುವ ಕಾರಣ ಮಾನಸಿಕ ಒತ್ತಡವಾಗಿರುತ್ತದೆ. ಈ ಒತ್ತಡ ಅವರ ಸಂಸಾರಿಕ ಜೀವನದ್ದಾಗಿರಬಹುದು ಅಥವಾ ವೃತ್ತಿ ಜೀವನದ ತೊಡಕುಗಳಿಂದಾಗಿರಬಹುದು. ಪ್ರತಿಯೊಬ್ಬರ ಮನಸ್ಸಿನಲ್ಲೂ ಯೋಜನೆ ಮತ್ತು ಯೋಚನೆಗಳು ಸಹಜ. ಆದರೆ ಅವುಗಳನ್ನು ನಿಭಾಯಿಸುವ ರೀತಿಯ ಮೇಲೆ ನಮ್ಮ ಸೌಂದರ್ಯ ಮತ್ತು ಆರೋಗ್ಯ ಅವಲಂಭಿಸಿರುತ್ತದೆ. ಆದಷ್ಟು ನಮ್ಮ ಮನಸ್ಸನ್ನು ನಿರ್ಮಲವಾಗಿರಿಸಿಕೊಳ್ಳುವುದು ಒಳ್ಳೆಯದು. ಕೂದಲುದುರಲು ಒತ್ತಡ ಒಂದೇ ಅಲ್ಲದೇ ವಿವಿಧ ಹಾರ್ಮೋನ್ ಗಳ ಅಸಹಜ ಸ್ರವಿಕೆ, ಪಿಸಿಓಎಸ್ ಅಥವಾ ಥೈರಾಯ್ಡ್ ಗಳ ಕೂಡ ಆಗಿರಬಹುದು .

ದಿನಕ್ಕೆ 40-60 ಕೂದಲುಗಳು ಉದುರುವುದು ಸಾಮಾನ್ಯ, ಆದರೆ ಪ್ರತೀ ಬಾರಿ ಬಾಚಿದಾಗಲೂ ಉಂಡೆ-ಉಂಡೆಯಾಗಿ ಕೂದಲುಗಳು ಉದುರುತಿದ್ದರೆ, ನಿಮ್ಮ ದೇಹ ಹಾಗು ಕೂದಲ ಆರೋಗ್ಯದಲ್ಲಿ ಏನೋ ಏರುಪೇರಾಗಿದ್ದು, ಇದು ಆರೈಕೆಯ ಅವಶ್ಯಕತೆಯನ್ನು ಸೂಚಿಸುತ್ತದೆ.

2 . ಅತಿ ಹೊಟ್ಟಿನ ಸಮಸ್ಯೆ
ಹೊಟ್ಟಿನ ಸಮಸ್ಯೆ ಒಂದು ಸಾಮಾನ್ಯ ಸಂಗತಿ. ಬಹಳಷ್ಟು ಜನರಲ್ಲಿ ನಾವು ಈ ಸಮಸ್ಯೆಯನ್ನು ಕಾಣಬಹುದು. ಇದು ಸಾಮಾನ್ಯವಾಗಿ ಕಾಣುವ ಹೊಟ್ಟಾದರೆ ನಿಮ್ಮ ಕೂದಲ ಹಾಗು ತಲೆಯ ಸ್ವಚ್ಛತೆಯೊಂದಿಗೆ ನಿವಾರಣೆಯಾಗುವುದು. ಆದರೆ ಅತಿ ಹೆಚ್ಚಿನ ಪ್ರಮಾಣದಲ್ಲಿ ದೀರ್ಘಕಾಲದವರೆಗೆ ಈ ಸಮಸ್ಯೆ ಇದ್ದರೆ! ಆಗ ನೀವು ಹುಷಾರಾಗಬೇಕಾಗುತ್ತದೆ. ನೀವು ಸೋರಿಯಾಸಿಸ್ ನಿಂದ ಬಳಲುತ್ತಿರುವ ಸಾದ್ಯತೆ ಇರುತ್ತದೆ. ಅಥವಾ ಇದು ಕ್ರೋನ್ಸ್ ರೋಗದ ಸೂಚನೆಯಾಗಿರಲೂಬಹುದು. ಯಾವುದಕ್ಕೂ ಒಮ್ಮೆ ವೈದ್ಯಕೀಯ ತಪಾಸಣೆ ಮಾಡಿಸಿರಿ.

3 . ಕೂದಲು ಒಣಗಿದಂತಿವೆಯೇ
ದೀರ್ಘಕಾಲ ಕ್ಲೋರೀನ್ ಯುಕ್ತ ನೀರಿನಲ್ಲಿ ಈಜುವುದರಿಂದ ಅಥವಾ ಹೇರ್-ಡೈ ಬಳಸುವದರಿಂದ ನಿಮ್ಮ ಕೂದಲು ಒಣಗಿದಂತಾಗುವುದು ಸಾಮಾನ್ಯ. ಆದರೆ ಇದಾವುದೂ ಇಲ್ಲದೆ ಕೂದಲು ಕಳೆಗುದುತ್ತಿದ್ದರೆ ಖಂಡಿತ ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವ ಅವಶ್ಯಕತೆಯಿದೆ. ಕೂದಲು ಒಣಗಲು ಹೈಪೋಥೈರಾಯ್ಡ್ ಕೂಡ ಕಾರಣವಿರಬಹುದು. ಕೆಲವು ತಿಂಗಳಿಂದ ನಿಮ್ಮ ಕೂದಲಿನಲ್ಲಿದ್ದ ಲವಲವಿಕೆ ಕಾಣೆಯಾಗಿದ್ದರೆ, ಒಮ್ಮೆ ವೈದ್ಯರ ಬಳಿ ನಿಮ್ಮ ಥೈರಾಯ್ಡ್ ಮಟ್ಟವನ್ನು ಪರಿಶೀಲಿಸಿಕೊಳ್ಳುವುದು ಒಳ್ಳೆಯದು. ಥೈರಾಯ್ಡ್ ನ ಇತರ ರೋಗಲಕ್ಷಣಗಳು ತೂಕ ಏರಿಕೆ , ಶೀತ ಇತ್ಯಾದಿ. ಒಣಗುವ ಕೇಶದೊಂದಿಗೆ ಈ ಲಕ್ಷಣಗಳಿದ್ದರೆ ಅವಶ್ಯವಾಗಿ ವೈದ್ಯರಲ್ಲಿಗೆ ಹೋಗಿ.

4 . ತುಂಡರಿಸುವ ಕೂದಲುಗಳು
ಪ್ರೋಟೀನ್ ಕೊರತೆಯಿಂದಾಗಿ ಕೂದಲುಗಳು ನಿರಂತರವಾಗಿ ತುಂಡರಿಸುತ್ತವೆ. ನಿಮ್ಮ ದಿನನಿತ್ಯದ ಆಹಾರದಲ್ಲಿ ಸಾಕಷ್ಟು ಪ್ರಮಾಣದ ಪ್ರೋಟೀನ್ ಇಲ್ಲದಿದ್ದರೆ ನಿಮ್ಮ ಕೂದಲಿನ ಆರೋಗ್ಯ ಕೆಟ್ಟು, ಅವು ತುಂಡಾಗುವ ಸಾಧ್ಯತೆ ಇದೆ. ಕೂದಲು ಮುಖ್ಯವಾಗಿ ಕೆರಟಿನ್ ಎಂಬ ಪ್ರೋಟಿನಿನಿಂದ ಮಾಡಲ್ಪಟ್ಟಿದ್ದು ,ತುಂಡರಿಸುವ ಕೂದಲುಗಳು ಥೈರಾಯ್ಡ್ ಸಂಬಂಧೀ ರೋಗ ಲಕ್ಷಣಗಳನ್ನು ಸೂಚಿಸುತ್ತವೆ.

5 . ಬೂದು ಬಣ್ಣಕ್ಕೆ ತಿರುಗುತ್ತಿರುವ ಕೇಶ !
ನಿಮ್ಮ ತಲೆಕೂದಲು ಬಣ್ಣಕಳೆದು ಕೊಳ್ಳುತ್ತಿದ್ದರೆ ಅಥವಾ ಬೂದು ಬಣ್ಣಕ್ಕೆ ತಿರುಗುತ್ತಿದ್ದರೆ ಅದಕ್ಕೆ ಕಾರಣ ನಿಮ್ಮ ಚಿಂತೆ ಹಾಗೂ ಒತ್ತಡ. ಹೆಚ್ಚಿನ ಒತ್ತಡದಿಂದಾಗಿ ನಿಮ್ಮ ಹಾರ್ಮೋನು ಸ್ರವಿಕೆಯಲ್ಲಿ ಅಸಮತೋಲನವಾಗುವದೂ ಇದೆ.

ಈಗ ಹೇಳಿ, ಕೇಶಕ್ಕೂ ಆರೋಗ್ಯಕ್ಕೂ ಸಂಬಂಧ ಇದೆ ತಾನೇ? ಸುಂದರವಾದ ಕೇಶರಾಶಿ ನಿಮ್ಮದಾಗಬೇಕಾದರೆ ಮೊದಲು ಆರೋಗ್ಯವಂತರಾಗಬೇಕು.
ನಿಮ್ಮ ಕೇಶದ ಸೌಂದರ್ಯ ನಿಮ್ಮ ಆರೋಗ್ಯದಲ್ಲಿದೆ.
ನಿಮ್ಮ ಅನಾರೋಗ್ಯ ನಿಮ್ಮ ಕೇಶಗಳಲ್ಲಿ ಬಿಂಬಿತವಾಗುತ್ತದೆ.
ಆದ್ದರಿಂದ ಆರೋಗ್ಯವಾಗಿರಿ, ತನ್ಮೂಲಕ ಅಂದವಾಗಿರಿ

English summary

Things Your Hair Says About Your Health

A perfect beauty is defined through the beauty of hair and nails and like nails, hair is an extension of our body. Some people consider hair as a separate part of the body, but in real it is not! There is hardly anyone who doesn't want a beautiful hair and hair care is an essential part of the beauty regime.
Story first published: Friday, November 29, 2013, 15:44 [IST]
X
Desktop Bottom Promotion