For Quick Alerts
ALLOW NOTIFICATIONS  
For Daily Alerts

ಬೆಳಗ್ಗೆ ಉಲ್ಲಾಸದಿಂದ ಎದ್ದೇಳಲು ಏನು ಮಾಡಬೇಕು?

|

ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತಿ

ಕರಮೂಲೆ ಸ್ತಿತಾ ಗೌರಿ ಪ್ರಭಾತೆ ಕರದರ್ಶನಂ||

ನಮ್ಮ ದೇಹದಲ್ಲಿಯೇ ದೇವರು ನೆಲೆಸಿರುತ್ತಾನೆ. ಲಕ್ಷ್ಮಿ ಸರಸ್ವತಿಯರನ್ನು ನಮ್ಮ ಕೈಯೊಳಗೇ ಕಾಣಬಹುದು. ಬೆಳಿಗ್ಗೆ ಎದ್ದು ನಮ್ಮ ಕೈ ದರ್ಶನವನ್ನು ಮಾಡಬೇಕು ಎಂಬುದೇ ಈ ಸುಭಾಷಿತದ ಸಾರ.

ಪ್ರತಿ ದಿನ ಏಳುವಾಗ ಮನಸ್ಸು ಪ್ರಫುಲ್ಲವಾಗಿರದಿದ್ದರೆ ಆ ಇಡೀ ದಿನ ಹಾಳಾಯಿತು ಎಂದೇ ಅರ್ಥ. ಬಸ್ಸು ಸಿಕ್ಕಿಲ್ಲ, ಕಾರು, ಬೈಕ್ ಕೈಕೊಟ್ಟಿತು, ಆಫೀಸ್ ಕೆಲಸಕ್ಕೆ ಹೋಗಲು ತಡವಾಯಿತು. ಆಫೀಸಿನಲ್ಲಿ ಕಿರಿಕಿರಿ, ಕೆಲಸದಲ್ಲಿ ಎಡವಟ್ಟಾಗುವುದು ಇವೆಲ್ಲ ಸಮಸ್ಯೆಗಳು ಬೆಳ್ಗಿನ ಮೂಡ್ ಚೆನ್ನಾಗಿಲ್ಲದಿದ್ದರೆ ಎದುರಾಗುತ್ತವಲ್ಲ!

How To Wake Up In A Good Mood

ಹಾಗಾದರೆ ನಮ್ಮ ಬೆಳಗಿನ ಮೂಡ್ ಸರಿಯಾಗಿ, ಖುಷಿ ಖುಷಿಯಾಗಿರುವಂತೆ ಮಾಡಿಕೊಳ್ಳುವುದು ಹೇಗೆ? ಇದು ನಮ್ಮಿಂದಲೇ ಸಾಧ್ಯ. ಬೇರೆ ಯಾರೋ ನಮ್ಮ ಮೂಡ್ ಕೆಡಿಸಿದರು ಎಂದು ಅವರಿವರನ್ನು ದೂರುವುದಕ್ಕಿಂತ ನಾವೇ ಸ್ವತಃ ನಮ್ಮ ಮನಸ್ಸನ್ನು ಸಂತೋಷವಾಗಿರಿಸಿಕೊಳ್ಳುವುದು ಉತ್ತಮ.

ಮುಂದಿನ ಭವಿಷ್ಯವನ್ನಂತೂ ಯಾರೂ ನೊಡಿಲ್ಲ. ನಿನ್ನೆಯದು ನಿನ್ನೆಗೆ. ಹಾಗಿದ್ದು ನಿನ್ನೆಯದನ್ನು ನೆನೆದು ಇವತ್ತಿನ ದಿನವನ್ನೇಕೆ ನಿಸ್ಸಾರ ಮಾಡಿಕೊಳ್ಳೋಣ? ದಿನವಿಡಿ ಲವಲವಿಕೆಯಿಂದ ಇರಬೇಕಾದರೆ ಒಳ್ಳೆಯ ಮೂಡ್ ಅಗತ್ಯ. ಅದಕ್ಕಾಗಿ ಕಲವು ಬದಲಾವಣೆಗಳನ್ನು ಮಾಡಿಕೊಳ್ಳಿ. ಇದರಿಂದ ನಿಮ್ಮ ದಿನದ ಅತೀ ಹೆಚ್ಚು ಸಮಯ ಪ್ರಶಾಂತವಾಗಿ ಕಳೆಯುವಲ್ಲದೇ ಬೇರೆಯವರಿಗೆ ಮಾದರಿಯೂ ಆಗಬಹುದು !

ಪ್ರತಿದಿನ ನೀವು ಮಲಗುವ ಸ್ಥಳವನ್ನು ಸ್ವಲ್ಪ ಬದಲಾಯಿಸಿ. ಬೆಳಿಗ್ಗೆ ಸೂರ್ಯನ ಎಳೆ ಬಿಸಿಲು ನಿಮ್ಮ ಮೇಲೆ ಬೀಳುವ ಹಾಗೆ ಮಲಗಿ. ಅಲ್ಲಿಗೆ ಬೆಳಿಗ್ಗೆಯಾಗುತ್ತಿರುವ ಹಾಗೆ ಹಕ್ಕಿಗಳ ಕೂಗು, ಹೂವಿನ ಪರಿಮಳ ನಿಮ್ಮ ಮನಸ್ಸಿಗೆ ಮುದ ನೀಡುತ್ತವೆ. ಏಳುವುದಕ್ಕೂ ಹಿತವಾಗಿರುತ್ತವೆ.

ಸಾಮಾನ್ಯವಾಗಿ ಬೆಳಿಗ್ಗೆ ಏಳುವುದಕ್ಕಾಗಿ ಎಲ್ಲರೂ ಅಲೆರಾಂ ಇಟ್ಟುಕೊಳ್ಳುವುದು ರೂಢಿ. ಮೊದಲಿನ ಅಲೆರಾಂ ಗಡಿಯಾರಗಳಿಗಿಂತ ಹೆಚ್ಚಾಗಿ ಈಗ ಮೊಬೈಲ್ ಗಳಲ್ಲಿಯೇ ಏಳುವ ಸಮಯವನ್ನು ನಿಗದಿ ಮಾಡಿಟ್ಟುಕೊಳ್ಳುತ್ತೇವೆ. ಹೀಗೆ ಅಲೆರಾಂ ಹೊಡೆದಾಗ ಅಯ್ಯೋ, ಬೆಳಗಾಯಿತಲ್ಲ ಎಂಬ ಅಸಮಾಧಾನ. ಅದಕ್ಕಾಗಿ ಅಲೆರಾಂ ರಿಂಗಣವನ್ನು ಒಳ್ಳೆಯ ಸಂಗೀತ, ಹಕ್ಕಿಗಳ ಇಂಚರ ಇಂತಹ ಯಾವುದೇ ಮನಸ್ಸಿಗೆ ಹಾಯ್ ಎನಿಸುವ ರಿಂಗಣವನ್ನಾಗಿ ಬದಲಾಯಿಸಿ. ಮತ್ತೆ ನೋಡಿ ಈಡಿ ದಿನ ಅದೇ ಸಂಗೀತ ನಿಮ್ಮಲ್ಲಿ ಮರುಕಳಿಸುತ್ತಿರುತ್ತದೆ. ಇಷ್ಟಾದರೆ ದಿನವಿಡೀ ಉಲ್ಲಾಸವೇ ತಾನೇ?

ಇವತ್ತು ಉತ್ಸಾಹದ ಚಿತ್ತದಿಂದ ಏಳಬೇಕು ಎಂದಾದರೆ ನಿನ್ನೆಯ ದಿನ ಚೆನ್ನಾಗಿ ಕಳೆದಿರಬೇಕು ಎಂದೆನೂ ಇಲ್ಲ. ಯಾಕೆಂದರೆ ಯಾವುದೋ ಕಾರಣಕ್ಕೆ ನಿನ್ನೆ ನೀವು ಬೇಸರಗೊಂಡಿರಬಹುದು. ಆದರೆ ಮರುದಿನ ಏಳುವಾಗ ಅದನ್ನೇಲ್ಲ ಮರೆತು ಏಳುವುದು ಮುಖ್ಯ. ಅದಕ್ಕಾಗಿ ನಾಳೆ ಏನು ಮಾಡಬೇಕು ಎನ್ನುವುದನ್ನು ಮಲಗುವ ಮುನ್ನ ಮನಸ್ಸಿಸಲ್ಲಿಯೇ ಸಂಕಲ್ಪ ಮಾಡಿಕೊಳ್ಳಿ. ಬಹಳ ದೊಡ್ಡ ದೊಡ್ಡ ಕೆಲಸ ಮಾಡಬೇಕೆಂದೆನೂ ಇಲ್ಲ. ಇನ್ನೊಬ್ಬರಿಗೆ ಸಂತೋಷವಾಗುವಂತಹ ಯಾವುದಾದರೂ ಕಾರ್ಯವನ್ನು ಬೆಳಗ್ಗೆ ಎದ್ದು ಮಾಡುವುದಕ್ಕೆ ನಿರ್ಧಾರ ಮಾಡಿ. ಬೆಳಿಗ್ಗೆ ಬೇಗ ಎಚ್ಚರವಾಗುವುದರ ಜೊತೆಗೆ ತಾನು ಏನೋ ಒಳ್ಳೆಯ ಕೆಲಸವನ್ನು ಮಾಡಬೇಕಿದೆ ಎಂಬುದು ಗಮನಕ್ಕೆ ಬಂದು ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಎನಿಸುತ್ತದೆ.

ಒಳ್ಳೆಯ ಮೂಡ್ ನಿಂದ ಎದ್ದು ನಮ್ಮ ದಿನವನ್ನು ನಾವೇ ಸುಂದರವಾಗಿಸಿಕೊಂಡರೆ ದಿನದ ಬೇಸರಕ್ಕೆ, "ಮೂಡ್ ಇಲ್ಲ" ಎಂಬ ಶಬ್ದಗಳಿಗೆ ಜಾಗವಿರುತ್ತದೆಯೇ, ಏನಂತೀರಿ?

English summary

How To Wake Up In A Good Mood | Tips For Health | ಫ್ರೆಶ್ ಮೂಡ್ ನಲ್ಲಿ ಎದ್ದೇಳುವುದು ಹೇಗೆ? | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Do you find yourself waking up very lazy in the morning? Are you still feeling tired? Well, in this article it will explain step by step how to wake up feeling refreshed and in a good mood.
Story first published: Saturday, December 8, 2012, 10:53 [IST]
X
Desktop Bottom Promotion