For Quick Alerts
ALLOW NOTIFICATIONS  
For Daily Alerts

ಪದೇ ಪದೇ ಕಾಡುವ ಸುಸ್ತು, ಕಾರಣ ತಿಳಿದುಕೊಳ್ಳಿ

By Super
|

ಹದಿಹರೆಯದಲ್ಲಿನ ದಿನಗಳನ್ನು ನೆನೆಸಿಕೊಳ್ಳಿ, ಸಂಜೆಯಾಗುತ್ತಿದ್ದಂತೆಯೇ ಪ್ರಾರಂಭವಾಗುವ ಆಟಕ್ಕೆ ಮಿತಿಯೇ ಇರುತ್ತಿರಲಿಲ್ಲ. ಸೂರ್ಯ ಮುಳುಗಿದ ಬಳಿಕವೂ ಆಟ ಬಿಟ್ಟು ಮನಸ್ಸೇ ಬರುತ್ತಿರಲಿಲ್ಲ. ಶಾಲೆಯಲ್ಲಂತೂ ಆಟದ ಹೊತ್ತು ಬಂದರೆ ಸಾಕು, ಎಲ್ಲಿಂದ ಬರುತ್ತಿತ್ತೋ ಆ ಶಕ್ತಿ, ಗಂಟೆಗಟ್ಟಲೇ ಆಡಿದರೂ ದಣಿವೇ ಇರುತ್ತಿರಲಿಲ್ಲ.

ದಿನಗಳೆದಂತೆ ವೃತ್ತಿ ಪ್ರವೃತ್ತಿಗಳಲ್ಲಿ ತೊಡಗುತ್ತಾ ಬಂದಂತೆ ಶಕ್ತಿ ಉಡುಗುತ್ತಾ ಬರುತ್ತದೆ. ಸ್ವಲ್ಪ ಸುತ್ತಮುತ್ತ ಗಮನಿಸಿದರೆ ಎಲ್ಲರೂ ಚಟುವಟಿಕೆಯಿಂದ ಇರುವಂತೆ ಕಂಡುಬಂದರೂ ಬಾಲ್ಯದ ಆಟದಲ್ಲಿದ್ದ ಚುರುಕು ಇರುವುದಿಲ್ಲ. ನರಕಯಾತನೆ ನೀಡುವ ಎದೆಯುರಿ ಸಮಸ್ಯೆಗೆ ಫಲಪ್ರದ ಮನೆಮದ್ದು

ಆದರೆ ಕೆಲವರು ಮಾತ್ರ ಇದಕ್ಕೆ ಅಪವಾದವಾಗಿ ದಿನವಿಡೀ ಸಂತೋಷವಾಗಿ ಮತ್ತು ಚುರುಕಾಗಿ ಇರುತ್ತಾರೆ. ಇದಕ್ಕೆ ನಮ್ಮ ದಿನನಿತ್ಯದ ಚಟುವಟಿಕೆಗಳನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಮತ್ತು ನಾವು ಸ್ವೀಕರಿಸಿದ ಆಹಾರ, ಆರೋಗ್ಯ ಎಲ್ಲವೂ ಕಾರಣವಾಗಿವೆ. ಚುರುಕಾಗಿರದೇ ಇರುವುದಕ್ಕೆ ಕಾರಣಗಳನ್ನು ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ, ಆದರೆ ಪ್ರಯತ್ನಿಸಿದರೆ ಕಷ್ಟವೂ ಅಲ್ಲ.

ನಿತ್ಯದ ಸಮಸ್ಯೆಗಳು, ಚಿಂತೆಯಿಂದ ಯಾವುದಾದರೂ ವ್ಯಸನಕ್ಕೆ ಶರಣಾಗುವುದು, ಎಷ್ಟೇ ಕಷ್ಟಪಟ್ಟರೂ ಎಟುಕದ ಸುಖ, ಹಣ ಮಾನಸಿಕವಾಗಿ ಜರ್ಝರಿತವಾಗಿಸುತ್ತದೆ. ಆದರೆ ಕೊಂಚ ಮನಸ್ಸನ್ನು ಸಕಾರಾತ್ಮಕ ಚಿಂತನೆಯತ್ತ ಹೊರಳಿಸುವುದರಿಂದ, ಉತ್ತಮ ಆಹಾರ, ಸಾಕಷ್ಟು ನಿದ್ದೆ, ಅಗತ್ಯವಿದ್ದಷ್ಟು ವ್ಯಾಯಾಮ, ಸುತ್ತಮುತ್ತಲ ಜನರೊಂದಿಗೆ ಉತ್ತಮ ಬಾಂಧವ್ಯ ಮೊದಲಾದವುಗಳಿಂದ ದಿನದ ಸಮಯವನ್ನು ಚಟುವಟಿಕೆಯಿಂದ ಮತ್ತು ಆರೋಗ್ಯದಿಂದ ಕಳೆಯಬಹುದು. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಕಬ್ಬಿಣಾಂಶ ಹೆಚ್ಚಿರುವ ಆಹಾರದ ಸೇವನೆ

ಕಬ್ಬಿಣಾಂಶ ಹೆಚ್ಚಿರುವ ಆಹಾರದ ಸೇವನೆ

ನಿಮ್ಮ ಆಹಾರದಲ್ಲಿ ಕಬ್ಬಿಣದ ಅಂಶ ಕಡಿಮೆಯಿದ್ದರೆ ದಿನದ ಚಟುವಟಿಕೆಗಳಿಗೆ ಅಗತ್ಯವಿದ್ದಷ್ಟು ಶಕ್ತಿ ದೊರೆಯುವುದಿಲ್ಲ. ಇದಕ್ಕಾಗಿ ಮೊಟ್ಟೆ, ಟೋಫು (tofu), ರಾಜ್ಮಾ (ಬೀನ್ಸ್ ಕಾಳುಗಳು), ಒಣಫಲಗಳು, ಶೇಂಗಾಬೀಜದ ಪುಡಿ ಬೆರೆಸಿದ ಬೆಣ್ಣೆ (peanut butter) ಮೊದಲಾದವುಗಳನ್ನು ನಿಮ್ಮ ಆಹಾರದಲ್ಲಿ ಅಳವಡಿಸಿ. ಇವು ನಿಮ್ಮ ನಿತ್ಯದ ಚಟುವಟಿಕೆಗೆ ಹೆಚ್ಚಿನ ಶಕ್ತಿ ನೀಡುತ್ತದೆ.

 ಸಿದ್ಧ ಆಹಾರಗಳಿಂದ ದೂರವಿರಿ

ಸಿದ್ಧ ಆಹಾರಗಳಿಂದ ದೂರವಿರಿ

ನಗರದ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಆಹಾರಕ್ಕಿಂತ ಪ್ರತಿಷ್ಟೆಯ ಪ್ರಶ್ನೆಯಾಗಿ ಧಾಳಿಯಿಟ್ಟಿರುವ ವಿದೇಶೀ ಸಿದ್ಧ ಆಹಾರಗಳು ಆರೋಗ್ಯಕ್ಕೆ ಉತ್ತಮವಲ್ಲ. ಏಕೆಂದರೆ ಇದರಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ಅನಗತ್ಯವಾದ ಪೋಷಕಾಂಶಗಳು ಮತ್ತು ಸಕ್ಕರೆ ಇದ್ದು ಇವುಗಳನ್ನು ನಿಭಾಯಿಸುವಲ್ಲಿ ಶರೀರ ಹೆಚ್ಚು ಶಕ್ತಿಯನ್ನು ವ್ಯಯಿಸ ಬೇಕಾಗುತ್ತದೆ. ಪ್ರತಿಷ್ಟೆಯನ್ನು ಬದಿಗಿಟ್ಟು ನಿಮ್ಮ ಕೈಯಾರೆ ತಯಾರಿಸಿದ ಉತ್ತಮ ಮತ್ತು ಆರೋಗ್ಯಕರ ಆಹಾರದ ಮೇಲೆ ಭರವಸೆ ಇಡಿ.

ರಾತ್ರಿ ಮದ್ಯಪಾನ ಬೇಡ

ರಾತ್ರಿ ಮದ್ಯಪಾನ ಬೇಡ

ಕೇವಲ ಚಟವಾಗಿ ಪ್ರಾರಂಭವಾದ ಮದ್ಯಪಾನ ಹೇಗೆ ವ್ಯಸನವಾಗಿ ಬದಲಾಯಿತೆಂದೇ ಗೊತ್ತಾಗುವುದಿಲ್ಲ. ಮದ್ಯಪಾನದ ಅಭ್ಯಾಸವಿರುವವರಿಗೆ ರಾತ್ರಿ ಮಲಗುವ ಮುನ್ನ ಕೊಂಚ ಸೇವನೆ ಅಭ್ಯಾಸವಾಗಿಬಿಟ್ಟಿರುತ್ತದೆ.ಇದು ಅತ್ಯಂತ ಅನಾರೋಗ್ಯಕರ ಅಭ್ಯಾಸವಾಗಿದೆ. ಏಕೆಂದರೆ ರಾತ್ರಿ ಮಲಗಿದ ಬಳಿಕ ನಡೆಯುವ ಅನೈಚ್ಛಿಕ ಕಾರ್ಯಗಳಿಗೆ ದೇಹ ತನ್ನ ಶಕ್ತಿಯನ್ನು ವ್ಯಯಿಸಬೇಕಾಗಿದ್ದು ಈ ಕಾರ್ಯದಲ್ಲಿ ರಕ್ತದಲ್ಲಿ ಮಿಳಿತಗೊಂಡ ಮದ್ಯಸಾರ ಕೆಲಸವನ್ನು ನಿಧಾನಗೊಳಿಸುತ್ತದೆ. ಪರಿಣಾಮವಾಗಿ ಯಾವ ಕೆಲಸವೂ ಸುಸೂತ್ರವಾಗಿ ನಡೆಯದೇ ಮರುದಿನಕ್ಕೆ ಮುಂದೂಡಲ್ಪಡುತ್ತವೆ. ಇದು ನಿಮ್ಮ ಚಟುವಟಿಕೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ನಿದ್ದೆಯೂ ಭಂಗವಾಗುವುದರಿಂದ ಮರುದಿನದ ದಿನಚರಿ ಅಲ್ಲೋಲ ಕಲ್ಲೋಲವಾಗುತ್ತದೆ.

ದುಡಿಮೆಯ ಗೀಳು ಹತ್ತಿಕೊಂಡಿದೆಯೇ

ದುಡಿಮೆಯ ಗೀಳು ಹತ್ತಿಕೊಂಡಿದೆಯೇ

ಕೆಲವರಿಗೆ ತಮ್ಮ ಕೆಲಸವೂ ಅತ್ಯಂತ ಕರಾರುವಾಕ್ಕಾಗಿ ಇರಬೇಕು ಹಾಗೂ ತಮ್ಮ ಸುತ್ತಮುತ್ತಲಿನವರಿಂದಲೂ ಹಾಗೇ ನಡೆಯಬೇಕು ಎಂದು ಅಪೇಕ್ಷಿಸುತ್ತಾರೆ. ಆದರೆ ಪ್ರತಿ ವ್ಯಕ್ತಿಯ ಕೆಲಸದ ಗತಿ ಮತ್ತು ವಿಧಾನದಲ್ಲಿ ಕೊಂಚವಾದರೂ ವ್ಯತ್ಯಾಸ ಇರುವುದರಿಂದ ಈ ವ್ಯತ್ಯಾಸ ದುಡಿಮೆಯ ಗೀಳಿನವರಿಗೆ ಸಹ್ಯವಾಗುವುದಿಲ್ಲ. ಈ ಅಸಹನೆ ಅವರ ಚಟುವಟಿಕೆಯಲ್ಲಿ ಬಾಧೆಯಾಗಿ ಪರಿಣಮಿಸುತ್ತದೆ. ಇದಕ್ಕಾಗಿ ಸುತ್ತಲಿನ ಜನರು ನೀಡುವ ಸೇವೆಯನ್ನು ಹೇಗಿದೆಯೋ ಹಾಗೆ ಎಂಬಂತೆ ಸ್ವೀಕರಿಸಿ, ಸಾಧ್ಯವಾದಷ್ಟು ಅವರನ್ನು ಸಾವಧಾನದಿಂದ ತಿದ್ದಲು ಯತ್ನಿಸಿ, ಅವರಿಂದ ಪಡೆಯುವ ಧನ್ಯವಾದವನ್ನು ಮನಃಪೂರ್ವಕ ಸ್ವೀಕರಿಸಿ ಧನ್ಯತಾಭಾವನೆಯನ್ನು ಅನುಭವಿಸಿ.

ಬೆಳಗ್ಗಿನ ಉಪಾಹಾರವನ್ನು ತ್ಯಜಿಸುವುದು ಅಥವಾ ತಡವಾಗಿ ಮಾಡುವುದು

ಬೆಳಗ್ಗಿನ ಉಪಾಹಾರವನ್ನು ತ್ಯಜಿಸುವುದು ಅಥವಾ ತಡವಾಗಿ ಮಾಡುವುದು

ದಿನದ ಯಾವುದೇ ವೇಳೆಯಲ್ಲಿ ಸೇವಿಸುವ ಆಹಾರಗಳಲ್ಲಿ ಅತ್ಯಂತ ಮುಖ್ಯವಾದುದೆಂದರೆ ಬೆಳಗ್ಗಿನ ಉಪಾಹಾರ. ಏಕೆಂದರೆ ಮೆದುಳಿಗೆ ಬೇಕಾದ ರಕ್ತಪೂರೈಕೆಗೆ ಬೆಳಗ್ಗಿನ ಅಲ್ಪ ಉಪಾಹಾರ ಅತ್ಯಂತ ಅಗತ್ಯ. ಒಂದು ವೇಳೆ ಉಪಾಹಾರವನ್ನು ಸೇವಿಸದಿದ್ದರೆ ಅಥವಾ ತಡವಾಗಿ ಸೇವಿಸಿದರೆ ಮೆದುಳಿನ ಕಾರ್ಯಕ್ಷಮತೆಯಲ್ಲಿ ಕುಂಠಿತವಾಗಿ ಸುಸ್ತು ಆವರಿಸುತ್ತದೆ.

ವಾರಾಂತ್ಯದಲ್ಲಿ ಹೆಚ್ಚು ಮಲಗಿದ್ದಿರೇ?

ವಾರಾಂತ್ಯದಲ್ಲಿ ಹೆಚ್ಚು ಮಲಗಿದ್ದಿರೇ?

ನಗರ ಜೀವನದಲ್ಲಿ ಎಲ್ಲರೂ ಒಪ್ಪಿಕೊಂಡ ದಿನಚರಿ ಎಂದರೆ ವಾರಾಂತ್ಯಗಳಲ್ಲಿ ರಾತ್ರಿ ತಡವಾಗಿ ಬಂದು ಮರುದಿನ ತಡವಾಗಿ ಏಳುವುದು. ಆದರೆ ನಿಸರ್ಗದ ನಿಯಮದಂತೆ ರಜಾದಿನಗಳ ಸಹಿತ ಎಲ್ಲಾ ದಿನಗಳಲ್ಲೂ ಪ್ರಾತಃಕಾಲ ಎದ್ದು ರಾತ್ರಿ ಬೇಗನೇ ಮಲಗುವುದು ಆರೋಗ್ಯಕ್ಕೆ ಉತ್ತಮವಾಗಿದೆ. ಭಾನುವಾರ ತಡವಾಗಿ ಎದ್ದ ಕಾರಣ ರಾತ್ರಿ ಬೇಗ ನಿದ್ದೆ ಬಾರದೇ ಸೋಮವಾರ ಬೆಳಿಗ್ಗೆ ಅರೆನಿದ್ದೆಯಿಂದ ಎದ್ದಾಗ ಇಡಿಯ ದಿನ ಸುಸ್ತು ಆವರಿಸಿರುತ್ತದೆ. ಇದನ್ನೇ maniac monday ಎಂದು ಕರೆಯುತ್ತಾರೆ.

ನಿತ್ಯದ ವ್ಯಾಯಾಮದಲ್ಲಿ ಚಕ್ಕರ್ ಹೊಡೆದಿದ್ದಿರೇ?

ನಿತ್ಯದ ವ್ಯಾಯಾಮದಲ್ಲಿ ಚಕ್ಕರ್ ಹೊಡೆದಿದ್ದಿರೇ?

ವ್ಯಾಯಾಮ ಮಾಡುವುದು ಅತ್ಯಂತ ಉತ್ತಮವಾದ ಅಭ್ಯಾಸ. ಆದರೆ ಈ ಅಭ್ಯಾಸ ಪ್ರತಿದಿನವೂ ಇರಬೇಕು. ಇದಕ್ಕೆ ಅತಿ ಅನಿವಾರ್ಯ ಕಾರಣಗಳಿಲ್ಲದೇ ರಜೆ ನೀಡಬಾರದು. ಉಸಿರಾಟಕ್ಕೆ ನಾವು ರಜೆ ನೀಡುತ್ತೇವೆಯೇ? ಒಂದು ವೇಳೆ ರಜೆ ನೀಡಿದರೆ ಸೋಮಾರಿಯಾಗುವ ಶರೀರ ಮತ್ತೆ ಆ ಚಟುವಟಿಕೆಗೆ ಮರಳಲು ತಗಾದೆ ತೆಗೆಯುತ್ತದೆ. ಆದ್ದರಿಂದ ನಿಮ್ಮ ನಿತ್ಯದ ವ್ಯಾಯಾಮದ ಅಭ್ಯಾಸಗಳನ್ನು ರಜಾದಿನಗಳಲ್ಲೂ ಮುಂದುವರೆಸಿ. ಅನಿವಾರ್ಯ ಕಾರಣಗಳಿಂದ ವ್ಯಾಯಾಮ ಮಾಡಲು ಸಮಯವಿಲ್ಲದಿದ್ದರೆ ಅಥವಾ ಪ್ರಯಾಣದ ಮೇಲಿದ್ದರೆ ಸಾಧ್ಯವಾದಷ್ಟು ನಡೆದಾದರೂ ಆ ವ್ಯಾಯಾಮವನ್ನು ಪೂರ್ಣಗೊಳಿಸಲು ಯತ್ನಿಸಿ.

ನಿಮ್ಮ ಕೆಲಸದ ಸ್ಥಳ ಅಸ್ತವ್ಯಸ್ತವಾಗಿದೆಯೇ

ನಿಮ್ಮ ಕೆಲಸದ ಸ್ಥಳ ಅಸ್ತವ್ಯಸ್ತವಾಗಿದೆಯೇ

ನಮ್ಮ ಕೆಲಸದ ಸ್ಥಳದಲ್ಲಿ ಹತ್ತು ಹಲವಾರು ಕಾಗದಗಳು, ಪರಿಕರಗಳು, ಸಾಧನಗಳು ಇರುತ್ತವೆ. ಇವೆಲ್ಲವೂ ಒಂದಲ್ಲ ಒಂದು ಸಮಯಕ್ಕೆ ಬೇಕಾಗುವಂತಹವೇ, ಆದರೆ ಈ ಸಮಯದಲ್ಲಿ ಅಗತ್ಯವಿಲ್ಲದಂತಹವು. ಈ ಅಸ್ತವ್ಯಸ್ತತೆಯನ್ನು ನೋಡಿದಾಕ್ಷಣ ಮನ ಮುದುಡಿ ಇಡಿಯ ದಿನದ ಸಂತೋಷವನ್ನು ಹಾಳುಮಾಡುತ್ತದೆ. ಇದಕ್ಕಾಗಿ ನಿಮ್ಮ ಕೆಲಸದ ಸ್ಥಳವನ್ನು ಸಾಧ್ಯವಾದಷ್ಟು ಅಚ್ಚುಕಟ್ಟಾಗಿಡಿ. ಅನಗತ್ಯವಾದುದನ್ನು ಯಾವುದೇ ಮುಲಾಜಿಲ್ಲದೇ ಕಸದ ಬುಟ್ಟಿಗೆ ಸೇರಿಸಿ. ನಾಳೆಗೆ ಅಗತ್ಯವಿದೆ ಎಂಬುದನ್ನು ಅಚ್ಚುಕಟ್ಟಾಗಿ ನಿಮಗೆ ಎದ್ದು ಕಾಣುವಂತೆ ಜೋಡಿಸಿ. ಈ ಹೊತ್ತಿಗೆ ಅಗತ್ಯವಾದ ವಸ್ತುಗಳು ಮಾತ್ರ ಕೈಗೆಟುಕುವಂತಿರಲಿ. ಕುರ್ಚಿಯ ಬೆನ್ನಿನ ಭಾಗ ತುಂಬಾ ಹಿಂದೆ ಹೋಗಿದ್ದರೆ ಬೆನ್ನುಮೂಳೆ ನೆಟ್ಟಗಿರುವಂತೆ ಮಾರ್ಪಾಡಿಸಿ. ಸಾಧ್ಯವಾದರೆ ನಿಮ್ಮ ಕಣ್ಣಿಗೆ ಕಾಣುವಂತೆ ಹೂಗುಚ್ಛ ಅಥವಾ ಮನಿಪ್ಲಾಂಟ್ ನ ಚಿಕ್ಕ ಬಳ್ಳಿಯೊಂದನ್ನು ಇಡಿ. ಈ ಬದಲಾವಣೆಯನ್ನು ಗಮನಿಸಿದ ಸಹೋದ್ಯೋಗಿಗಳು ನೀಡುವ ಟೀಕೆ ಮತ್ತು ಪ್ರಶಂಸೆಯನ್ನು ಸಮನಾಗಿ ಸ್ವೀಕರಿಸಿ. ಮುಖ್ಯವಾಗಿ, ದಿನದ ಅವಧಿ ಕಳೆದ ಬಳಿಕ ಮನೆಗೆ ಹೋಗುವ ಮುನ್ನ ಬೆಳಗ್ಗಿದ್ದಷ್ಟೇ ಅಚ್ಚುಕಟ್ಟಾಗಿ ಜೋಡಿಸಿಯೇ ತೆರಳಿ.

English summary

Reasons Why You Are Always Tired

If you are not feeling energetic, then you must find the reasons you are always tired. Most of us seldom pay attention to some minor aspects of lifestyle but they play an important role in keeping us energetic.
X
Desktop Bottom Promotion