For Quick Alerts
ALLOW NOTIFICATIONS  
For Daily Alerts

ಮೊಡವೆಯ ಸಮಸ್ಯೆಗೆ ಗುಲಾಬಿ ನೀರಿನ ನಲ್ಮೆಯ ಆರೈಕೆ

By Manu
|

ಹದಿಹರೆಯದಲ್ಲಿ ಮೊಡವೆಗಳು ಅತಿಹೆಚ್ಚಾಗಿ ಕಾಟ ನೀಡುತ್ತವೆ. ಪ್ರಮುಖವಾಗಿ ಕೆನ್ನೆ, ಗಂಟಲು, ಬೆನ್ನು, ಭುಜ, ಮೇಲ್ತೋಳು, ಎದೆಯ ಮೇಲ್ಭಾಗದಲ್ಲಿ ಇವು ಕಾಣಿಸಿಕೊಳ್ಳುತ್ತವೆ. ಕೊಂಚ ತುರಿಕೆಯನ್ನೂ ತರಿಸುವ ಈ ಮೊಡವೆಗಳು ಒಣಗಿದ ಬಳಿಕ ಶಾಶ್ವತವಾದ ಕಲೆಗಳನ್ನೂ ಉಳಿಸಿ ಹೋಗುತ್ತವೆ. ಮೊಡವೆಗಳು ಏಕಾಗಿ ಹದಿಹರೆಯದಲ್ಲಿಯೇ ಬರುತ್ತವೆ ಎಂಬುದಕ್ಕೆ ಖಚಿತವಾದ ಉತ್ತರವಿಲ್ಲವಾದರೂ ಸ್ಥೂಲವಾಗಿ ಹೇಳಬೇಕೆಂದರೆ ಈ ವಯಸ್ಸಿನಲ್ಲಿ ದೇಹದಲ್ಲಿ ಸ್ರವಿಸುವ ಹಾರ್ಮೋನುಗಳು ಪ್ರಮುಖ ಪಾತ್ರ ವಹಿಸುತ್ತವೆ.

ಅಷ್ಟೇ ಅಲ್ಲ, ಗರ್ಭಾವಸ್ಥೆಯಲ್ಲಿಯೂ ಈ ತೊಂದರೆ ಕಾಡುತ್ತದೆ. ನಿಮ್ಮ ಆಹಾರದಲ್ಲಿ ಚಾಕಲೇಟು, ಎಣ್ಣೆಜಿಡ್ಡಿನ ಪದಾರ್ಥಗಳು ಹೆಚ್ಚಿದ್ದಷ್ಟೂ ಮೊಡವೆಗಳು ಹೆಚ್ಚಾಗುವ ಸಾಧ್ಯತೆ ಹೆಚ್ಚುತ್ತದೆ, ಆದರೆ ಎಲ್ಲರಲ್ಲಿಯೂ ಹೀಗೇ ಎಂದು ಹೇಳಲಿಕ್ಕೆ ಸಾಧ್ಯವಿಲ್ಲ. ಇನ್ನೊಂದು ಪ್ರಮುಖ ಕಾರಣವೆಂದರೆ ಸ್ವಚ್ಛತೆಯ ಕೊರತೆ. ಮಾನಸಿಕ ಒತ್ತಡದಿಂದ ಮೊಡವೆಗಳು ಮೂಡುವುದಿಲ್ಲವಾದರೂ ಇರುವ ಮೊಡವೆಗಳನ್ನು ಇನ್ನಷ್ಟು ಉಲ್ಬಣಿಸಲಂತೂ ನೆರವಾಗುತ್ತದೆ.

3 Amazing Rosewater Recipes For Acne-Free Skin

ಮೊಡವೆಗಳ ಆರೈಕೆಗೆ ಗುಲಾಬಿನೀರು ಉತ್ತಮ ಆಯ್ಕೆಯಾಗಿದೆ. ಗುಲಾಬಿ ಹೂವುಗಳ ದಳಗಳನ್ನು ಭಟ್ಟಿ ಇಳಿಸಿ ಸಂಗ್ರಹಿಸಿದ ನೀರನ್ನು ಕುಡಿಯುವ ನೀರಿನಲ್ಲಿ ಮಿಶ್ರಣ ಮಾಡಿ ಈ ನೀರನ್ನು ತಯಾರಿಸಲಾಗಿರುತ್ತದೆ. ಈ ನೀರು ಉತ್ತಮ ಟೋನರ್ ಸಹಾ ಆಗಿದೆ. ಮೊಡವೆಗಳ ನಿವಾರಣೆಗೆ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿದರೆ ಉತ್ತಮ ಪರಿಣಾಮವನ್ನು ಕೆಲವೇ ದಿನಗಳಲ್ಲಿ ಕಂಡುಕೊಳ್ಳಬಹುದು.

ಮೊಡವೆಗಳು ಇನ್ನೇನು ಮೂಡುತ್ತಿವೆ ಅಥವಾ ಚಿಕ್ಕ ಗಾತ್ರದಲ್ಲಿವೆ ಎಂದಿದ್ದಾಗ ಸಮಪ್ರಮಾಣದಲ್ಲಿ ಲಿಂಬೆರಸ ಮತ್ತು ಗುಲಾಬಿ ನೀರನ್ನು ಮಿಶ್ರಣಮಾಡಿ ಈ ಮಿಶ್ರಣವನ್ನು ಹತ್ತಿಯುಂಡೆಯಲ್ಲಿ ಅದ್ದಿ ಮೊಡವೆಗಳಿರುವ ಚರ್ಮದ ಮೇಲೆ ನಾಲ್ಕಾರು ಬಾರಿ ಹಚ್ಚಿ ಒಣಗಿಸಿಕೊಳ್ಳಿ. ಅಂದರೆ ಒಂದು ಬಾರಿ ಹಚ್ಚಿ ಒಣಗಿದ ಬಳಿಕ ಇನ್ನೊಂದು ಬಾರಿಯಂತೆ ನಾಲ್ಕಾರು ಬಾರಿ ಹಚ್ಚಬೇಕು. ನಂತರ ಅರ್ಧ ಗಂಟೆ ಹಾಗೇ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಮೊಡವೆಗಳು ಒಳಗಿನಿಂದಲೇ ಕರಗುತ್ತಾ ಕ್ರಮೇಣ ಇಲ್ಲವಾಗುತ್ತವೆ. ಇದರಿಂದ ಚರ್ಮದ ಮೇಲೆ ಕಲೆಯೂ ಉಳಿಯುವುದಿಲ್ಲ.

ಒಂದು ವೇಳೆ ಮೊಡವೆಗಳು ತೀರಾ ದೊಡ್ಡದಾಗಿದ್ದು ಇನ್ನೇನು ಒಡೆಯುತ್ತವೆ ಎಂದಿದ್ದಾಗ ಅಥವಾ ಮುಟ್ಟಿದರೆ ನೋವು ಆಗುತ್ತಿದ್ದರೆ ಇನ್ನೊಂದು ವಿಧಾನ ಅನುಸರಿಸಿ. ಒಂದು ದೊಡ್ಡಚಮಚ ಹುಳಿಯಾದ ಕ್ರೀಮ್ , ಒಂದು ದೊಡ್ಡಚಮಚ ಮೊಸರು, ಒಂದು ದೊಡ್ಡಚಮಚ ಓಟ್ಸ್, ಒಂದು ದೊಡ್ಡಚಮಚ ಗುಲಾಬಿ ನೀರು ಮತ್ತು ಮೂರು ನಾಲ್ಕು ಹನಿ ಲಿಂಬೆರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಲೇಪನವನ್ನು ಮೊಡವೆಗಳಿರುವ ಚರ್ಮದ ಮೇಲೆ ದಪ್ಪನಾಗಿ ಹಚ್ಚಿ ಒಣಗಲು ಬಿಡಿ. ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ವಿಧಾನದಿಂದ ದೊಡ್ಡ ಮೊಡವೆಗಳೂ ಒಳಗಿನಿಂದ ಕರಗುತ್ತಾ ಬರುತ್ತವೆ.

ಮಧ್ಯಮ ಗಾತ್ರದ, ಅಂದರೆ ದೊಡ್ಡದಾಗಿದ್ದರೂ ಹಣ್ಣಾಗಿರದ ಮೊಡವೆಗಳ ಆರೈಕೆಗಾಗಿ ಕೊಂಚ ಗುಲಾಬಿ ನೀರು ಮತ್ತು ಮುಲ್ತಾನಿಮಿಟ್ಟಿ ಜೇಡಿಯನ್ನು ಚೆನ್ನಾಗಿ ಬೆರೆಸಿ ಲೇಪನ ತಯಾರಿಸಿ. ಈ ಲೇಪನವನ್ನು ದಪ್ಪನಾಗಿ ಮೊಡವೆಗಳಿರುವಲ್ಲಿ ಹಚ್ಚಿ ಒಣಗಲು ಬಿಡಿ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಮೊಡವೆಗಳ ಬಗ್ಗೆ ಕೆಲವು ಸೂಚನೆಗಳು
* ಎಂದಿಗೂ ಚಿವುಟಲು ಹೋಗಬೇಡಿ. ಇದರಿಂದ ಗಾಯವಾಗಿ ಒಣಗಿದ ಚರ್ಮದಲ್ಲಿ ಗಾಢವರ್ಣದ ಕಲೆ ಮೂಡುತ್ತದೆ. ಇದು ಬಹುತೇಕ ಶಾಶ್ವತವಾಗಿದೆ.
* ಎಷ್ಟೇ ಆಕರ್ಷಕವಾಗಿ ಕಂಡರೂ ಎಣ್ಣೆ, ಸಿದ್ಧ ಆಹಾರಗಳು, ಸಾಫ್ಟ್ ಡ್ರಿಂಕ್, ಅತಿ ಹೆಚ್ಚಿನ ಸಕ್ಕರೆ, ಅತಿ ಹೆಚ್ಚಿನ ಮಾಂಸಾಹಾರದ ಸೇವನೆ ಬೇಡ.
* ಮೇಕಪ್ ಇಲ್ಲದೇ ಇದ್ದರೆ ಅಥಾ ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದಷ್ಟೂ ಒಳ್ಳೆಯದು
* ಇಷ್ಟವಿಲ್ಲದಿದ್ದರೂ ಬೆಳಗ್ಗಿನ ಹೊತ್ತು ತಣ್ಣಗಿನ ಗಾಳಿಗೆ ಮುಖವೊಡ್ಡುವುದು, ಕೊಂಚ ನಡಿಗೆಯೂ ಉತ್ತಮ.
* ವಾರಕ್ಕೊಮ್ಮೆ ಸಮುದ್ರ ಸ್ನಾನ, ಇದು ಸಾಧ್ಯವಿಲ್ಲದಿದ್ದರೆ ಕೊಂಚ ಉಪ್ಪುನೀರಿನಿಂದ ಮುಖವನ್ನು ತೊಳೆದುಕೊಳ್ಳುತ್ತಾ ಇರಬೇಕು.

English summary

3 Amazing Rosewater Recipes For Acne-Free Skin

Rosewater has been proved to be phenomenal in the treatment of acne. Rose water is a flavoured water made by steeping rose petals in water. It is a great skin toner. One can apply the following mixtures made with rose water to the acne-affected areas of the skin and get relief:
Story first published: Sunday, June 5, 2016, 12:29 [IST]
X
Desktop Bottom Promotion