For Quick Alerts
ALLOW NOTIFICATIONS  
For Daily Alerts

ಕೂದಲಿನ ಸಮಸ್ಯೆಗೆ ಅತಿ ಸರಳವಾದ ಮನೆ ಮದ್ದು

By Super
|

ಇಂದು ಬಹುತೇಕ ಯುವಜನತೆ ತಲೆಕೂದಲಿಗೆ ಸಂಬಂಧಿಸಿದಂತೆ ಉದುರುವ, ಬಿಳಿ ಕೂದಲು ಮೊದಲಾದ ತೊಂದರೆಗಳಿಂದ ಬಳಲುತ್ತಿದ್ದಾರೆ. ಇಂದಿನ ದಿನಗಳಲ್ಲಿ ಹೆಚ್ಚಿರುವ ಕೆಲಸದ ಒತ್ತಡ, ಗಾಳಿಯ ಪ್ರದೂಷಣೆ, ಕೂದಲ ಸರಿಯಾದ ಆರೈಕೆಗಾಗಿ ಸಿಗದ ಸಮಯ ಮೊದಲಾದವು ಇದಕ್ಕೆ ಕಾರಣ.

ಅದರಲ್ಲೂ ಕೂದಲ ಆರೈಕೆಗಾಗಿ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ತೈಲ, ಶಾಂಪೂ, ಕಂಡೀಶನರ್ ಇನ್ನೂ ಏನೇನೋ ಸಾಧನಗಳಿವೆ. ತಂತ್ರಜ್ಞಾನದ ಸಹಾಯದಿಂದ ಈ ಸಾಧನಗಳು ನಮ್ಮ ತಲೆಗೂದಲನ್ನು ಹೇಗೆ ಸೊಂಪಾಗಿ ಉಳಿಸಿ ಬೆಳೆಸಿ ಸೌಂದರ್ಯ ವೃದ್ಧಿಸುತ್ತವೆ ಎಂಬುದನ್ನು ಚಲನಚಿತ್ರದಂತೆ ತೋರಿಸಿ ಗ್ರಾಹಕರನ್ನು ಸೆಳೆಯುತ್ತವೆ. ದುಬಾರಿ ಬೆಲೆ ತೆತ್ತು ಖರೀದಿಸಿದ ಸಾಧನದಿಂದ ನಮ್ಮ ಕೂದಲು ಜಾಹೀರಾತಿನಲ್ಲಿ ಕಂಗೊಳಿಸುತ್ತದೆ ಎಂಬ ಭ್ರಮೆಯಿಂದ ನಾವು ಇನ್ನಷ್ಟು ಕೃತಕ ರಾಸಾಯನಿಕಗಳಿಗೆ ದಾಸರಾಗುತ್ತಿದ್ದೇವೆ.

ಇದಕ್ಕಿಂತಲೂ ಉತ್ತಮ ಪರಿಣಾಮ ಬೀರುವ ಹಾಗೂ ಅಗ್ಗವೂ ಆದ ಕೆಲವು ಮನೆಯಲ್ಲಿರುವ ಆಹಾರವಸ್ತುಗಳಿಂದಲೂ ಉತ್ತಮ ಆರೈಕೆ ಪಡೆಯಬಹುದು. ಇಲ್ಲಿ ನೀಡಿರುವ ಸರಳ ವಿಧಾನಗಳಿಂದ ಕೊಂಚ ವ್ಯವಧಾನ ಮತ್ತು ಸಮಯ ಮೀಸಲಿರಿಸುವುದರಿಂದ ಕೂದಲಿಗೆ ಉತ್ತಮ ಹಾಗೂ ನೈಸರ್ಗಿಕ ಆರೋಗ್ಯ ಪಡೆಯಬಹುದು.

ನೀರುಳ್ಳಿ ಮತ್ತು ಬೆಳ್ಳುಳ್ಳಿ

ನೀರುಳ್ಳಿ ಮತ್ತು ಬೆಳ್ಳುಳ್ಳಿ

ಕೂದಲ ಬುಡದಿಂದ ಕೂದಲನ್ನು ಬೆಳೆಸಲು ಕೊಲಾಜೆನ್ ಎಂಬ ಪೋಷಕಾಂಶ ಅಗತ್ಯ. ಕೊಲಾಜೆನ್ ಪೋಷಕಾಂಶವನ್ನು ಹೆಚ್ಚಾಗಿ ಪಡೆಯಲು ಗಂಧಕ ಹೆಚ್ಚಿರುವ ಪ್ರಸಾದನಗಳು ಬೇಕು. ನೀರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಗಂಧಕದ ಅಂಶ ನೈಸರ್ಗಿಕವಾಗಿ ಹೆಚ್ಚಿದ್ದು ಕೂದಲ ಪೋಷಣೆಗೆ ಸಹಕರಿಸುತ್ತವೆ. ಬಹಳ ಹಿಂದಿನಿಂದಲೂ ಕೂದಲ ಆರೈಕೆಗಾಗಿ ಭಾರತದಲ್ಲಿ ಇವು ಬಳಸಲ್ಪಡುತ್ತಿವೆ.

ವಿಧಾನ: ಒಂದು ನೀರುಳ್ಳಿಯನ್ನು ಚಿಕ್ಕದಾಗಿ ಕೊಚ್ಚಿ ತೆಳುವಾದ ಬಟ್ಟೆಯಲ್ಲಿ ಹಿಂಡಿ ರಸ ತೆಗೆದಿಟ್ಟುಕೊಳ್ಳಬೇಕು.ಇನ್ನೊಂದು ಚಿಕ್ಕ ಪಾತ್ರೆಯಲ್ಲಿ ಬೆಳ್ಳುಳ್ಳಿಯ ಎಸಳುಗಳನ್ನು ಜಜ್ಜಿ ಕೊಬ್ಬರಿ ಎಣ್ಣೆಯಲ್ಲಿ ಚಿಕ್ಕ ಉರಿಯಲ್ಲಿ ಸ್ವಲ್ಪ ಕೆಂಪಗಾಗುವವರೆಗೆ ಕುದಿಸಬೇಕು. ಈ ಎಣ್ಣೆ ತಣ್ಣಗಾಗಲು ಬಿಡಿ. ಸ್ನಾನಕ್ಕೂ ಒಂದು ಅಥವಾ ಒಂದೂವರೆ ಗಂಟೆ ಮೊದಲು ನೀರುಳ್ಳಿ ರಸವನ್ನು ತಲೆಗೆ ಹಚ್ಚಿ ಹದಿನೈದು ನಿಮಿಷಗಳ ಕಾಲ ಒಣಗಲು ಬಿಡಿ. ಬಳಿಕ ಶುದ್ಧ ನೀರಿನಿಂದ ಅಥವಾ ಸೌಮ್ಯವಾದ ಶಾಂಪೂವಿನಿಂದ ತಲೆಯನ್ನು ಸ್ವಚ್ಛವಾಗಿ ತೊಳೆದುಕೊಳ್ಳಿರಿ. ಕೂದಲು ಚೆನ್ನಾಗಿ ಒರೆಸಿಕೊಂಡು ಈಗ ತಣ್ಣಗಾಗಿರುವ ಬೆಳ್ಳುಳ್ಳಿ, ಕೊಬ್ಬರಿ ಎಣ್ಣೆಯ ಮಿಶ್ರಣವನ್ನು ತಲೆಗೆ ನಯವಾಗಿ ಮಸಾಜ್ ಮಾಡುತ್ತಾ ಹಚ್ಚಿಕೊಳ್ಳಿ. ಇಡಿಯ ತಲೆಗೆ ಎಣ್ಣೆ ಹಚ್ಚಿದ ಬಳಿಕವೂ ನಯವಾಗಿ ಮಸಾಜ್ ಮಾಡುತ್ತಾ ಬನ್ನಿ. ಸುಮಾರು ಮುಕ್ಕಾಲರಿಂದ ಒಂದು ಘಂಟೆ ಬಿಟ್ಟು ಸೌಮ್ಯ ಶಾಂಪೂವಿನಿಂದ ತಲೆ ಸ್ನಾನ ಮಾಡಿಕೊಳ್ಳಿ. ವಾರಕ್ಕೆ ಮೂರು ಬಾರಿ ಈ ವಿಧಾನವನ್ನು ಅನುಸರಿಸುವುದರಿಂದ ಉತ್ತಮ ಪರಿಣಾಮವನ್ನು ಪಡೆಯಬಹುದು.

 ಮದರಂಗಿ ಮತ್ತು ಸಾಸಿವೆ ಎಣ್ಣೆ

ಮದರಂಗಿ ಮತ್ತು ಸಾಸಿವೆ ಎಣ್ಣೆ

ತುಂಬಾ ಹಿಂದಿನಿಂದಲೂ ಮದರಂಗಿಯನ್ನು ಕೂದಲಿಗೆ ಬಣ್ಣ ನೀಡಲು ಹಾಗೂ ಆರೈಕೆಗಾಗಿ ಬಳಸಲಾಗುತ್ತಿದೆ. ಮದರಂಗಿಯನ್ನು ಸಾಸಿವೆ ಎಣ್ಣೆಯೊಂದಿಗೆ ಬಳಸಿದಾಗ ಇನ್ನಷ್ಟು ಉತ್ತಮ ಪರಿಣಾಮ ಕಂಡುಬಂದಿದೆ.

ವಿಧಾನ 1: ಸುಮಾರು 250ಮಿ.ಲೀ ಸಾಸಿವೆ ಎಣ್ಣೆಗೆ ಅರವತ್ತು ಗ್ರಾಂ (ಚೆನ್ನಾಗಿ ತೊಳೆದು ಬಿಸಿಲಲ್ಲಿ ಒಣಗಿಸಿದ) ಒಣ ಮದರಂಗಿ ಎಲೆಗಳನ್ನು ಹಾಕಿ ಕುದಿಸಿ. ಈ ಎಲೆಗಳು ಕುದೆ ಎಣ್ಣೆಯಲ್ಲಿ ಕರಗಿ ಹೋಗುವವರೆಗೂ ಕುದಿಸಿ ತಣಿಸಿ. ತಣಿದ ಎಣ್ಣೆಯಿಂದ ಕರಗಿದ ಮದರಂಗಿ ಪುಡಿಯನ್ನು ಮಸ್ಲಿನ್ ಅಥವಾ ಅತಿಚಿಕ್ಕ ಕಿಂಡಿಗಳಿರುವ ನೈಲಾನ್ ಬಟ್ಟೆಯಿಂದ ಸೋಸಿ ಗಾಳಿಯಾಡದ ಜಾಡಿ ಅಥವಾ ಬಾಟಲಿಯಲ್ಲಿ ಮುಚ್ಚಿಡಿ. ಈ ಎಣ್ಣೆಯನ್ನು ಪ್ರತಿದಿನ ಕೂದಲ ಬುಡಕ್ಕೆ ಮಸಾಜ್ ಮಾಡುತ್ತಾ ಹಚ್ಚಿಕೊಳ್ಳುವುದರಿಂದ ಉತ್ತಮ ಪರಿಣಾಮ ಪಡೆಯಬಹುದು.

ವಿಧಾನ 2: ಅರ್ಧ ಕಪ್ ಮೊಸರಿಗೆ ಒಂದು ಕಪ್ ಮದರಿಂಗಿ ಪುಡಿಯನ್ನು ಹಾಕಿ ಬೆರೆಸಿ. ಈ ಮಿಶ್ರಣವನ್ನು ತಲೆಗೂದಲಿಗೆ ಹಚ್ಚಿ ಒಣಗಲು ಬಿಡಿ. ಸುಮಾರು ಅರ್ಧ ಮುಕ್ಕಾಲು ಘಂಟೆಯ ಬಳಿಕ ತಣ್ಣನೆಯ ನೀರಿನಿಂದ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ. ವಾರದಲ್ಲಿ ಎರಡು ಮೂರು ಬಾರಿ ಹಚ್ಚುವುದರಿಂದ ಉತ್ತಮ ಪರಿಣಾಮ ಪಡೆಯಬಹುದು.

ದಾಸವಾಳ ಮತ್ತು ಕೊಬ್ಬರಿ ಎಣ್ಣೆ

ದಾಸವಾಳ ಮತ್ತು ಕೊಬ್ಬರಿ ಎಣ್ಣೆ

ಕೇರಳದಲ್ಲಿ ಮಹಿಳೆಯರು ಉದ್ದ ಹಾಗೂ ನೈಸರ್ಗಿಕ ತಲೆಗೂದಲು ಹೊಂದಿರಲು ಅವರು ಹೆಚ್ಚಾಗಿ ಉಪಯೋಸುವ ದಾಸವಾಳ ಮತ್ತ್ತುಕೊಬ್ಬರಿ ಎಣ್ಣೆಯ ಬಳಕೆ ಎಂದು ಅರ್ಥೈಸಿಕೊಳ್ಳಬಹುದು. ದಾಸವಾಳದ ನಿಯಮಿತ ಉಪಯೋಗದಿಂದ ಕೂದಲು ಬೇಗನೇ ಬಿಳಿಯಾಗುವುದನ್ನು, ತಲೆಹೊಟ್ಟು ಬರುವುದನ್ನು ಹಾಗೂ ಉದುರುವಿಕೆಯನ್ನು ತಡೆಗಟ್ಟಬಹುದು.

ವಿಧಾನ: ದಾಸವಾಳ ಹೂವಿನ ಎಸಳುಗಳನ್ನು ಜಜ್ಜಿ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಯಲ್ಲಿ ಚಿಕ್ಕ ಉರಿಯಲ್ಲಿ ಚೆನ್ನಾಗಿ ಕುದಿಸಿ ತಣಿಸಿಟ್ಟುಕೊಳ್ಳಬೇಕು. ತಣಿದ ಈ ಎಣ್ಣೆಯ ಮಿಶ್ರಣವನ್ನು ತಲೆಗೂದಲ ಬುಡಕ್ಕೆ ಹಚ್ಚಿ ನಯವಾಗಿ ಮಸಾಜ್ ಮಾಡಿಕೊಳ್ಳಬೇಕು. ಸುಮಾರು ಮೂರರಿಂದ ನಾಲ್ಕು ಘಂಟೆಗಳ ಬಳಿಕ ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಉಪಯೋಗಿಸಿ ತೊಳೆದುಕೊಳ್ಳಬೇಕು.

ನೆಲ್ಲಿಕಾಯಿ ಮತ್ತು ಲಿಂಬೆ

ನೆಲ್ಲಿಕಾಯಿ ಮತ್ತು ಲಿಂಬೆ

ನೆಲ್ಲಿಕಾಯಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟುಗಳಿವೆ. ಆಹಾರದ ಮೂಲ ಹೊಟ್ಟೆಗೆ ಸೇವಿಸುವುದರಿಂದ ಈ ಪೋಷಕಾಂಶಗಳು ರಕ್ತಕ್ಕೆ ಪೂರೈಕೆಯಾಗಿ ದೇಹದ ಆರೋಗ್ಯವನ್ನು ವೃದ್ಧಿಸುವುದಲ್ಲದೇ ಕೂದಲಿಗೂ ಒಳಗಿನಿಂದ ಆರೈಕೆ ನೀಡುತ್ತವೆ.

ವಿಧಾನ: ನೆಲ್ಲಿಕಾಯಿಯನ್ನು ಜಜ್ಜಿ ರಸವನ್ನು ಹಿಂಡಿ ಇಟ್ಟುಕೊಳ್ಳಬೇಕು. ಮಾರುಕಟ್ಟೆಯಲ್ಲಿ ದೊರಕುವ ನೆಲ್ಲಿಕಾಯಿಯ ಪುಡಿಯನ್ನೂ ಉಪಯೋಗಿಸಬಹುದು. ಎರಡು ಚಮಚ ರಸಕ್ಕೆ ಎರಡು ಚಮಚ ಈಗಷ್ಟೇ ಹಿಂಡಿದ ಲಿಂಬೆರಸವನ್ನು ಬೆರೆಸಿ ಬೆರಳುಗಳಿಂದ ನಯವಾಗಿ ಕೂದಲ ಬುಡಕ್ಕೆ ಮಸಾಜ್ ಮಾಡುತ್ತಾ ಹಚ್ಚಿಕೊಳ್ಳಬೇಕು. ಇಡಿಯ ತಲೆಗೆ ಹಚ್ಚಿಕೊಂಡಾದ ಬಳಿಕ ಒಂದು ಘಂಟೆ ಕಾಲ ಒಣಗಲು ಬಿಟ್ಟು ಬಳಿಕ ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂವಿನಿಂದ ತೊಳೆದುಕೊಳ್ಳಬೇಕು.

ಮೊಟ್ಟೆ ಮತ್ತು ಆಲಿವ್ ಎಣ್ಣೆ

ಮೊಟ್ಟೆ ಮತ್ತು ಆಲಿವ್ ಎಣ್ಣೆ

ಮೊಟ್ಟೆಯಲ್ಲಿ ಸತು, ಕಬ್ಬಿಣ, ಗಂಧಕ, ಐಯೋಡಿನ್, ಸಿಲಿನಿಯಂ ಮತ್ತು ರಂಜಕವಿದೆ. ಈ ಖನಿಜಗಳು ಕೂದಲಿನ ಆರೈಕೆ ಹಾಗೂ ಹೊಸ ಕೂದಲು ಬರಲು ಅವಶ್ಯವಾಗಿವೆ.

ವಿಧಾನ: ಒಂದು ಮೊಟ್ಟೆಯ ಬಿಳಿಯಭಾಗವನ್ನು ಪ್ರತ್ಯೇಕಿಸಿ ಒಂದು ದೊಡ್ಡ ಚಮಚ ಆಲಿವ್ ಎಣ್ಣೆಯೊಂದಿಗೆ ಚೆನ್ನಾಗಿ ಬೆರೆಸಬೇಕು. ಮೊಟ್ಟೆಯ ಬಿಳಿಭಾಗದ ಸಾಂದ್ರತೆಗೆ ಅನುಗುಣವಾಗಿ ಆಲಿವ್ ಎಣ್ಣೆಯನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು. ಈ ಮಿಶ್ರವಣವನ್ನು ಕೂದಲ ಬುಡಕ್ಕೆ ಹಾಗೂ ತಲೆಗೂದಲ ಉದ್ದಕ್ಕೂ ಹೆಚ್ಚಿ ಸುಮಾರು ಇಪ್ಪತ್ತು ನಿಮಿಷ ಬಿಟ್ಟು ಸೌಮ್ಯ ಶಾಂಪೂ ಉಪಯೋಗಿಸಿ ತಲೆ ತೊಳೆದುಕೊಳ್ಳಬೇಕು.

ಹರಳೆಣ್ಣೆ

ಹರಳೆಣ್ಣೆ

ಕಳೆದು ಹೋದ ಕೂದಲು ಮತ್ತೆ ಹುಟ್ಟಿ ಬರಲು ಹಾಗೂ ಇರುವ ಕೂದಲು ಉದುರದಂತೆ ತಡೆಯಲು ಹರಳೆಣ್ಣೆ ಉಪಯುಕ್ತವಾಗಿದೆ.

ವಿಧಾನ:ಎಂಟು ಚಮಚ ಹರಳೆಣ್ಣೆಗೆ ಒಂದು ಚಮಚ ಲಿಂಬೆ ರಸವನ್ನು ಬಾಟಲಿಯಲ್ಲಿ ಹಾಕಿ ಚೆನ್ನಾಗಿ ಅಲುಗಾಡಿಸಬೇಕು. ಈ ಮಿಶ್ರಣವನ್ನು ಕೂದಲ ತುದಿಗೆ ಹಚ್ಚಿ ಕೂದಲ ಬುಡಕ್ಕೆ ಎರಡು ನಿಮಿಷ ನಯವಾಗಿ ಮಸಾಜ್ ಮಾಡಿಕೊಳ್ಳಬೇಕು. ಸುಮಾರು ಹದಿನೈದು ನಿಮಿಷದ ಬಳಿಕ ತಣ್ಣೀರು ಮತ್ತು ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಬೇಕು. ಪ್ರತಿದಿನ ಈ ವಿಧಾನ ಅನುಸರಿಸುವುದರಿಂದ ಕೂದಲಿಗೆ ಉತ್ತಮ ಆರೈಕೆ ದೊರಕುತ್ತದೆ. ಈ ಮಿಶ್ರಣ ಬಿಸಿಲಿನಲ್ಲಿ ರಾಸಾಯನಿಕ ಪ್ರತಿಕ್ರಿಯೆ ಪಡೆಯುವುದರಿಂದ ಬಿಸಿಲಿನಿಂದ ದೂರವಿಡಬೇಕು. ಆದಷ್ಟು ಮಟ್ಟಿಗೆ ಆಯಾ ದಿನಕ್ಕೆ ಅಗತ್ಯವಿದ್ದಷ್ಟು ಪ್ರಮಾಣವನ್ನು ಅಂದೇ ಮಿಶ್ರಣ ಮಾಡಿಕೊಂಡು ಉಪಯೋಗಿಸಿವುದು ಉತ್ತಮ.

ತೆಂಗಿನ ಹಾಲು, ಬೆಣ್ಣೆಹಣ್ಣು ಮತ್ತು ಲಿಂಬೆರಸ

ತೆಂಗಿನ ಹಾಲು, ಬೆಣ್ಣೆಹಣ್ಣು ಮತ್ತು ಲಿಂಬೆರಸ

ಆಯುರ್ವೇದದಲ್ಲಿ ಬಳಸಲಾಗಿರುವ ಈ ವಿಧಾನದಿಂದ ಕೂದಲು ಉದುರುವುದು ಕಡಿಮೆಯಾಗಿ ಕೂದಲಿಗೆ ನೈಸರ್ಗಿಕ ಆರೈಕೆ ದೊರಕುತ್ತದೆ.

ವಿಧಾನ: ಬೆಣ್ಣೆಹಣ್ಣಿನ ಅರ್ಧಭಾಗದ ತಿರುಳನ್ನು ತೆಗೆದು ನಾಲ್ಕು ಚಮಚ ತೆಂಗಿನ ಹಾಲಿನೊಂದಿಗೆ ಬೆರೆಸಬೇಕು. ಬಳಿಕ ಆಗಷ್ಟೇ ಹಿಂಡಿದ ಎರಡು ಚಮಚ ಲಿಂಬೆರಸವನ್ನು ಸೇರಿಸಿ ಮಿಕ್ಸಿಯಲ್ಲಿ ಹದಿನೈದು ಸೆಕೆಂಡುಗಳ ಕಾಲ ಗೊಟಾಯಿಸಬೇಕು. ಈ ಮಿಶ್ರಣವನ್ನು ಕೂದಲ ಬುಡಕ್ಕೆ ನಯವಾಗಿ ಮಸಾಜ್ ಮಾಡುತ್ತಾ ಹಚ್ಚಿ ಸುಮಾರು ಮೂವತ್ತು ನಿಮಿಷಗಳ ಕಾಲ ಒಣಗಲು ಬಿಡಬೇಕು. ಬಳಿಕ ಸೌಮ್ಯ ಶಾಂಪೂ ಉಪಯೋಗಿಸಿ ಉಗುರುಬೆಚ್ಚನೆಯ ನೀರಿನಲ್ಲಿ ತೊಳೆದುಕೊಳ್ಳಬೇಕು. ಉಳಿದ ಮಿಶ್ರಣವನ್ನು ಗಟ್ಟಿಯಾಗಿ ಮುಚ್ಚಿ ಫ್ರಿಜ್ ನಲ್ಲಿಟ್ಟು ಉಪಯೋಗಿಸಬಹುದು. ಆದರೆ ಪ್ರತಿಬಾರಿ ಹೊಸದಾಗಿ ಮಿಶ್ರಣ ಮಾಡಿದ ಲೇಪನವನ್ನು ಬಳಸುವುದು ಒಳ್ಳೆಯದು.

English summary

Home remedies for all your hair problems!

Hair is our crowning glory but due to factors like stress, pollution, improper care, etc, it can be damaged easily. In order to take care of your mane in a natural way, make use of home remedies like amla, egg, onion, etc and get rid of any hair problem you have. Here is our mega guide for common hair problems like hair loss, dandruff, grey hair and more. Read on…
X
Desktop Bottom Promotion