For Quick Alerts
ALLOW NOTIFICATIONS  
For Daily Alerts

ಕಲೆರಹಿತ ಕಾಂತಿಯುಕ್ತ ತ್ವಚೆಗಾಗಿ ಖರ್ಬೂಜ ಹಣ್ಣಿನ ಫೇಸ್ ಪ್ಯಾಕ್!

By Super
|

ನಮ್ಮ ದೇಹದ ಹೊರಭಾಗವಾದ ತ್ವಚೆ ಎಲ್ಲಾ ಕಡೆಗಳಲ್ಲಿ ಏಕಪ್ರಕಾರವಾಗಿಲ್ಲ. ಹಸ್ತ, ಪಾದ ಮೊದಲಾದೆಡೆ ದಪ್ಪನಾಗಿದ್ದರೆ ಬೆರಳ ತುದಿ, ಕಿವಿ, ಮೂಗಿನ ಒಳಭಾಗ ಮೊದಲಾದೆಡೆ ತೆಳುವಾಗಿರುತ್ತದೆ. ಕೆಲವು ಭಾಗಗಳಲ್ಲಿ ಕೂದಲು ದಟ್ಟವಾಗಿದ್ದರೆ ಕೆಲವು ಭಾಗಗಳಲ್ಲಿ ಕೂದಲು ಬೆಳೆಯುವುದೇ ಇಲ್ಲ.

ಕೆಲವು ಭಾಗಗಳಲ್ಲಿ (ಉದಾಹರಣೆಗೆ ಕೆನ್ನೆ) ರಕ್ತನಾಳಗಳು ಹೆಚ್ಚು ಒತ್ತೊತ್ತಾಗಿದ್ದರೆ (ನಾಚಿಕೆಯಾದಾದ ರಕ್ತ ನುಗ್ಗಿ ಕೆನ್ನೆ ಕೆಂಪಾಗುವುದು ಇದೇ ಕಾರಣಕ್ಕೆ) ಕೆಲವೆಡೆ ದೂರದೂರವಾಗಿರುತ್ತದೆ.ಆದ್ದರಿಂದ ಚರ್ಮದ ಆರೈಕೆಯೂ ಎಲ್ಲಾ ಕಡೆ ಏಕಪ್ರಕಾರವಾಗಿ ನೀಡುವಂತಿಲ್ಲ. ಚರ್ಮದಲ್ಲಿ ಅಗತ್ಯವಾದ ಪೋಷಕಾಂಶಗಳು ಮತ್ತು ಆರ್ದ್ರತೆ ಇದ್ದರೆ ಸೂಕ್ತವಾದ ಸೆಳೆತದಿಂದಾಗಿ ಕಾಂತಿಯುಕ್ತವಾಗಿ ಆರೋಗ್ಯಕರವಾಗಿರುತ್ತದೆ.

Musk Melon Body Scrub

ವಿಚಿತ್ರವೆಂದರೆ ನಮ್ಮ ಚರ್ಮಕ್ಕೆ ಅಗತ್ಯವಾದ ಆರ್ದ್ರತೆಯನ್ನು ನೀರಿನಿಂದ ಚರ್ಮ ನೇರವಾಗಿ ಹೀರಿಕೊಳ್ಳಲಾರದು. ಬದಲಿಗೆ ಗಾಳಿಯಲ್ಲಿನ ತೇವವನ್ನು ಹೀರಿಕೊಳ್ಳಬಲ್ಲದು. ಚಳಿಗಾಲದಲ್ಲಿ ನೀರು ಒಣಗದೇ ಇರುವುದರಿಂದ ಗಾಳಿಯಲ್ಲಿ ನೀರಿನ ಪಸೆ ಇರುವುದೇ ಇಲ್ಲ. ಇದೇ ಕಾರಣಕ್ಕೆ ಚರ್ಮಕ್ಕೆ ಹೀರಿಕೊಳ್ಳಲು ಆರ್ದ್ರತೆ ಇಲ್ಲದಂತಾಗಿ ಸೊರಗುತ್ತದೆ. ಮಡಿಕೆಗಳಿರುವಲ್ಲಿ ಒಣಗಿ ಬಿಳಿಬಿಳಿಯಾದ ಗೆರೆಗಳು ಮೂಡುತ್ತವೆ. ಇದನ್ನೇ ಚಳಿಗೆ ಚರ್ಮ ಒಡೆದಿದೆ ಎನ್ನುತ್ತೇವೆ.

ಈ ತೊಂದರೆಯನ್ನು ಎದುರಿಸಲು ನಿಸರ್ಗ ನಮಗೆ ಹಲವು ಪರಿಹಾಗಳನ್ನು ನೀಡಿದೆ. ಅದರಲ್ಲಿ ಉತ್ತಮವಾದುದು ಎಂದರೆ ಬೂದುಬಣ್ಣದ ಖರ್ಬೂಜದ ಹಣ್ಣು. (Musk Melon). ಈ ಹಣ್ಣಿನ ತಿರುಳಿನಿಂದ ತಯಾರಿಸಿದ ಲೇಪನವನ್ನು ಸೂಕ್ಷ್ಮವಾದ ಕೆನ್ನೆ ಮತ್ತು ಮುಖದ ಚರ್ಮಕ್ಕೂ ಹಚ್ಚಿಕೊಳ್ಳಬಹುದು. ಈ ಹಣ್ಣಿನ ಲೇಪನದಿಂದ ಯಾವುದೇ ಅಡ್ಡಪರಿಣಾಮ ಇಲ್ಲದಿರುವುದು ಸಂಶೋಧನೆ ಮತ್ತು ಪ್ರಯೋಗಗಳಿಂದ ಸಾಬೀತಾಗಿದೆ.

ಒಡೆದ ಮತ್ತು ಸುಲಿಯುತ್ತಿರುವ ಚರ್ಮಕ್ಕೆ ಮಾರುಕಟ್ಟೆಯಲ್ಲಿ ಹಲವಾರು ಲೇಪನಗಳು ಲಭ್ಯವಿದ್ದರೂ ಅವುಗಳಲ್ಲಿ ಅಡಕವಾಗಿರುವ ರಾಸಾಯನಿಕಗಳು ಉಪಯೋಗದ ಜೊತೆಜೊತೆಗೇ ಗೊತ್ತಿಲ್ಲದ ಹಾನಿಯನ್ನೂ ತರಬಹುದು. ಇದಕ್ಕಾಗಿ ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದಾದ ಈ ಮುಖಲೇಪಗಳನ್ನು ಬಳಸಿ ಕಾಂತಿಯುಕ್ತ ಮತ್ತು ಆರೋಗ್ಯಕರ ತ್ವಚೆಯನ್ನು ಪಡೆಯಬಹುದು.

ಮಾವಿನ ಹಣ್ಣು ಮತ್ತು ಕಲ್ಲಂಗಡಿ ಹಣ್ಣಿನಂತೆಯೇ ಖರ್ಬೂಜ ದ ಹಣ್ಣಿನಲ್ಲಿಯೂ ವಿಟಮಿನ್ ಎ, ಡಿ ಮತ್ತು ಸಿ ಹೇರಳವಾಗಿದೆ. ಖನಿಜಗಳಾದ ಫಾಸ್ಪರಸ್, ಕ್ಯಾಲ್ಸಿಯಂ, ಮೆಗ್ನೀಶಿಯಂ ಮತ್ತು ಪೊಟ್ಯಾಶಿಯಂ ಹೆಚ್ಚಿನ ಪ್ರಮಾಣದಲ್ಲಿದ್ದು ಚರ್ಮದ ಆರೈಕೆಗೆ ನೆರವಾಗುತ್ತವೆ. ಅಗ್ಗವಾಗಿ ಮತ್ತು ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದಾದ ಕೆಲವು ಲೇಪನಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಬೂದು ಖರ್ಬೂಜದ ಹಣ್ಣು ಮತ್ತು ಜೇಡಿಮಣ್ಣಿನ ಲೇಪನ
ಅಗತ್ಯ ಪ್ರಮಾಣದಲ್ಲಿ ಖರ್ಬೂಜ ದ ಹಣ್ಣಿನ ತಿರುಳನ್ನು ಕೊಂಚ ಜೇಡಿಮಣ್ಣು (fuller's earth) ಸೇರಿಸಿ ಲೇಪನ ತಯಾರಿಸಿ. ಜೇಡಿಮಣ್ಣು ಸಿಗದಿದ್ದರೆ ಉಪ್ಪನ್ನು ಸಹಾ ಉಪಯೋಗಿಸಬಹುದು. (ಹರಳುಪ್ಪು). ಈ ಲೇಪನವನ್ನು ಮುಖ, ಕುತ್ತಿಗೆ, ಕೈ ಕಾಲುಗಳಿಗೆ ಹಚ್ಚಿ ಸುಮಾರು ಇಪ್ಪತ್ತರಿಂದ ಮೂವತ್ತು ನಿಮಿಷ ಒಣಗಲು ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸದಿರುವುದು ಮೇಲು. ಈ ಲೇಪನದಿಂದ ಚರ್ಮ ಆರ್ದ್ರತೆ ಮತ್ತು ಅಗತ್ಯವಾದ ಪೋಷಕಾಂಶಗಳನ್ನು ಹೀರಿಕೊಂಡು ಕಾಂತಿಯುಕ್ತವಾಗುತ್ತದೆ ಮತ್ತು ನೆರಿಗೆಗಳೂ ಮಾಯವಾಗುತ್ತದೆ. ಒಣ ಚರ್ಮಕ್ಕೆ ಉಪ್ಪಿನ ಸ್ಕ್ರಬ್ ರೆಸಿಪಿ

ಒಂದು ವೇಳೆ ಚರ್ಮ ಚಳಿಯಿಂದಾಗಿ ಅಥವಾ ಬೇರೆ ಕಾರಣದಿಂದ ಹೆಚ್ಚಾಗಿ ಒಡೆದಿದ್ದರೆ ಜೇಡಿಮಣ್ಣಿನ ಬದಲು ಕಂದು ಸಕ್ಕರೆ (ಬೆಲ್ಲದ ಸಕ್ಕರೆ ರೂಪ) ಯನ್ನು ಸೇರಿಸಿ ಹಚ್ಚಿಕೊಳ್ಳಬಹುದು. ಈ ಲೇಪನದಿಂದ ಸತ್ತ ಜೀವಕೋಶಗಳು ನಿವಾರಣೆಯಾಗಿ ಹೊಸ ಜೀವಕೋಶಗಳು ಬೆಳೆಯಲು ಅನುಕೂಲವಾಗುತ್ತದೆ. ಒಡೆದ ಚರ್ಮ ಕಾಣೆಯಾಗುವವರೆಗೆ ಮಾತ್ರ ಈ ಲೇಪನವನ್ನು ಹಚ್ಚಬೇಕು.

ಬೂದು ಖರ್ಬೂಜ, ಜೇನು ಮತ್ತು ಲ್ಯಾವೆಂಡರ್ ಹೂವಿನ ಎಣ್ಣೆ
ಎಂಟು ಪ್ರಮಾಣದ ಖರ್ಬೂಜ ದ ತಿರುಳಿಗೆ ಒಂದು ಪ್ರಮಾಣದ ಲ್ಯಾವೆಂಡರ್ ಹೂವಿನ ಎಣ್ಣೆ ಮತ್ತು ಒಂದು ಪ್ರಮಾಣದ ಜೇನು ಸೇರಿಸಿ ಲೇಪನ ತಯಾರಿಸಿ. ಈ ಪ್ರಮಾಣ ತುಂಬಾ ನೀರಾಗುವುದರಿಂದ ಕೊಂಚ ದಟ್ಟವಾಗಿಸಲು ಮೆಕ್ಕೆಜೋಳದ ಹಿಟ್ಟು ಅಥವಾ ರವೆಯನ್ನು ಸೇರಿಸಿ (cornmeal) ಸೂಕ್ತ ಪ್ರಮಾಣದ ಹದ ಬರುವವರೆಗೆ ಮಿಕ್ಸಿಯಲ್ಲಿ ರುಬ್ಬಿ. ಈ ಲೇಪನವನ್ನು ಮುಖ, ಕೈ ಕಾಲುಗಳು, ಕುತ್ತಿಗೆಗಳಿಗೆ ಹಚ್ಚಿ ಹದಿನೈದು ನಿಮಿಷಗಳ ಕಾಲ ಹಾಗೇ ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಸೋಪು ಬಳಸದಿರಿ.

ಖರ್ಬೂಜ ಮತ್ತು ಕಿವಿ ಹಣ್ಣು
ಖರ್ಬೂಜದ ಹಣ್ಣಿನ ಅರ್ಧ ಕಪ್ ತಿರುಳಿಗೆ ಅರ್ಧ ಕಪ್ ಕಿವಿ ಹಣ್ಣಿನ ತಿರುಳನ್ನು ಕಿವುಚಿ ಲೇಪನ ತಯಾರಿಸಿ. ಇದಕ್ಕೆ ಸುಮಾರು 1/3 ಕಪ್ ದ್ರಾಕ್ಷಾ ಬೀಜದ ಎಣ್ಣೆ (grape seed oil) ಮತ್ತು 1/3 ಕಪ್ ಕಪ್ಪು ಉಪ್ಪಿನ ಪುಡಿ (lava salt) ಸೇರಿಸಿ ಚೆನ್ನಾಗಿ ಬೆರೆಸಿಕೊಳ್ಳಿ. ಈ ಲೇಪನವನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ ಇಪ್ಪತ್ತು ನಿಮಿಷ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ಲೇಪನದಿಂದ ಚರ್ಮ ಅತ್ಯಂತ ಕೋಮಲ ಮತ್ತು ಕಾಂತಿಯುಕ್ತವಾಗುತ್ತದೆ.

ಖರ್ಬೂಜ ಮತ್ತು ಸ್ಟ್ರಾಬೆರಿ ಹಣ್ಣು
ಮಧ್ಯಮ ಗಾತ್ರದ ಖರ್ಬೂಜದ ಹಣ್ಣಿನ ಕಾಲುಭಾಗದ ತಿರುಳು, ಮೂರು ಸ್ಟ್ರಾಬೆರಿ ಹೆಣ್ಣು, ಒಂದು ದೊಡ್ಡಚಮಚ ಓಟ್ಸ್, ಒಂದು ಚಿಕ್ಕ ಚಮಚ ಜೇನು ಸೇರಿಸಿ ಚೆನ್ನಾಗಿ ಬೆರೆಸಿ ಲೇಪನ ತಯಾರಿಸಿಕೊಳ್ಳಿ. ಈ ಲೇಪನವನ್ನು ಮುಖ, ಕುತ್ತಿಗೆ, ಕೈ ಕಾಲುಗಳಿಗೆ ಹಚ್ಚಿ ಸುಮಾರು ಹದಿನೈದು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಈ ಲೇಪನದ ಮೂಲಕ ಚರ್ಮ ಆರ್ದ್ರತೆ ಮತ್ತು ಪೋಷಕಾಂಶಗಳನ್ನು ಪಡೆದು ಕೋಮಲತೆ ಮತ್ತು ಕಾಂತಿಯನ್ನು ಪಡೆಯುತ್ತದೆ.

English summary

Musk Melon Body Scrub

Generally, fruits are great for your skin. Fruit scrubs are good in keeping your skin healthy and vibrant. Among these, musk melon is one such super skin-friendly fruit. Try out the following musk melon scrubs that are cheap and natural.
X
Desktop Bottom Promotion