For Quick Alerts
ALLOW NOTIFICATIONS  
For Daily Alerts

ನಿಮ್ಮ ಅಂದದ ಉಗುರಿಗೆ ಮನೆಮದ್ದಿನ ಆರೈಕೆ

By Arshad
|

ಮಹಿಳೆಯರ ಸೌಂದರ್ಯ ಮತ್ತು ಸ್ವಚ್ಛತಾಪ್ರಜ್ಞೆಯನ್ನು ಅವರ ಉಗುರುಗಳನ್ನು ನೋಡುವ ಮೂಲಕ ಕೂಡಲೇ ಅರಿತುಕೊಳ್ಳಬಹುದು. ಉಗುರುಗಳು ದೇಹದ ಆರೋಗ್ಯವನ್ನು ತಿಳಿಸುವ ಮಾಪಕವೂ ಹೌದು. ಕಳೆಗುಂದಿದ ಉಗುರುಗಳು ದೇಹದಲ್ಲಿ ಪೋಷಕಾಂಶದ ಕೊರತೆ, ವಿಟಮಿನ್ನುಗಳ ಕೊರತೆ ಅಥವಾ ಏರುಪೇರು, ವಿವಿಧ ಚರ್ಮದ ವ್ಯಾಧಿಗಳು, ಮಾದಕ ದ್ರವ್ಯಗಳ ಪ್ರಭಾವ ಮೊದಲಾದ ಸೂಚನೆಗಳನ್ನು ನೀಡಬಲ್ಲವು.

ವೈದ್ಯರು ಈ ಸೂಚನೆಗಳನ್ನು ಕಂಡ ಕೂಡಲೇ ಇಂತಹದ್ದೇ ತೊಂದರೆ ಇದೆ ಎಂದು ಅಂದಾಜಿಸಬಲ್ಲರು. ಆದ್ದರಿಂದ ಉಗುರುಗಳು ಆರೋಗ್ಯವಾಗಿ ಹೊಳಪುಳ್ಳದ್ದಿರಬೇಕಾದರೆ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ. ಉಗುರು ತುಂಡಾಗುವಿಕೆಯನ್ನು ತಡೆಯಲು ಏಳು ಸಲಹೆಗಳು

ಸೌಂದರ್ಯದ ದೃಷ್ಟಿಯಿಂದ ಉಗುರುಗಳು ಕೇವಲ ಆರೋಗ್ಯಕರವಾಗಿದ್ದರೆ ಸಾಲದು, ಕಾಲಕಾಲಕ್ಕೆ ಸುಂದರವಾಗಿ ಕತ್ತರಿಸಿಕೊಳ್ಳುವುದು, ಹೆಚ್ಚು ಉದ್ದವೂ ಇರದಂತೆ, ಹೆಚ್ಚು ಗಿಡ್ಡವೂ ಇರದಂತೆ ನೋಡಿಕೊಳ್ಳುವುದು, ಉಗುರಿನ ತಳಭಾಗದಲ್ಲಿ ಕೊಳೆ ತುಂಬಿಕೊಳ್ಳದಂತೆ ನೋಡಿಕೊಳ್ಳುವುದು ಮೊದಲಾದ ಆರೈಕೆಗಳನ್ನು ಮಾಡಬೇಕಾಗುತ್ತದೆ. ಮ್ಯಾನಿಕ್ಯೂರ್ ಎಂದೇ ಪ್ರಸಿದ್ಧವಾಗಿರುವ ಉಗುರಿನ ಆರೈಕೆ ಬ್ಯೂಟಿ ಪಾರ್ಲರುಗಳಲ್ಲಿ ಕೊಂಚ ಬೆಲೆಬಾಳುವ ಸೇವೆಯಾಗಿದ್ದು ನಿಜಕ್ಕೂ ಈ ಸೇವೆ ಉತ್ತಮ ಪರಿಣಾಮವನ್ನೇ ನೀಡುತ್ತದೆ. ನಿಮ್ಮ ಉಗುರುಗಳು ಬೇಗನೆ ಮುರಿದು ಹೋಗುತ್ತದೆಯೇ?

ಆದರೆ ದುಬಾರಿಯಾದ ಈ ಸೇವೆಯನ್ನು ಎಲ್ಲರೂ ಪಡೆಯಲು ಸಾಧ್ಯವಿಲ್ಲ. ಆದರೆ ಕೆಲವರು ಕೃತಕ ಬಣ್ಣಗಳಿಂದ ಸ್ವತಃ ಉಗುರುಗಳಿಗೆ ಸೌಂದರ್ಯ ನೀಡುವ ನಿಟ್ಟಿನಲ್ಲಿ ಪ್ರಬಲ ರಾಸಾಯನಿಕಗಳಿಗೆ ಅರಿವಿಲ್ಲದೇ ತಮ್ಮ ಉಗುರುಗಳನ್ನು ಒಡ್ಡುತ್ತಾರೆ. ಇದು ಉಗುರಿನ ನೈಜ ಹೊಳಪನ್ನು ನಿವಾರಿಸಿ ಕಳೆಗುಂದಿಸುತ್ತದೆ. ಬದಲಿಗೆ ಮನೆಯಲ್ಲಿಯೇ ಸುರಕ್ಷಿತವಾದ ಮತ್ತು ಅಲ್ಪಬೆಲೆಯ ಸಾಮಾಗ್ರಿಗಳಿಂದ ಉಗುರುಗಳಿಗೆ ಉತ್ತಮ ಆರೈಕೆಯನ್ನೂ ಹೊಳಪನ್ನೂ ಪಡೆಯಬಹುದು.

ಉಗುರುಗಳ ಪೋಷಣೆಗೆ ಈ ಮನೆಮದ್ದುಗಳು ಉತ್ತಮ ಪರಿಣಾಮವನ್ನೇ ನೀಡುತ್ತವೆ. ಕೆಳಗಿನ ಸ್ಲೈಡ್ ಶೋ ಮೂಲಕ ಹಲವು ವಿಧಾನಗಳನ್ನು ವಿವರಿಸಲಾಗಿದೆ. ಇದರಲ್ಲಿ ನಿಮಗೆ ಸೂಕ್ತವಾದುದನ್ನು ಆರಿಸಿ ನಿಮ್ಮ ಉಗುರುಗಳ ಸೌಂದರ್ಯ ಮತ್ತು ಆರೋಗ್ಯ ವರ್ಧಿಸುವುದನ್ನು ಕಣ್ಣಾರೆ ನೋಡಿ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಕೊಲೆಸ್ಟ್ರಾಲ್ ತಗ್ಗಿಸಲು ಅಪ್ರತಿಮವಾದ ಆಲಿವ್ ಎಣ್ಣೆ ಆರೋಗ್ಯಕ್ಕೆ ಹೇಗೆ ಉತ್ತಮವೋ ಹಾಗೇ ಕೂದಲು, ಚರ್ಮ ಮತ್ತು ಉಗುರುಗಳಿಗೂ ಉತ್ತಮವಾಗಿದೆ. ಉಗುರುಗಳ ಪಾಲಿಗಂತೂ ಆಲಿವ್ ಎಣ್ಣೆ ಆಪತ್ಬಾಂಧವನಾಗಿದೆ. ಆಲಿವ್ ಎಣ್ಣೆಯ ಆರ್ದ್ರತೆ ನೀಡುವ ಗುಣ ಉಗುರು ಮತ್ತು ಉಗುರಿನ ಹಿಂಭಾಗದ ಚರ್ಮಕ್ಕೆ ಆರ್ದ್ರತೆ ನೀಡುವ ಮೂಲಕ ಉಗುರ ಬುಡಕ್ಕೆ ಉತ್ತಮ ಪೋಷಣೆ ನೀಡುತ್ತದೆ. ಇದು ಉಗುರಿನ ಹೊಳಪಿಗೆ ನೆರವಾಗುತ್ತದೆ. ಇದಕ್ಕಾಗಿ ಬೆರಳ ತುದಿಗಳಿಗೆ ಕೊಂಚ ಆಲಿವ್ ಎಣ್ಣೆ ಹಚ್ಚಿ ನಯವಾಗಿ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಒಂದೊಂದಾಗಿ ಎಲ್ಲಾ ಬೆರಳುಗಳಿಗೆ ಮಸಾಜ್ ಮಾಡಿ. ಇದಕ್ಕೆ ಪ್ರತ್ಯೇಕವಾದ ಸಮಯದ ಅಗತ್ಯವಿಲ್ಲ. ಆರಾಮವಾಗಿ ಕುಳಿತಿದ್ದಾಗ ಅಥವಾ ಟೀವಿ ನೋಡುತ್ತಿದ್ದಾಗಲೂ ಅನುಸರಿಸಬಹುದು. ನಿಯಮಿತವಾಗಿ ಮಾಡುವ ಮಸಾಜ್‌ನಿಂದ ಕೆಲವೇ ದಿನಗಳಲ್ಲಿ ವ್ಯತ್ಯಾಸವನ್ನು ಮನಗಾಣುವಿರಿ.

ಬೆಣ್ಣೆ

ಬೆಣ್ಣೆ

ಉಪ್ಪು ಹಾಕದ ಬೆಣ್ಣೆ (unsalted butter) ಅಥವಾ ಮನೆಯಲ್ಲಿಯೇ ಕಡೆದ ಬೆಣ್ಣೆ ಇದ್ದರೆ ಇದನ್ನೂ ಕೊಂಚಪ್ರಮಾಣದಲ್ಲಿ ಬೆರಳುಗಳಿಂದ ಮಸಾಜ್ ಮಾಡಬಹುದು. ಸುಮಾರು ಇಪ್ಪತ್ತು ನಿಮಿಷದ ಬಳಿಕ ಉಗುರುಬೆಚ್ಚನೆಯ ನೀರನ್ನು ಬಳಸಿ ತೊಳೆದುಕೊಳ್ಳಿ. ಪ್ರತಿದಿನದ ಮಸಾಜ್ ಉತ್ತಮ ಪರಿಣಾಮ ನೀಡುತ್ತದೆ.

ಬೇಬಿ ಆಯಿಲ್

ಬೇಬಿ ಆಯಿಲ್

ಮಗುವಿನ ಮೈಗೆ ಹಚ್ಚುವ ಬೇಬಿ ಆಯಿಲ್ ಬೆರಳು ಮತ್ತು ಉಗುರುಗಳಿಗೂ ಉತ್ತಮ ಆರೈಕೆ ನೀಡುತ್ತದೆ. ಈ ಎಣ್ಣೆಯಲ್ಲಿರುವ ಆರ್ದ್ರತೆ ನೀಡುವ ಗುಣ ಉಗುರುಗಳಿಗೆ ಮತ್ತು ಉಗುರಿನ ಹಿಂಭಾಗದ ಚರ್ಮಕ್ಕೆ ಉತ್ತಮ ಪೋಷಣೆ ನೀಡುತ್ತದೆ. ಇದು ವಿಶೇಷವಾಗಿ ಬಿರುಕುಬಿಡುತ್ತಿರುವ ಅಥವಾ ಉಗುರುಗಳಲ್ಲಿ ಉದ್ದುದ್ದಕ್ಕೆ ಹಲವಾರು ಗೀರುಗಳಿದ್ದರೆ ಈ ಎಣ್ಣೆ ಉತ್ತಮ ಆಯ್ಕೆಯಾಗಿದೆ. ಯಾವಾಗಲೂ ಒಣಗಿ ಸುಲಭವಾಗಿ ಉಗುರಿನ ತುದಿ ತುಂಡಾಗುವಂತಹ ಪರಿಸ್ಥಿತಿಯಲ್ಲಿಯೂ ಈ ಎಣ್ಣೆ ಉತ್ತಮವಾದ ಪರಿಹಾರ ನೀಡುತ್ತದೆ.

ವ್ಯಾಸೆಲಿನ್

ವ್ಯಾಸೆಲಿನ್

ವ್ಯಾಸೆಲಿನ್ ಅಥವಾ ಪೆಟ್ರೋಲಿಯಂ ಜೆಲ್ಲಿ ಸಹಾ ಉತ್ತಮ ಆರ್ದ್ರತೆ ನೀಡುವುದರಿಂದ ಉಗುರುಗಳು ಉತ್ತಮ ಪೋಷಣೆ ಪಡೆಯುತ್ತವೆ.ಒಂದು ವೇಳೆ ಉಗುರುಗಳಲ್ಲಿ ಹೊಳಪು ಕಡಿಮೆಯಾಗಿ ಸವೆದಂತಿದ್ದರೆ ಇದು ಉತ್ತಮವಾದ ಆಯ್ಕೆಯಾಗಿದೆ. ಉತ್ತಮ ಪರಿಣಾಮಕ್ಕಾಗಿ ರಾತ್ರಿ ಮಲಗುವ ಮುನ್ನ ಈ ಜೆಲ್ಲಿಯನ್ನು ಹಚ್ಚಿ ಬೆಳಿಗ್ಗೆ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ವಿಟಮಿನ್ ಇ ಎಣ್ಣೆ

ವಿಟಮಿನ್ ಇ ಎಣ್ಣೆ

ಮಾರುಕಟ್ಟೆಯಲ್ಲಿ ಸಿದ್ದರೂಪದಲ್ಲಿ ದೊರಕುವ ವಿಟಮಿನ್ ಇ ಅವಶ್ಯಕ ತೈಲ ವನ್ನು ಸಹಾ ಉಗುರುಗಳ ಹೊಳಪಿಗೆ ಬಳಸಬಹುದು. ಜೊತೆಗೇ ವಿಟಮಿನ್ ಇ ಹೆಚ್ಚಿರುವ ಟೊಮಾಟೋ, ಬೆಣ್ಣೆಹಣ್ಣು ಮೊದಲಾದ ಹಣ್ಣುಗಳನ್ನು ಸೇವಿಸುವುದರಿಂದ ರಕ್ತ ಸಂಚಾರ ಉತ್ತಮಗೊಳ್ಳುವ ಜೊತೆಗೇ ವಿಟಮಿನ್ ಇ ಲಭ್ಯತೆಯಿಂದ ಉಗುರುಗಳು ದೃಢಗೊಳ್ಳುತ್ತವೆ. ಈ ಆರೈಕೆ ಕಳೆಗುಂದಿರುವ, ಬಣ್ಣಗೆಟ್ಟಿರುವ ಮತ್ತು ಸುಲಭವಾಗಿ ಉಗುರಿನ ತುದಿ ತುಂಡಾಗುವ ಸಂದರ್ಭದಲ್ಲಿ ಉತ್ತಮವಾದ ಆಯ್ಕೆಯಾಗಿದೆ. ನಿತ್ಯದ ಮಸಾಜ್ ನಿಂದ ಉಗುರುಗಳು ಹೊಳಪುಳ್ಳದ್ದಾಗಿ ದೃಢತೆಯನ್ನೂ ಪಡೆಯುತ್ತವೆ.

ಕೆಲವು ಎಚ್ಚರಿಕೆಗಳು

ಕೆಲವು ಎಚ್ಚರಿಕೆಗಳು

*ಎಂದಿಗೂ ಉಗುರುಗಳನ್ನು ಕಷ್ಟದ ಕೆಲಸಗಳಿಗೆ ಬಳಸಬೇಡಿ. ಉದಾಹರಣೆಗೆ ಡಬ್ಬಿಯ ಮುಚ್ಚಳ ತೆರೆಯಲು. ಇದಕ್ಕೆ ಸರಳ ಸನ್ನೆಗಳನ್ನು ಬಳಸಿರಿ.

*ಉಗುರುಗಳನ್ನು ಹಲ್ಲುಗಳಿಂದ ಕಚ್ಚಬೇಡಿ.

*ಒಂದು ಹಂತಕ್ಕಿಂತ ಹೆಚ್ಚು ಉದ್ದವಾಗಿ ಬಿಡಬೇಡಿ.

*ಉಗುರಿನ ತುದಿ ಚರ್ಮ ಅಂಟಿದ್ದಲ್ಲಿಂದ ಕೊಂಚವೇ ಹೊರಗಿರುವುದು ಅತ್ಯಂತ ಆರೋಗ್ಯಕರ

*ಉಗುರುಗಳ ಕೆಳಭಾಗದ ಕೊಳೆಯನ್ನು ತೆಗೆಯುವ ಮುನ್ನ ಬೆರಳುಗಳನ್ನು ಉಗುರುಬೆಚ್ಚನೆಯ ನೀರಿನಲ್ಲಿ, ಸಾಧ್ಯವಾದರೆ ಲಿಂಬೆ ಅಥವಾ ಶಿರ್ಕಾ ಸೇರಿಸಿದ ನೀರಿನಲ್ಲಿ ಕೊಂಚಕಾಲ ಮುಳುಗಿಸಿ, ಬಳಿಕ ನಿಧಾನವಾಗಿ ತೆಗೆಯಿರಿ. ಈ ಕಾರ್ಯಕ್ಕೆ ಸೂಕ್ತವಾದ ಸಾಧನ ಬಳಸಿ, ಟೂಥ್ ಪಿಕ್ ಬೇಡ.

ಕೆಲವು ಎಚ್ಚರಿಕೆಗಳು

ಕೆಲವು ಎಚ್ಚರಿಕೆಗಳು

*ಉಗುರಿನಲ್ಲಿ ಕೆರೆದು ತೆಗೆಯುವ ಕೆಲಸವನ್ನು ಮಾಡಬೇಡಿ.

*ಉಗುರಿಗೆ ಹಚ್ಚಿದ ಬಣ್ಣವನ್ನು ಕೆರೆದು ತೆಗೆಯಬೇಡಿ, ಇದಕ್ಕೆ ಲಭ್ಯವಿರುವ ದ್ರಾವಣವನ್ನು ಬಳಸಿ. ಬಣ್ಣ ತೆಗೆದ ಕೂಡಲೇ ತೊಳೆದುಕೊಳ್ಳುವುದು ಅಗತ್ಯ. ಇಲ್ಲದಿದ್ದರೆ ಈ ರಾಸಾಯನಿಕ ಉಗುರಿನ ಹೊಳಪನ್ನು ಕುಂದಿಸುತ್ತದೆ.

*ಉಗುರಿನ ಮೇಲಿನ ಚರ್ಮ ಬಿರಿಬಿಟ್ಟಿದೆಯೇ, ಪೊರೆಯಂತೆ ಏಳುತ್ತಿದೆಯೇ ಗಮನಿಸಿ. ಒಂದು ಚಿಕ್ಕ ಪೊರೆ ಎದ್ದಿದ್ದರೂ ಕೂಡಲೇ ವೈದ್ಯರ ಬಳಿ ಸಲಹೆ ಪಡೆಯಿರಿ. ಏಕೆಂದರೆ ಒಂದರಿಂದ ಪ್ರಾರಂಭವಾದುದು ಹತ್ತೂ ಬೆರಳುಗಳನ್ನು ಆವರಿಸಲು ಕೆಲವೇ ದಿನಗಳು ಸಾಕು.

ಕೆಲವು ಎಚ್ಚರಿಕೆಗಳು

ಕೆಲವು ಎಚ್ಚರಿಕೆಗಳು

*ಉಗುರುಗಳ ಅಡಿಯಲ್ಲಿ ಮೋಡ ಕವಿದಂತೆ, ಉಗುರು ಪ್ರಾರಂಭವಾದಲ್ಲಿರುವ ಅರ್ಧಚಂದ್ರಾಕೃತಿಯ ಬಿಳಿಭಾಗ ದೊಡ್ಡದಾಗಿದ್ದರೆ ಕೂಡಲೇ ವೈದ್ಯರಿಗೆ ತೋರಿಸಿ ಸಲಹೆ ಪಡೆಯಿರಿ. ಇವು ಅನಾರೋಗ್ಯದ ಲಕ್ಶಣಗಳಾಗಿವೆ.

*ಉಗುರುಗಳಿಗೆ ಅತಿ ಬಿಸಿಯನ್ನು ತಾಗಿಸಬೇಡಿ. ಇದು ನಮ್ಮ ಅನುಭವಕ್ಕೆ ಬರದೇ ಇದ್ದರೂ ಉಗುರಿನ ಬುಡ ಶಿಥಿಲವಾಗುತ್ತದೆ.

English summary

Home Remedies For Shiny And Beautiful Nails

Shiny nails are the reflection of women's beauty and cleanliness. It also represents one's health condition. Dull nails can also be linked to serious health conditions like malnutrition, vitamin deficiency and various skin disorders. So, it is necessary to take good care of your nails.
X
Desktop Bottom Promotion