For Quick Alerts
ALLOW NOTIFICATIONS  
For Daily Alerts

ಮುಖದ ಸುಕ್ಕುಗಳನ್ನು ಕಡಿಮೆ ಮಾಡುವುದು ಹೇಗೆ?

By Deepak M
|

ಮುಖವನ್ನು ಕಾಡುವ ಸಮಸ್ಯೆಗಳು ಒಂದೇ, ಎರಡೇ! ಅದರಲ್ಲು ಸುಕ್ಕುಗಳು ಬಂದರಂತು ಮುಗಿಯಿತು. ಅವರಿಗೆ ವಯಸ್ಸಾದ ಹಾಗೆ ಕಾಣಲು ಆರಂಭಿಸುತ್ತಾರೆ. ಸಾಮಾನ್ಯವಾಗಿ ಸುಕ್ಕುಗಳು ವಯೋಸಹಜವಾಗಿ ಕಂಡು ಬರುತ್ತವೆ.

ಆದರೆ ಇಂದಿನ ಒತ್ತಡದ ಪ್ರಪಂಚದಲ್ಲಿ ಇದು ಕಡಿಮೆ ಪ್ರಾಯದಲ್ಲಿರುವವರಿಗು ಸಹ ಕಂಡು ಬರುತ್ತದೆ. ಒಂದು ಬಗೆಯಲ್ಲಿ ನಾವು ಈ ಸುಕ್ಕಿಗೆ ಧನ್ಯವಾದ ಸಲ್ಲಿಸಬೇಕು ಏಕೆಂದರೆ ನಮ್ಮ ವಯಸ್ಸಾದಾಗ ಹೇಗೆ ಕಾಣಿಸುತ್ತೇವೆ ಎಂಬುದನ್ನು ಇದು ನಮಗೆ ಮೊದಲೇ ತೋರಿಸುತ್ತದೆ.

ಪ್ರಪಂಚದಲ್ಲಿ ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ಸುಂದರವಾದ ತ್ವಚೆಯನ್ನು ಪಡೆದುಕೊಂಡೆ ಹುಟ್ಟಿರುವುದಿಲ್ಲ. ಸುಕ್ಕುಗಳು ಸಮಸ್ಯೆಗಳ ಕಾರಣದಿಂದಾಗಿ ನಮ್ಮ ಮುಖದ ಮೇಲೆ ಕಂಡು ಬರುತ್ತದೆ.

How to Reduce Facial Wrinkles

ಇಂದು ವಯಸ್ಸಾದಂತೆ ಕಾಣದಿರಲು ಹಲವಾರು ಆಂಟಿ-ಏಜಿಂಗ್ ಉತ್ಪನ್ನಗಳು ಮತ್ತು ಚಿಕಿತ್ಸೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಪ್ರತಿಯೊಬ್ಬರು ತಾವು ಇತರಿರಿಗಿಂತ ಅತ್ಯುತ್ತಮವಾದ ಉತ್ಪನ್ನವನ್ನೆ ನೀಡುತ್ತಿದ್ದೇವೆ ಎಂದು ಪ್ರಮಾಣ ಮಾಡುತ್ತಾರೆ. ಆದರೆ ಇವುಗಳಲ್ಲಿ ಯಾವುದು ಸರಿ ಎಂದು ನಾವು ಹೇಗೆ ನಿರ್ಧರಿಸಬಹುದು?

ಕಾಂತಿಯುತ ತ್ವಚೆಗಾಗಿ ಇಲ್ಲಿದೆ ಪರಿಣಾಮಕಾರಿ ಸಲಹೆ

ಮೂಲತಃ ಸುಕ್ಕುಗಳಿಗೆ ಚಿಕಿತ್ಸೆ ನೀಡುವುದನ್ನು ಈ ಕೆಳಕಂಡ ವಿಭಾಗಗಳಲ್ಲಿ ವಿಂಗಡಿಸಬಹುದು.

ಕಾಸ್ಮೆಟಿಕ್ ಚಿಕಿತ್ಸೆ:

ಈ ಚಿಕಿತ್ಸೆಯು ಈ ಕೆಳಕಂಡ ಅಂಶಗಳನ್ನು ಒಳಗೊಂಡಿರುತ್ತದೆ:

1) ಬೊಟಕ್ಸ್: ಇದು ಸುಕ್ಕುಗಳನ್ನು ನಿವಾರಿಸಲು ವಿಶ್ವದಲ್ಲಿಯೇ ಅತ್ಯುತ್ತಮವೆಂದು ಮಾನ್ಯತೆ ಪಡೆದ ಚಿಕಿತ್ಸೆಯಾಗಿದೆ. ಈ ಚಿಕಿತ್ಸೆಗೆ ಕೇವಲ 15 ನಿಮಿಷದ ಅವಧಿ ಮಾತ್ರ ತಗುಲುತ್ತದೆ. ಸುಕ್ಕುಗಳ ಕೆಳಗೆ ಇರುವ ಸ್ನಾಯುಗಳಿಗೆ ವಿಶ್ರಾಂತಿಯನ್ನು ನೀಡಲು ಒಂದು ಸಣ್ಣ ಇಂಜೆಕ್ಷನ್ ನೀಡಿ ಸುಕ್ಕನ್ನು ನಿವಾರಿಸಲಾಗುತ್ತದೆ. ಇದರಿಂದ ಕೇವಲ 7 ರಿಂದ 14 ದಿನಗಳಲ್ಲಿ ನೀವು ಗಣನೀಯವಾದ ಬದಲಾವಣೆಗಳನ್ನು ನೋಡಬಹುದು. ಇದರ ಪರಿಪೂರ್ಣ ಬದಲಾವಣೆಯನ್ನು ನೋಡಲು 4 ತಿಂಗಳ ಅವಧಿಯು ಬೇಕಾಗುತ್ತದೆ.

ಈ ಚಿಕಿತ್ಸೆಗೆ ತಗುಲುವ ಸಮಯ ಮತ್ತು ಇದರಿಂದ ದೊರೆಯುವ ಪ್ರಯೋಜನದ ಸಲುವಾಗಿ ವಿಶ್ವದಲ್ಲಿ ಅತಿ ಹೆಚ್ಚು ಮಂದಿ ಜನರು ಈ ಚಿಕಿತ್ಸೆಗೆ ಮೊರೆ ಹೋಗುತ್ತಿದ್ದಾರೆ. ಆದರೆ ಇದರ ಜೊತೆಗೆ ಕೆಲವೊಂದು ಅಡ್ಡ ಪರಿಣಾಮಗಳು ಸಹ ಬಳುವಳಿಯಾಗಿ ಬರುತ್ತವೆ. ಅವು ದೃಷ್ಟಿ ಮಂದವಾಗುವಿಕೆ, ಬಾಯಿ ಒಣಗುವಿಕೆ, ಸುಸ್ತು, ತಲೆ ನೋವು, ಅಲರ್ಜಿಯ ದುಷ್ಪರಿಣಾಮಗಳು, ಊತ ಅಥವಾ ಇಂಜೆಕ್ಷನ್ ನೀಡಿದ ಭಾಗದಲ್ಲಿ ಕೆಂಪಗಾಗುವಿಕೆ ಇತ್ಯಾದಿಗಳನ್ನು ನಾವು ಕಾಣಬಹುದು. ಕೆಲವೊಂದು ಅಡ್ಡ ಪರಿಣಾಮಗಳು ವಾರದೊಳಗೆ ಹೊರಟು ಹೋಗುತ್ತವೆ. ಆದರೆ ಕೆಲವೊಂದು 6 ವಾರಗಳ ಕಾಲ ಇರುತ್ತವೆ. ಈ ಚಿಕಿತ್ಸೆಗೆ ನೀವು ಒಳಗಾಗುವ ಮೊದಲು ತಙ್ಞ ವೈಧ್ಯರಿಂದ ಅಗತ್ಯ ಸಲಹೆ ಪಡೆಯುವುದು ಉತ್ತಮ.

2). ಕೆಮಿಕಲ್ ಪೀಲ್:
ಹೆಸರೇ ಸೂಚಿಸುವಂತೆ ಇದರಲ್ಲಿ ಮುಖದ ಮೇಲಿರುವ ತ್ವಚೆಯ ಪೊರೆಯನ್ನು ತೆಗೆಯಲು ರಾಸಾಯನಿಕಗಳನ್ನು ಲೇಪಿಸಲಾಗುತ್ತದೆ. ನಂತರ ಅದು ಒಣಗುವವರೆಗು ಕಾದು, ಆ ರಾಸಾಯನಿಕ ಪೊರೆಯನ್ನು ಮುಖದಿಂದ ನಯವಾಗಿ ಬೇರ್ಪಡಿಸಲಾಗುತ್ತದೆ. ಹೀಗೆ ಮಾಡಿದ ನಂತರ ತ್ವಚೆಯು ಒಂದು ಉತ್ತಮ ಸ್ವರೂಪವನ್ನು ಪಡೆದುಕೊಂಡು ಸುಕ್ಕು ರಹಿತವಾಗಿ ಮಾರ್ಪಡುತ್ತದೆ.

ತುಟಿಯ ರಂಗು ಗುಲಾಬಿ ಬಣ್ಣದಂತೆ ಕಂಗೊಳಿಸಬೇಕೆ?

3). ಡರ್ಮಬ್ರೆಸಿನ್:
ಡರ್ಮಬ್ರೆಸಿನ್‍ನಲ್ಲಿ ಮುಖದ ಮೇಲಿನ ಸುಕ್ಕಾದ ತ್ವಚೆಯನ್ನು ವಿದ್ಯುತ್ ಚಾಲಿತ ಸಾಧನದ ಸಹಾಯದಿಂದ ತೆಗೆದು ಹಾಕಲಾಗುತ್ತದೆ. ಈ ಚಿಕಿತ್ಸೆ ಪಡೆದ ನಂತರ ತ್ವಚೆಯು ಮತ್ತಷ್ಟು ಮೃದು ಮತ್ತಷ್ಟು ಹೊಳಪನ್ನು ಪಡೆದುಕೊಳ್ಳುತ್ತದೆ. ಆದರೆ ಈ ಚಿಕಿತ್ಸೆಯು ಆಳವಾದ ಸುಕ್ಕು ಮತ್ತು ಗೆರೆಗಳ ವಿಚಾರದಲ್ಲಿ ಪ್ರಯೋಜನಕ್ಕೆ ಬರುವುದಿಲ್ಲ. ಡರ್ಮಬ್ರೆಸಿನ್‍‍ನಿಂದ ಮುಖದ ತ್ವಚೆಯ ಬಣ್ಣದಲ್ಲಿ ಶಾಶ್ವತ ಬದಲಾವಣೆ ಮತ್ತು ಗುರುತುಗಳು ಉಂಟಾಗುವಂತಹ ಅಡ್ಡಪರಿಣಾಮಗಳು ಕಂಡು ಬರುತ್ತವೆ.

4) ಲೇಸರ್ ರೀಸರ್ಫೇಸಿಂಗ್:
ಇದು ಸುಕ್ಕುಗಳನ್ನು ನಿವಾರಿಸಲು ಇರುವ ಚಿಕಿತ್ಸೆಗಳಲ್ಲಿಯೇ ಅತ್ಯಂತ ಆಧುನಿಕವಾದುದು. ಈ ಚಿಕಿತ್ಸೆಯಲ್ಲಿ ಭಾದಿತ ತ್ವಚೆಯನ್ನು ಪದರ ಪದರವಾಗಿ ತೆಗೆಯಲಾಗುತ್ತದೆ. ಇದಕ್ಕಾಗಿ ಕಾರ್ಬನ್‍ಡೈಯಾಕ್ಸೈಡ್ ಲೇಸರ್ ಬಳಸುವುದರಿಂದ ತ್ವಚೆಯಲ್ಲಿ ಹೈಪೊಪಿಗ್ಮೆಂಟೇಷನ್ ಸಮಸ್ಯೆಗಳು ಅಂದರೆ, ಸುಕ್ಕು ತೆಗೆದ ಭಾಗವು ಎದ್ದು ಕಾಣುವುದಿಲ್ಲ. ಈ ಚಿಕಿತ್ಸೆಗೆ ಲೇಸರ್ ಪೀಲ್ ಅಥವಾ ಲೇಸರ್ ವೇಪೊರೈಜೇಷನ್ ಎಂದು ಸಹ ಕರೆಯಲಾಗುತ್ತದೆ.

ಮುಖದ ಸುಕ್ಕುಗಳು ; ವೈಧ್ಯಕೀಯ ಚಿಕಿತ್ಸೆಗಳು

1) ಆಲ್ಫಾ ಹೈಡ್ರಾಕ್ಸಿ ಆಮ್ಲಗಳು (ಎ‍ಎ‍ಚ್‍ಎ‍ಗಳು); ಇವುಗಳನ್ನು ಹಾಲು ಮತ್ತು ಹಣ್ಣಿನಲ್ಲಿರುವ ಸಕ್ಕರೆ ಅಂಶಗಳಿಂದ ತಯಾರಿಸಿರಲಾಗುತ್ತದೆ. ತ್ವಚೆಯನ್ನು ಭೇದಿಸಿಕೊಂಡು ಹೋಗುವ ಇವುಗಳ ಗುಣವು, ಇದಕ್ಕೆ ಹಲವಾರು ತ್ವಚಾ ರಕ್ಷಣೆಯ ಉತ್ಪನ್ನಗಳಲ್ಲಿ ಸ್ಥಾನವನ್ನು ಸಂಪಾದಿಸುವಂತೆ ಮಾಡಿದೆ. ಗ್ಲೈಕೊಲಿಕ್ ಮತ್ತು ಲ್ಯಾಕ್ಟಿಕ್ ಆಮ್ಲಗಳು ಎ‍ಎ‍ಚ್‍ಎ‍ಗಳಲ್ಲಿ ಸಾಮಾನ್ಯವಾಗಿ ಬಳಕೆಯಾಗುತ್ತವೆ. ಇದನ್ನು ಒಮ್ಮೆ ತ್ವಚೆಗೆ ಲೇಪಿಸಿಕೊಂಡರೆ ಸಾಕು, ಅವುಗಳು ತ್ವಚೆಯ ಮೇಲ್ಪದರ ಮೇಲೆ ಪ್ರಕ್ರಿಯೆಗೊಳಪಟ್ಟು, ತ್ವಚೆಯಲ್ಲಿ ಹೊಸ ಚರ್ಮದ ಕೋಶಗಳು ಬೆಳವಣಿಗೆಯಾಗುವಂತೆ ಪ್ರೇರೇಪಿಸುತ್ತವೆ. ಇದರಿಂದಾಗಿ ತ್ವಚೆಯು ಸಧೃಡ ಮತ್ತು ಮೃದುವಾಗುತ್ತದೆ.

2) ವಿಟಮಿನ್ ಎ ಆಮ್ಲಗಳು: ವಿಟಮಿನ್ ಎಯನ್ನು ಒಳಗೊಂಡಿರುವ ಕ್ರೀಮ್‍ಗಳು ಸುಕ್ಕನ್ನು ನಿವಾರಿಸಲು ಉಪಯೋಗಕ್ಕೆ ಬರುತ್ತವೆ. ಮೊದಮೊದಲು ತ್ವಚೆ ಕೆಂಪಗಾಗುವುದು ಮತ್ತು ಸುಲಿದು ಬರುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಆದರೆ ತಙ್ಞರ ಮಾರ್ಗದರ್ಶನದಲ್ಲಿ ಇ್ವುಗಳನ್ನು ಬಳಸಿದರೆ, ನಿಜಕ್ಕು ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು.

ಮುಖದ ಸುಕ್ಕುಗಳು: ಪ್ರಾಕೃತಿಕ ಪರಿಹಾರೋಪಾಯಗಳು

ಸುಕ್ಕುಗಳನ್ನು ನಿವಾರಿಸಲು ಜೇನು ತುಪ್ಪ, ಕೆನೆ ಮತ್ತು ಆಲೀವ್ ಎಣ್ಣೆಯ ಮಿಶ್ರಣವನ್ನು ಬಳಸಬಹುದು.

ನಿಂಬೆ ಹಣ್ಣಿನ ರಸವನ್ನು ಸುಕ್ಕುಗಳಿರುವ ಭಾಗಕ್ಕೆ ಆಗಾಗ್ಗೆ ಲೇಪಿಸುತ್ತಿದ್ದರೆ, ಸುಕ್ಕುಗಳಿರುವ ಭಾಗದಲ್ಲಿರುವ ಗೆರೆಗಳು ಮತ್ತು ಕಲೆಗಳು ಕಳೆಗುಂದಿ, ಸುಕ್ಕುಗಳು ಎದ್ದು ಕಾಣದಂತೆ ಮಾಡುತ್ತವೆ.

ಕಬ್ಬಿನ ಹಾಲಿನಲ್ಲಿ ಹರಿಶಿಣವನ್ನು ಮಿಶ್ರಣ ಮಾಡಿ ಅದನ್ನು ತ್ವಚೆಗೆ ಲೇಪಿಸಿ, ಕೆಲ ನಿಮಿಷಗಳ ಕಾಲ ಬಿಡಿ.

ನಿಮ್ಮ ಮುಖವನ್ನು ಹೆಚ್ಚಿಗೆ ತೊಳೆಯ ಬೇಡಿ. ಇದರಿಂದ ತ್ವಚೆಯಲ್ಲಿರುವ ಸ್ವಾಭಾವಿಕ ತೈಲವನ್ನು ಬರಿದು ಮಾಡಿ, ಮುಖದ ಮೇಲೆ ಗೆರೆಗಳು ಕಾಣುವಂತೆ ಮಾಡುತ್ತದೆ.

ಧೂಮಪಾನ ಮಾಡಬೇಡಿ. ಏಕೆಂದರೆ ಧೂಮಪಾನ ಮಾಡುವುದರಿಂದ ತ್ವಚೆಗೆ ಅಗತ್ಯವಾಗಿರುವ ರಕ್ತದ ಪೂರೈಕೆಯು ಕಡಿಮೆಯಾಗುತ್ತದೆ. ಮುಂದೆ ಇದು ಸುಕ್ಕುಗಳಿಗೆ ಕಾರಣವಾಗುತ್ತದೆ.

ಯಾವಾಗಲು ಸಮತೋಲಿತ ಆಹಾರವನ್ನೆ ಸೇವಿಸಿ ಮತ್ತು ಯಥೇಚ್ಛವಾಗಿ ನೀರನ್ನು ಸೇವಿಸಿ.

ನಿಮ್ಮ ತ್ವಚೆಯ ಆರೋಗ್ಯಕ್ಕಾಗಿ ಮೊಯಿಶ್ಚರೈಸರನ್ನು ಬಳಸಿ ಮತ್ತು ಯಾವುದೇ ಕಾರಣಕ್ಕು ಸನ್‍ಸ್ಕ್ರೀನ್ ಲೋಷನ್ ಹಚ್ಚದೆ ಬಿಸಿಲಿನಲ್ಲಿ ಓಡಾಡಬೇಡಿ.

ಪರಿಹಾರಕ್ಕಿಂತ ನಿಯಂತ್ರಣವೇ ಹೆಚ್ಚು ಪ್ರಯೋಜನಕಾಗಿ ಎಂಬುದನ್ನು ಮನಗಾಣಿರಿ. ನಿಮಗೆ ಸುಕ್ಕು ಬರುವವರೆಗು ಕಾಯುತ್ತ ಕೂರುವ ಬದಲು ಈಗಲೇ ಎಚ್ಚೆತ್ತುಕೊಂಡು ಸುಕ್ಕು ಬರದಂತೆ ತಡೆಗಟ್ಟಿ. ನಿಮ್ಮ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಿ. ಇದರಿಂದ ನಿಮ್ಮ ಸೌಂದರ್ಯವಷ್ಟೇ ಅಲ್ಲ, ವರ್ಚಸ್ಸು ಸಹ ವೃದ್ಧಿಸುತ್ತದೆ. ಏನಂತೀರಿ?

Story first published: Saturday, May 3, 2014, 16:07 [IST]
X
Desktop Bottom Promotion